ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಓಮಿಕ್ರಾನ್ ತಳಿಯ ಪ್ರಕರಣಗಳು ಸಹ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಇಡೀ ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇಂದು ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕರ್ಫ್ಯೂ ಅನ್ವಯವಾಗುತ್ತದೆ. ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಅತ್ಯವಶ್ಯಕ ಮತ್ತು ತುರ್ತು ಕಾರ್ಯಗಳನ್ನು ಹೊರತುಪಡಿಸಿ ಜನರ ಒಡಾಟವನ್ನು ಕಟ್ಟುನಿಟ್ಟಾಗಿ ನಿಷೇಸಲು ಜಿಲ್ಲಾಡಳಿತಗಳು ಕ್ರಮ ಕೈಗೊಂಡಿವೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ʻʻಯಾವುದೇ ರೀತಿಯ ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ. ಈ ಬಾರಿ ಯಾವುದೇ ಪಾಸ್ಗಳನ್ನು ಜಾರಿ ಮಾಡುವುದಿಲ್ಲ. ಸರಕಾರದ ಆದೇಶದಂತೆ ಗುರುತಿನ ಚೀಟಿ, ಮುಂಗಡವಾಗಿ ಕಾಯ್ದಿರಿಸಿದ್ದ ಪ್ರಯಾಣ ಟಿಕೆಟ್ಗಳು, ಆಸ್ಪತ್ರೆಗೆ ಹೋಗುವವರು, ಅವರ ಸಂಬಂಧಿಕರು ಸೂಕ್ತ ದಾಖಲೆಗಳನ್ನು ಜತೆಯಲ್ಲಿ ಕೊಂಡೊಯ್ಯಬೇಕು. ಸೂಕ್ತ ದಾಖಲೆ ನೀಡಿದರೆ ಮಾತ್ರ ಓಡಾಡುವುದಕ್ಕೆ ಅನುಮತಿ ನೀಡಲಾಗುವುದು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆʼʼ ಎಂದು ಎಚ್ಚರಿಸಿದರು.
ಹೀಗಾಗಿ, ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬರಬಾರದು. ಪೊಲೀಸರಿಗೆ ಸಹಕಾರ ನೀಡಬೇಕು. ಕಳೆದ ಬಾರಿ ಕೂಡ ಜನರು ಸಾಕಷ್ಟು ಸಹಕಾರ ನೀಡಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಹೊಯ್ಸಳ ವಾಹನ ಮತ್ತು ಚೀತಾ ಸಿಬ್ಬಂದಿ ವಾಣಿಜ್ಯ ವ್ಯಾಪಾರ ಸ್ಥಗಿತಗೊಳಿಸಿ ಬಾಗಿಲು ಮುಚ್ಚುವಂತೆ ಎಚ್ಚರಿಕೆ ನೀಡುತ್ತಾರೆ. ಅಲ್ಲದೆ, ಆಯ್ದ ಮೇಲುಸೇತುವೆಗಳು, ಹೆದ್ದಾರಿಗಳ ಅನಿವಾರ್ಯತೆ ನೋಡಿ ಸಂಚಾರ ನಿರ್ಬಂಧಿಸಲಾಗುವುದು. ಸರಕು ವಾಹನ, ಲಾರಿ, ತುರ್ತು ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಅನಗತ್ಯವಾಗಿ ಓಡಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ಅಲ್ಲದೆ, 144 ಸೆಕ್ಷನ್ ಜಾರಿಯಲ್ಲಿರಲಿದೆ. ಹೀಗಾಗಿ, ಅನಗತ್ಯವಾಗಿ ಓಡಾಡುವವರು ಮತ್ತು ಅಗತ್ಯ ವಸ್ತುಗಳ ಖರೀದಿ, ತುರ್ತು ಸೇವೆ ನೆಪ ಮಾಡಿಕೊಂಡು ಪದೇ ಪದೆ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ನಿಯಮ ಉಲ್ಲಂಘಿಸಿದವರ ವಾಹನ ಜಪ್ತಿ ಮಾಡುವುದರೊಂದಿಗೆ ಅವರ ವಿರುದ್ಧ ಸೆಕ್ಷನ್ 188ರಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತುರ್ತು, ಅತ್ಯವಶ್ಯಕ ಸೇವೆಗಳು ಮತ್ತು ಕೋವಿಡ್ ನಿಯಂತ್ರಣ, ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುವ ಎಲ್ಲಾ ರಾಜ್ಯ-ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಮುಂತಾದವುಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ. ಅಕಾರಿಗಳು ಮತ್ತು ಸಿಬ್ಬಂದಿಗಳಿಗೆ ಓಡಾಟಕ್ಕೆ ಅವಕಾಶವಿದೆ.
ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ (ಜನವರಿ 7, 8, 14, 15) ಸಾಮಾನ್ಯ ಜನರಿಗೆ ಬಿಎಂಟಿಸಿ ಬಸ್ ಸೌಲಭ್ಯ ಲಭ್ಯವಿರುವುದಿಲ್ಲ. ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಬಸ್ಗಳು ಸಂಚಾರ ನಡೆಸಲಿವೆ. ಅಗತ್ಯ ಸೇವೆಗಳನ್ನು ನೀಡುವ ಸಿಬ್ಭಂದಿ ಕಚೇರಿಗೆ ತೆರಳಲು ಮಾತ್ರ ಬಸ್ಸು ಸಂಚರಿಸಲಿದೆ. ಅಗತ್ಯ ಸೇವೆಗಳನ್ನು ಒದಗಿಸುವ ಸಿಬ್ಬಂದಿ ಕಚೇರಿಗೆ ಹೋಗಲು ಶೇ 10ರಷ್ಟು ಬಸ್ಸುಗಳು ಸಂಚಾರ ಮಾಡಲಿವೆ. ಕಂಟೈನ್ಮೆಂಟ್ ಝೋನ್ಗಳಲ್ಲಿ ಬಸ್ ಸಂಚಾರವಿರುವುದಿಲ್ಲ. ಅಗತ್ಯ ಸೇವೆಗಳು ಎರಡು ದಿನ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆ ತನಕ ಮಾತ್ರ ಬಸ್ಸು ಸಂಚಾರ ಇರುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು. ಬೋರ್ಡ್/ ಕಾಪೆರ್ರೇಪೊಷನ್ ಸಿಬ್ಬಂದಿಗಳು, ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ ತುರ್ತು ಸೇವೆಗಳ ಸಿಬ್ಬಂದಿ ಬಸ್ನಲ್ಲಿ ಸಂಚಾರ ನಡೆಸಬಹುದಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ, ಲ್ಯಾಬ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇತರ ಸಿಬ್ಬಂದಿಗಳು. ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ಅವರನ್ನು ಚಿಕಿತ್ಸೆ, ಪರೀಕ್ಷೆಗೆ ಕರೆದುಕೊಂಡು ಹೋಗವವರು ಸಂಚಾರ ನಡೆಸಬಹುದು.
ಸರ್ಕಾರಿ/ ಖಾಸಗಿ ಬ್ಯಾಂಕ್, ವಿಮೆ ಕಂಪನಿಗಳ ಸಿಬ್ಬಂದಿಗಳು, ಅಧಿಕಾರಿಗಳ, ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವವರು ಸಂಚರಿಸಬಹುದು. ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಪ್ರಯಾಣಿಸಬಹುದು. ಬಸ್ಸಿನಲ್ಲಿ ಪ್ರಯಾಣಿಸುವ ಎಲ್ಲರೂ ಕಡ್ಡಾಯವಾಗಿ ಐಡಿ ಕಾರ್ಡ್ ತೋರಿಸಬೇಕು. ಸಾಮಾನ್ಯ ಜನರಿಗೆ ಬಸ್ನಲ್ಲಿ ಸಂಚಾರ ನಡೆಸಲು ಅವಕಾಶವಿಲ್ಲ.
ಕೋವಿಡ್ ನಿಯಮ ಪಾಲನೆ ಕಡ್ಡಾಯ:
ಬಸ್ಸಿನ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಿಬ್ಬಂದಿಗಳು ಸ್ಯಾನಿಟೈಸರ್ ಬಳಕೆ ಮಾಡಬೇಕು, ಬಸ್ಸಿನಲ್ಲಿ ಸೀಟು ಇದ್ದರೆ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು, ನಿಗದಿಪಡಿಸಿದ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್ಗಳನ್ನು ನಿಲ್ಲಿಸಬೇಕು, ಎಲ್ಲಾ ಪ್ರಯಾಣಿಕರ ಗುರುತಿನ ಚೀಟಿ ಪರಿಶೀಲನೆ ನಡೆಸಿಯೇ ಬಸ್ಗೆ ಹತ್ತಿಸಿಕೊಳ್ಳಬೇಕು. ನಮ್ಮ ಮೆಟ್ರೋ ರೈಲು ಸಂಚಾರ ಶನಿವಾರ-ಭಾನುವಾರದಂದು ಬೆಳಗ್ಗೆ 8ರಿಂದ ರಾತ್ರಿ 9ರ ತನಕ ಮಾತ್ರ ಸಂಚರಿಸಲಿದೆ.
