ನಾಳೆ ರಾಷ್ಟ್ರಪತಿಗಳಿಂದ ಚಾಮರಾಜನಗರದ ಸಿಐಎಂಎಸ್‌ ಬೋಧನಾ ಆಸ್ಪತ್ರೆ ಉದ್ಘಾಟನೆ

ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಇಂದಿನಿಂದ 4 ದಿನಗಳ ಕಾಲ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ನಾಳೆ ಮಧ್ಯಾಹ್ನ ಚಾಮರಾಜನಗರ ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ 450 ಹಾಸಿಗೆಯ ಬೋಧನಾ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ.

ಇಂದು ನಗರ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಬರಮಾಡಿಕೊಂಡರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಳೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.  ಈ ಹಿನ್ನಲೆಯಲ್ಲಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಇಂದು ಮತ್ತು ನಾಳೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.

ಇದನ್ನು ಓದಿ: ದಸರಾ ಆಚರಣೆ : ಮೈಸೂರು ಮತ್ತು ರಾಜ್ಯದ ಇತರ ಭಾಗಗಳಿಗೆ ಪ್ರತ್ಯೇಕ ಮಾರ್ಗಸೂಚಿ

ನಾಳೆ ರಾಷ್ಟ್ರಪತಿಗಳು ಚಾಮರಾಜನಗರಕ್ಕೆ ಭೇಟಿ ನೀಡುವುದರಿಂದ ಜಿಲ್ಲೆಯ ಯಾಡಾಪುರ ಗ್ರಾಮದಲ್ಲಿ ನಿರ್ಮಿಸಿರುವ  ಮೆಡಿಕಲ್ ಕಾಲೇಜು ಮತ್ತು ಬಿಳಿಗಿರಿ ರಂಗನ ಬೆಟ್ಟ ಸಮೀಪ ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗಿದೆ. ಜಿಲ್ಲಾಡಳಿತ ಎರಡೂ ಪ್ರದೇಶಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಚಾಮರಾಜನಗರ ಜಿಲ್ಲಾಡಳಿಯವು ನಿಷೇಧಿತ ಸ್ಥಳದಿಂದ 15 ಕಿ. ಮೀ. ವ್ಯಾಪ್ತಿಯಲ್ಲಿ ಮಾನವ ರಹಿತ ಏರ್ ಕ್ರಾಫ್ಟ್‌ ಬಳಕೆ, ಏರ್ ಬಲೂನ್ ಹಾರಾಟ, ಬ್ಯಾನರ್, ಬಂಟಿಂಗ್ಸ್ ಹಾಕುವಂತಿಲ್ಲ ಎಂದು ಸೂಚನೆ ನೀಡಿದ್ದು, ಅಲ್ಲದೆ,  ರಾಷ್ಟ್ರಪತಿ ಭದ್ರತಾ ಸಿಬ್ಬಂದಿ ಜಿಲ್ಲಾ ಪೊಲೀಸರಿಗೂ ಹಲವು ಸೂಚನೆಗಳನ್ನು ನೀಡಿದ್ದಾರೆ. ಬಿಳಿಗಿರಿ ರಂಗನ ಬೆಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪಾಲ್ಗೊಳ್ಳಲಿದ್ದಾರೆ.

ಶೃಂಗೇರಿಗೆ ಭೇಟಿ ನೀಡಲಿರುವ ಕಾರಣದಿಂದ ರಾಷ್ಟ್ರಪತಿಗಳು ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 7 ಮತ್ತು 8ರಂದು ರಾಮನಾಥ್ ಕೋವಿಂದ್ ಮಂಗಳೂರಿನ ಸರ್ಕ್ಯುಟ್ ಹೌಸ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಸರ್ಕ್ಯುಟ್ ಹೌಸ್‌ಗೆ ಆಗಮಿಸಲಿದ್ದಾರೆ.

ಇದನ್ನು ಓದಿ: ಸರ್ಕಾರ ಖಾದಿ-ಗ್ರಾಮೋದ್ಯೋಗ ಉತ್ತೇಜನಕ್ಕೆ ಆದ್ಯತೆ ನೀಡಲಿದೆ: ಬಸವರಾಜ ಬೊಮ್ಮಾಯಿ

ಶೃಂಗೇರಿ ಬಳಿಯೂ ಸಹ ಮೂರು ಹೆಲಿಕಾಪ್ಟರ್‌ ಇಳಿಯುವುದಕ್ಕಾಗಿ ಹೆಲಿಪ್ಯಾಡ್‌ಗಳ ನಿರ್ಮಾಣ ಮಾಡಲಾಗಿದೆ. ಗಾಂಧಿ ಮೈದಾನದಲ್ಲಿದ್ದ ಅಂಗಡಿ ಮುಂಗಟ್ಟುಗಳು, ಹೋಟೆಲ್‌, ರಸ್ತೆ ಬದಿ ವ್ಯಾಪಾರದ 25ಕ್ಕೂ ಹೆಚ್ಚು ಅಂಗಡಿಗಳ ತೆರವು ಮಾಡಲಾಗಿದೆ.

ಅಕ್ಟೋಬರ್‌ 7ರಂದು ಸಂಜೆ ಮಂಗಳೂರಿಗೆ ತೆರಳಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಕ್ಟೋಬರ್‌ 8ರಂದು ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್‌ 9ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ರಾಮನಾಥ್ ಕೋವಿಂದ್ ದೆಹಲಿಗೆ ತೆರಳಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *