ಬೆಂಗಳೂರು: ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ಬಿಎಂಆರ್ಸಿಎಲ್ ಮಹತ್ವದ ಮಾಹಿತಿ ನೀಡಿದೆ. ಮೆಟ್ರೋ ಪ್ರಯಾಣಿಕರ ಹಿತದೃಷ್ಟಿಯಿಂದ ಮೆಟ್ರೋ ಹೊಸ ದರದ ಸ್ಲ್ಯಾಬ್ ಪ್ರಕಟಿಸಲಿದೆ ಎಂದು ಮೆಟ್ರೋ ಎಂ.ಡಿ.ಮಹೇಶ್ವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ ಏರಿಕೆ ಸಂಬಂಧ ಮೂರು ದಿನಗಳ ಹಿಂದೆ ಬೋರ್ಡ್ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ದರ ಏರಿಕೆಯ ನಿರ್ಧಾರವನ್ನು ಮಾಡಲಾಗಿತ್ತು. ಆದರೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದರ ಇಳಿಕೆಗೆ ಮುಂದಾಗಿದ್ದೇವೆ ಎಂದರು.
ಇದನ್ನೂ ಓದಿ: ನಮ್ಮ ಮೆಟ್ರೊ : ಪ್ರಯಾಣ ದರ ಹೆಚ್ಚಿಸಿದ್ದು ಬಿಎಂಆರ್‌ಸಿಎಲ್; ನಮ್ಮ ಸರ್ಕಾರ ಅಲ್ಲ – ಸಿಎಂ ಸಿದ್ದರಾಮಯ್ಯ
ಟಿಕೆಟ್ ದರ ಏರಿಕೆಯಲ್ಲಿ ಸಡಿಲಿಕೆ ನೀಡುತ್ತೇವೆ. ಏರಿಕೆ ದರ ಮರುಪರಿಶೀಲನೆಗೆ ಸಿಎಂ ಸಿದ್ದರಾಮಯ್ಯ ಸಹ ಸೂಚಿಸಿದ್ದಾರೆ. ಯಾವ ಸ್ಟೇಷನ್ಗೆ ದರ ದುಪ್ಪಟ್ಟಾಗಿದೆ ಅಲ್ಲಿ ಪರಿಶೀಲಿಸುತ್ತೇವೆ. ಇನ್ನು ಮೂರು ದಿನಗಳ ಒಳಗಾಗಿ ಸಭೆ ಮಾಡಿ ಈ ಬಗ್ಗೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು.
90 ರಿಂದ 100% ದರ ಹೆಚ್ಚಾಗಿದ್ದಲ್ಲಿ ಸರಿ ಮಾಡುತ್ತೇವೆ. ಶೇ.46 ಟಿಕೆಟ್ ದರ ಏರಿಕೆಯಲ್ಲಿ ಕಡಿಮೆಯಾಗಲ್ಲ. ಈ ಪರಿಷ್ಕೃತ ದರ ನಾಳೆಯಿಂದಲೇ ಅನ್ವಯವಾಗಲಿದೆ. ಕೆಲವು ಮೆಟ್ರೋ ಸ್ಟೇಜ್ನಲ್ಲಿ ಭಾರೀ ದರ ಏರಿಕೆಯಾಗಿರುವುದರ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬರುತ್ತಿವೆ ಎಂದು ಹೇಳಿದರು.