ಪಾರ್ಕ್ಗಳು ಬಂದ್
ಸಾರ್ವಜನಿಕ ಉದ್ಯಾನಗಳು ಬಂದ್ ಆಗಿರುತ್ತವೆ, ಮಾಹಿತಿ ತಂತ್ರಜ್ಞಾನ ಉದ್ದಿಮೆಗಳು ಒಳಗೊಂಡಂತೆ ಎಲ್ಲಾ ಉದ್ದಿಮೆಗಳ ಕಾರ್ಯಾಚರಣೆಗೆ ವಾರಾಂತ್ಯ ಕರ್ಫ್ಯೂ ಇಂದ ವಿನಾಯತಿ ಇದೆ, ನೌಕರರು ಆಯಾ ಸಂಘ, ಸಂಸ್ಥೆಗಳು ನೀಡುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸಿ ಸಂಚಾರ ನಡೆಸಬಹುದುದು.
ತುರ್ತು ಚಿಕಿತ್ಸೆಗಾಗಿ ಸಂಚರಿಸಬೇಕಾದ ಅಗತ್ಯವಿರುವ ರೋಗಿಗಳು, ರೋಗಿಗಳನ್ನು ಕರೆದುಕೊಂಡು ಹೋಗುವವರು, ಲಸಿಕೆ ಹಾಕಿಸಿಕೊಳ್ಳಲು ಉದ್ದೇಶಿಸಿರುವ ವ್ಯಕ್ತಿಗಳು ದಾಖಲೆ ತೋರಿಸಿ ಸಂಚರಿಸಬಹುದು.
ಬೀದಿಬದಿ ವ್ಯಾಪಾರ-ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಅವಕಾಶ
ಬೇಕರಿ, ಆಹಾರ, ದಿನಸಿ, ಹಣ್ಣು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್ಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸಹ ಅನುಮತಿ ನೀಡಲಾಗಿದೆ. ಸಾರ್ವಜನಿಕ ವಿತರಣೆಯ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿ ಇದೆ.
ಜನರು ತಮ್ಮ ಮನೆಯ ಹೊರಗೆ ಓಡಾಡುವುದನ್ನು ಕಡಿಮೆ ಮಾಡುವುದಕ್ಕಾಗಿ 24×7 ಅವಧಿಯಲ್ಲಿ ಸಾಮಗ್ರಿಗಳನ್ನು ಮನೆಮನೆಗೆ ವಿತರಿಸಲು ಪ್ರೋತ್ಸಾಹಿಸಬೇಕು. ರೆಸ್ಟೋರೆಂಟ್ ಮತ್ತು ಹೋಟೆಲ್ಗಳಲ್ಲಿ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗಲು ಮಾತ್ರ ಅನುಮತಿ ಇದೆ.
ರೈಲು, ವಿಮಾನ ಸಂಚಾರಕ್ಕೆ ಅನುಮತಿ:
ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿಯಿದೆ. ವಿಮಾನ, ರೈಲು ನಿಲ್ದಾಣಗಳಿಗೆ ಹೋಗಿ ಬರುವುದಕ್ಕೆ ಸಾರ್ವಜನಿಕ ಸಾರಿಗೆ ವಾಹನಗಳ ಸಂಚಾರಕ್ಕೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ (ಕಂಪನಿಗಳು ನಿರ್ವಹಿಸುವ ಕ್ಯಾಬ್ಗಳು ಸೇರಿದಂತೆ) ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಪ್ರಯಾಣ ದಾಖಲೆ ಅಥವಾ ಟಿಕೆಟ್ ಪ್ರದರ್ಶಿಸಿದ ನಂತರ ಮತ್ತು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಸಂಚಾರ ನಡೆಸಬೇಕು.
ವಿವಾಹ ಸಮಾರಂಭಗಳಿಗೆ 200 ಜನರ ಮಿತಿ
ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ಹೊರಾಂಗಣಗಳಲ್ಲಿ 200 ಜನರು ಮೀರದಂತೆ ಹಾಗೂ ಒಳಾಂಗಣಗಳಲ್ಲಿ 100 ಜನರು ಮೀರದಂತೆ ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ. ಜನರು ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಜೊತೆಗೆ ಸರ್ಕಾರದ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇವುಗಳಿಗೆ ನಿರ್ಬಂಧ
ಚಿತ್ರಮಂದಿರಗಳು, ಮಾಲ್ಗಳು ತೆರೆಯುವಂತಿಲ್ಲ. ವಾಹನ ಸರ್ವೀಸ್ ಸೆಂಟರ್ಗಳು ಕಾರ್ಯ ನಿರ್ವಹಿಸಲ್ಲ. ಈಜುಕೊಳಗಳು, ಜಿಮ್ ತೆರೆಯುವಂತಿಲ್ಲ. ಪಬ್, ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್, ಬಾರ್ಗಳು ತೆರೆಯುವಂತಿಲ್ಲ. ಸಾರ್ವಜನಿಕ ಗ್ರಂಥಾಲಯಗಳು, ಬ್ಯೂಟಿ ಪಾರ್ಲರ್ಗಳು, ಸಲೂನ್ ಶಾಪ್ಗಳು ತೆರೆಯುವುದಿಲ್ಲ.