ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎಂಟು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಇದರಲ್ಲಿ ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ರಾಜ್ಯಪಾಲರಾಗಿರುವವರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದರ ಜೊತೆಯಲ್ಲಿಯೇ ನೂತನವಾಗಿ ನಾಲ್ಕು ಜನರು ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಕೇಂದ್ರದ ಬಿಜೆಪಿ ಸರಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ್‌ಚಂದ್ ಗೆಹ್ಲೋಟ್ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ರಾಜ್ಯಸಭೆಯ ಬಿಜೆಪಿ ನಾಯಕರಾಗಿರುವ ಗೆಹ್ಲೋಟ್, ಮಧ್ಯಪ್ರದೇಶದ ನಾಗ್ಡಾದವರು. ಸದ್ಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿದ್ದಾರೆ. ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಲೋಕಸಭೆ, ಎರಡು ಬಾರಿ ಬಾರಿ ರಾಜ್ಯ ಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದವರು.
ಕರ್ನಾಟಕದೊಂದಿಗೆ ಇತರೆ ಏಳು ರಾಜ್ಯಗಳ ರಾಜ್ಯಪಾಲರ ನೇಮಕದ ವಿವರ:
ಮಿಜೋರಾಂ ರಾಜ್ಯಪಾಲರಾಗಿರುವ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರನ್ನು ಗೋವಾ ರಾಜ್ಯಕ್ಕೆ ರಾಜ್ಯಪಾಲರಾಗಿ ವರ್ಗಾವಣೆಗೊಂಡಿದ್ದಾರೆ. ಮೂಲತಃ ಕೇರಳ ರಾಜ್ಯದ ಅಲ್ಲಪ್ಪುಂಜ ದವರಾದ ಶ್ರೀಧರನ್ ಪಿಳ್ಳೈ ಅವರು 1954ರಲ್ಲಿ ಜನಿಸಿದವರು. ಆರ್‌ಎಸ್‌ಎಸ್ ಅಂಗಸಂಸ್ಥೆ ಎಬಿವಿಪಿ ಸಂಘಟನೆಯ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಬಿಜೆಪಿ ಪಕ್ಷದಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಸ್ಥಾನವನ್ನು ಅಲಂಕರಿಸಿದ್ದವರು. 2019 ಅಕ್ಟೋಬರ್ ಯಿಂದ ಇಂದಿನವರೆಗೆ ಮಿಜೋರಾಂ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಅವರನ್ನು ಗೋವಾ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿ: ಕರ್ನಾಟಕ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ
ಹರಿಯಾಣದ ರಾಜ್ಯಪಾಲರಾದ ಸತ್ಯದೇವ ನಾರಾಯಣ್ ಆರ್ಯ ಅವರನ್ನು ತ್ರಿಪುರಾರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. 1937ರಲ್ಲಿ ಬಿಹಾರ ರಾಜ್ಯದ ರಾಜ್‌ಘೀರ್ ನಲ್ಲಿ ಜನಿಸಿದ ಇವರು. ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು 2018 ಆಗಸ್ಟ್ ನಿಂದ ಇಂದಿನವರೆಗೆ ಹರಿಯಾಣ ರಾಜ್ಯದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. 2010 ರಿಂದ 2015ರ ಅವಧಿಯಲ್ಲಿ ಬಿಹಾರ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 1995 ರಿಂದ 2015ರವರೆಗೂ ಸತ್ಯದೇವ ನಾರಾಯಣ್ ಆರ್ಯ ಅವರು ರಾಜ್‌ಘರ್ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.
