ಬೆಂಗಳೂರು: ನಾನೂ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ. ನಮ್ಮಲ್ಲಿ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಮಾಡಲ್ಲ, ಯಾರು ಸಮರ್ಥರಿದ್ದಾರೆ ಅಂಥವರನ್ನು ಮುಖ್ಯಮಂತ್ರಿ ಮಾಡ್ತಾರೆ. ನಾನು ಯಾಕೆ ರಾಜಕೀಯ ಮಾಡ್ತಾ ಇದ್ದೀನಿ ಹೇಳಿ. ಅಧಿಕಾರಕ್ಕೆ ಬರಬೇಕು ಅಂತ ತಾನೇ ರಾಜಕಾರಣ ಮಾಡ್ತಿರೋದು ಎಂದು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಜಿ. ಪರಮೇಶ್ವರ್ ಹೇಳಿದರು.
ತಾಲ್ಲೂಕಿನ ಪುರವರ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಡಾ.ಜಿ. ಪರಮೇಶ್ವರ ಸಾಧನೆಗಳ ಹೆಜ್ಜೆ ಗುರುತು ಪುಸ್ತಕಗಳ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಗಳ ಆಕಾಂಕ್ಷಿಗಳ ಪಟ್ಟಿಯಲ್ಲಿ 10 ಮಂದಿ ಇದ್ದಾರೆ. ಅದರಲ್ಲಿ ನಾನೂ ಒಬ್ಬ ಎಂದು ಹೇಳುವ ಮೂಲಕ ಆಕಾಂಕ್ಷಿಗಳ ಪಟ್ಟಿಗೆ ಸೇರ್ಪಡೆಯಾದರು.
ಇದನ್ನು ಓದಿ: ರಾಜ್ಯದಲ್ಲಿವೆ 1316 ಅನಧಿಕೃತ ಶಾಲೆಗಳು!
ಬಿಜೆಪಿ ಸರ್ಕಾರ ಮತಕ್ಕಾಗಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಸಲ್ಲದ ಭರವಸೆ ನೀಡುತ್ತಿದ್ದಾರೆ. ಬಜೆಟ್ ಸಂದರ್ಭದಲ್ಲಿ ಯಾವುದೇ ಘೋಷಣೆಗಳನ್ನು ಮಾಡುವಂತಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಬಜೆಟ್ ಸಮಯದಲ್ಲಿ ಘೋಷಣೆಗಳನ್ನು ಮಾಡದೆ ಬಜೆಟ್‌ನಲ್ಲಿ ಯೋಜನೆಗಳನ್ನು ಸೇರಿಸಿ ಅದಕ್ಕೆ ಹಣ ಬಿಡುಗಡೆ ಮಾಡಬೇಕು ಎಂದರು.
ನಮ್ಮ ಗುರಿ ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ನಂತರ ಮುಖ್ಯಮಂತ್ರಿಯಾರಾಗುತ್ತಾರೆ ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ರಾಜ್ಯದಲ್ಲಿ 123 ಶಾಸಕ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಜೆಡಿಎಸ್ ನವರು ಹೇಳುತ್ತಾರೆ. ಮೊದಲು 224 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಹಾಕಲಿ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