ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ‘ಶೇ. 40 ಕಮಿಷನ್’ ಆರೋಪ ಕುರಿತು ಬಿಜೆಪಿಯ ಇಬ್ಬರು ಮಾಜಿ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಎಂಜಿನಿಯರ್ ಹೆಸರನ್ನು ಉಲ್ಲೇಖಿಸಲಾಗಿದೆ.
ಆಯೋಗಕ್ಕೆ ಚಿತ್ರದುರ್ಗದ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ, ಕಾರವಾರದ ರೂಪಾಲಿ ನಾಯ್ಕ್ ಮತ್ತು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಇಂಜಿನಿಯರ್ ಎಸ್ ಎಫ್ ಪಾಟೀಲ್ ವಿರುದ್ಧದ ಪ್ರತ್ಯೇಕ ಕಿಕ್ ಬ್ಯಾಕ್ ಆರೋಪಗಳು ಸತ್ಯ ಎಂಬುದು ತಿಳಿದುಬಂದಿದೆ. ಇದು ಗುತ್ತಿಗೆದಾರರ ಸಾಕ್ಷ್ಯವನ್ನು ಆಧರಿಸಿದೆ.
ಈ ಸಂಬಂಧ ಜುಲೈ 5, 2024 ರಂದು, ಗುತ್ತಿಗೆದಾರ ಆರ್ ಮಂಜುನಾಥ್ ಅವರು ಆಯೋಗದ ಮುಂದೆ ಹೇಳಿಕೆ ನೀಡಿದ್ದರು. ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.
ಇದನ್ನೂ ಓದಿ: ಉತ್ತರ ಪ್ರದೇಶ | ಸಿಎಂ ಯೋಗಿ ಆದಿತ್ಯನಾಥ್ ಅಮಾನವೀಯ, ಅಕ್ರಮ ಕೃತ್ಯ ಎಸಗುತ್ತಿದೆ – ಸುಪ್ರೀಂ ಕೋರ್ಟ್
2019ರಿಂದ 2023ರ ಅವಧಿಯಲ್ಲಿ ತಿಪ್ಪಾರೆಡ್ಡಿ ಚಿತ್ರದುರ್ಗ ಶಾಸಕರಾಗಿದ್ದಾಗ ಕಟ್ಟಡ ಕಾಮಗಾರಿಗೆ ಶೇ.5-7, ರಸ್ತೆ ಕಾಮಗಾರಿಗೆ ಶೇ.15-20, ಸಣ್ಣ ನೀರಾವರಿಗೆ ಶೇ.20-25ರಷ್ಟು ಕಮಿಷನ್ ನೀಡಬೇಕು ಎಂಬ ನಿಯಮ ಜಾರಿಯಲ್ಲಿತ್ತು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಹಾಲಿ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ರೂ. 2.8 ಕೋಟಿ ಮೊತ್ತದ ಪಿಡಬ್ಲ್ಯುಡಿ ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದು, ವರ್ಕ್ ಆರ್ಡರ್ ಬಂದ ನಂತರ ಶೇ.5-7ರಷ್ಟು ಕಮಿಷನ್ ನೀಡಲು ನಿರಾಕರಿಸಿದ್ದೆ. ಕಾಮಗಾರಿ ಆರಂಭಿಸಲು ಶಾಸಕರು ಸಹಕರಿಸಲಿಲ್ಲ. ಯಾವುದೇ ಆಯ್ಕೆಯಿಲ್ಲದೆ ಅಧಿಕಾರಿಗಳ ಒತ್ತಡಕ್ಕೆ ಮಣಿದು ರೂ. 10 ಲಕ್ಷಗಳನ್ನು ತಿಪ್ಪಾರೆಡ್ಡಿ ಅವರ ಮನೆಗೆ ತಲುಪಿಸಿದ ನಂತರ ಕೆಲಸ ಆರಂಭಕ್ಕೆ ಅವಕಾಶ ನೀಡಲಾಯಿತು.
ಇದೇ ರೀತಿ ರೂ. 11.5 ಕೋಟಿ ಮೊತ್ತದ ಆರೋಗ್ಯ ಇಲಾಖೆ ಟೆಂಡರ್ ಗಾಗಿ ರೂ. 25 ಲಕ್ಷ ಕಮಿಷನ್ ನ್ನು ತಿಪ್ಪಾರೆಡ್ಡಿಗೆ ನೀಡಿರುವುದಾಗಿ ಮಂಜುನಾಥ್ ಹೇಳಿದ್ದಾರೆ. ಮಂಜುನಾಥ್ ನೀಡಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಆಯೋಗ, ಕಮಿಷನ್‌ಗೆ ಬೇಡಿಕೆಯಿಟ್ಟಿದ್ದರಿಂದ ಪಾವತಿಸಲಾಗಿದೆ ಎಂದು ಪ್ರಾಥಮಿಕವಾಗಿ ತೀರ್ಮಾನಿಸಿದೆ.
ಇನ್ನೋರ್ವ ಗುತ್ತಿಗೆದಾರ ಮಲ್ಲನಗೌಡ ಸಂಕಗೌಡ ಶನಿ ಅವರು ಅಂದಿನ ಪಿಡಬ್ಲ್ಯುಡಿ ಮುಖ್ಯ ಎಂಜಿನಿಯರ್ ಎಸ್‌ಎಫ್ ಪಾಟೀಲ್‌ಗೆ ಕಿಕ್‌ಬ್ಯಾಕ್ ಪಾವತಿಸಲು ನಿರಾಕರಿಸಿದ ನಂತರ ಬಿಲ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಆಯೋಗದ ಮುಂದೆ ಹೇಳಿಕೆ ನೀಡಿದ್ದಾರೆ. ಪಿಡಬ್ಲ್ಯುಡಿ ಧಾರವಾಡ ವಿಭಾಗದಡಿ ನವಲಗುಂದ, ಕುಂದಗೋಳ ಮತ್ತು ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಕಾಮಗಾರಿಗಳನ್ನು ನಡೆಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 12, 2024 ರಂದು ನಡೆದ ಗುತ್ತಿಗೆದಾರ ಮಾಧವ ಬಾಬು ನಾಯ್ಕ್ ಅವರ ವಿಚಾರಣೆ ವೇಳೆ 2021 ರಲ್ಲಿ ಆಗಿನ ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಮತ್ತು ಅವರ ಸಂಗಡಿಗರು ಕಮಿಷನ್ ನೀಡುವಂತೆ ಕೇಳಿದ್ದರು ಎಂದು ಹೇಳಿಕೆ ನೀಡಿದ್ದಾರೆ. “ಗುದ್ದಲಿ ಪೂಜೆಯನ್ನು ನೆರವೇರಿಸಲು ಶಾಸಕರಿಗೆ ಕಾಮಗಾರಿ ಅಂದಾಜಿನ ಶೇ. 5 ರಿಂದ 10 ರಷ್ಟು ಲಂಚ ಕೇಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಆಯೋಗವು ಸಮಗ್ರ ತನಿಖೆ ನಡೆಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯನ್ನು ಶಿಫಾರಸು ಮಾಡಿದೆ.
ಇದನ್ನೂ ನೋಡಿ: ವಚನಾನುಭವ 24| ನಿಮ್ಮ ತೊತ್ತು ಸೇವೆಯೇ ಸಾಕು | ಗಜೇಶ ಮಸಣಯ್ಯ Janashakthi Media