ತ್ರಿಪುರಾ ರಾಜ್ಯಪಾಲರಾದ ರಮೇಶ ಬೈಸ್ ಅವರನ್ನು ಜಾರ್ಖಂಡ್ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಇವರು 1947ರಲ್ಲಿ ಈಗಿನ ಛತ್ತೀಸ್‌ಘಡ ರಾಜ್ಯದ ರಾಯ್‌ಪುರದಲ್ಲಿ ಜನಿಸಿದವರು. 2019 ಜುಲೈ ನಿಂದ ಇಂದಿನವರೆಗೆ ತ್ರಿಪುರ ರಾಜ್ಯದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಯ್‌ಪುರ ಲೋಕಸಭಾ ಕ್ಷೇತ್ರದಿಂದ ಇವರು 1996 ರಿಂದ 2019 ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಟಲ್ ಬಿಹಾರ್ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿವಿಧ ಖಾತೆಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಎರಡು ಅವಧಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಅವರನ್ನು ಹರಿಯಾಣ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಇವರು 1947ರ ಜೂನ್‌ನಲ್ಲಿ ಈಗಿನ ತೆಲಂಗಾಣ ರಾಜ್ಯದ ಹೈದ್ರಾಬಾದ್‌ನಲ್ಲಿ ಜನಿಸಿದ ಇವರು ಸೆಪ್ಟಂಬರ್ 2019 ರಿಂದ ಇಂದಿನ ದಿನದವರೆಗೆ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. 2014 ರಿಂದ 2017ರ ಅವಧಿಯಲ್ಲಿ ಕೇಂದ್ರದ ಕಾರ್ಮಿಕ (ಸ್ವತಂತ್ರ ಖಾತೆ) ಸಚಿವರಾಗಿ ಕೆಲಸ ಮಾಡಿದ್ದಾರೆ. 2014 ರಿಂದ 2019ರ ಅವಧಿಯಲ್ಲಿ ಲೋಕಸಭಾ ಸದಸ್ಯರಾಗಿ ಸಿಕಂದರಾಬಾದ್ ಕ್ಷೇತ್ರದಿಂದ ಪ್ರತಿನಿಧಿಸಿದ್ದರು. ಇದೇ ಕ್ಷೇತ್ರದಿಂದ 1991 ರಿಂದ 1996ರವರೆಗೆ ಹಾಗೂ 1998ರಿಂದ 2004 ರವರೆಗೂ ಬಿಜೆಪಿ ಪಕ್ಷದಿಂದ ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದರು. ಒಟ್ಟು ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಹರಿಬಾಬು ಕಂಬಂಪಟ್ಟಿ ಅವರನ್ನು ಮಿಜೋರಾಂ ರಾಜ್ಯಕ್ಕೆ ನೂತನವಾಗಿ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. 1953ರಲ್ಲಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತಿಮ್ಮಸಮುದ್ರಂ ಪ್ರದೇಶದಲ್ಲಿ ಜನಿಸಿದ ಇವರು ವಿಶಾಖಪಟ್ಟಣಂ ವಿಧಾನ ಕ್ಷೇತ್ರದ ಶಾಸಕರಾಗಿ 1999ರಲ್ಲಿ ಚುನಾಯಿತರಾಗಿದ್ದರು. ವಿಶಾಖಪಟ್ಟಣಂ ಲೋಕಸಭಾ ಕ್ಷೇತ್ರದಿಂದ 2014 ರಿಂದ 2019ರ ಅವಧಿಯಲ್ಲಿ ಬಿಜೆಪಿ ಪಕ್ಷದಿಂದ ಪ್ರತಿನಿಧಿಸಿದ್ದರು. ಅಲ್ಲದೆ ಬಿಜೆಪಿ ಪಕ್ಷದ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದಾರೆ. 2014ರಲ್ಲಿ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮಂಗುಭಾಯಿ ಛಗನ್‌ಭಾಯಿ ಪಟೇಲ್ ಅವರನ್ನು ಮಧ್ಯಪ್ರದೇಶ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಇವರು 1944ರಲ್ಲಿ ಗುಜರಾತ್ ರಾಜ್ಯದ ನವಸರಿ ಪ್ರದೇಶದವರು. 1990 ರಿಂದ 2012ರವರೆಗೆ ಐದು ಅವಧಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2007 ರಿಂದ 2012ರ ಅವಧಿಯಲ್ಲಿ ಸಚಿವರಾಗಿ ಎರಡು ಕಾರ್ಯನಿರ್ವಹಿಸಿದ್ದಾರೆ.
ರಾಜೇಂದ್ರ ವಿಶ್ವನಾಥ ಅರಳೇಕರ್ ಅವರನ್ನು ಹಿಮಾಚಲ ಪ್ರದೇಶಕ್ಕೆ ರಾಜ್ಯಪಾಲರಾಗಿ ನೇಮಕಗೊಳಿಸಲಾಗಿದೆ. 1954ರಲ್ಲಿ ಗೋವಾ ರಾಜ್ಯದ ಪಣಜಿಯಲ್ಲಿ ಜನಿಸಿದ ಇವರು ಬಿಜೆಪಿ ಪಕ್ಷದಿಂದ ಇವರು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಗೋವಾ ರಾಜ್ಯದ ಸಚಿವರಾಗಿಯೂ 2002 ರಿಂದ 2007, 2012 ರಿಂದ 2017ರ ಅವಧಿಯಲ್ಲಿ ವಿಧಾನಸಭೆಯನ್ನು ಪ್ರತಿನಿಧಿಸಿದ್ದರು. 2012ರಿಂದ 2015 ರ ಅವಧಿಯವರೆ ವಿಧಾನಸಭೆಯ ಸಭಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.