ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಮಗೆ ಹೇಗೆ ಬೇಕೋ ಹಾಗೆಯೇ ಬಿಬಿಎಂಪಿ ವಾರ್ಡುಗಳನ್ನು ವಿಂಗಡಣೆ ಮಾಡಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಪಕ್ಷದ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿಕೆ ನೀಡಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಗಂಗಾನಗರದಲ್ಲಿ ಇಂದು(ಜುಲೈ 01) ನಡೆದ ಕೆಂಪೇಗೌಡರ 113ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾತನಾಡುವ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ಬರುತ್ತಿದೆ. ವಾರ್ಡ್ ವಿಂಗಡಣೆ ಮಾಡಲಾಗಿದೆ. ನಮಗೆ ಹೇಗೆ ಬೇಕೋ ಹಾಗೆ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕಟ್ಟಾ ಈ ರೀತಿ ಹೇಳಿಕೆ ನೀಡಿದ್ದಾರೆ.
ಬಿಬಿಎಂಪಿ ವಾರ್ಡುಗಳ ಮರುವಿಂಗಡಣೆ ವಿಚಾರವಾಗಿ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದೆ. ಆದರೆ ಇದೀಗ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿಕೆ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ. ಅವರ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಹಿಂದಿನ ಬಿಬಿಎಂಪಿ 198 ವಾರ್ಡುಗಳನ್ನು 243 ವಾರ್ಡುಗಳನ್ನಾಗಿ ವಿಂಗಡಿಸಲಾಗಿದೆ. ಆದರೆ ವಾರ್ಡ್ ವಿಂಗಡಣೆ ಅವೈಜ್ಞಾನಿಕ, ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ವಾರ್ಡುಗಳು ಹೆಚ್ಚಿಸಿದ್ದಾರೆಂದು ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ವಾರ್ಡ್ ವಿಂಗಡಣೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧಾರ ಮಾಡಿದೆ.