ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯಿಂದಾಗಿ ನೂತನ ಮುಖ್ಯಮಂತ್ರಿ ಆಯ್ಕೆಯ ಕುರಿತು ಬಿಜೆಪಿ ಹೈಕಮಾಂಡ್ ನಾಳೆ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ನಂತರ ಆ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಅಂತಿಮ ನಿರ್ಧಾರ ನಾಳೆ ಬೆಳಗ್ಗೆ 9.30ಕ್ಕೆ ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಳಿತ ಅಂತಿಮಗೊಳ್ಳಲಿದೆ.
ದೆಹಲಿಯ ಜೆಎಂಸಿ ಬಾಲಯೋಗಿ ಸಭಾಂಗಣದಲ್ಲಿ ನಡೆಯುವ ಸಭೆಯಲ್ಲಿ ರಾಷ್ಟ್ರೀಯ ನಾಯಕರು ಸಭೆ ಸೇರಲಿದ್ದಾರೆ. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ತರುವಾಯ ಬಿಜೆಪಿ ಹೈಕಮಾಂಡ್ ದೆಹಲಿ ಮಟ್ಟದಲ್ಲಿ ಸಕ್ರಿಯಗೊಂಡಿದೆ. ಮುಂದೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು? ಪ್ರಕ್ರಿಯೆಗಳು ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.
ಇದನ್ನು ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ
ರಾಜ್ಯ ಬಿಜೆಪಿ ಪಾಳಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಹ್ಲಾದ್ ಜೋಶಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಎಲ್. ಸಂತೋಷ್, ಅರವಿಂದ ಬೆಲ್ಲದ್, ಸಿ.ಟಿ ರವಿ, ಮುರುಗೇಶ್ ನಿರಾಣಿ, ಜಗದೀಶ್ ಶೆಟ್ಟರ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ 10ಕ್ಕೂ ಹೆಚ್ಚು ಹೆಸರುಗಳು ಕೇಳಿ ಬರುತ್ತಿವೆ. ಬಿಜೆಪಿ ಹೈಕಮಾಂಡ್ ಇದುವರೆಗೆ ಕರ್ನಾಟಕದ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿಲ್ಲ. ಅಂತಿಮವಾಗಿ ಯಾರನ್ನು ಆಯ್ಕೆ ಮಾಡಲಿದೆ ಎಂದು ಕಾದು ನೋಡಬೇಕು.
ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿಜೆಪಿ ಪಕ್ಷದಿಂದ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪನವರು ಒಮ್ಮೆಯೂ ಪೂರ್ಣಾವಧಿಯಾಗಿ ಅಧಿಕಾರ ಮಾಡಲಿಲ್ಲ.
ಸಂಸದೀಯ ಮಂಡಳಿ ಸಭೆ ಬಳಿಕ ಬೆಂಗಳೂರು ಭೇಟಿ : ಅರುಣ್ ಸಿಂಗ್
ರಾಜ್ಯದ ಮುಂದಿನ ಮುಖ್ಯಮಂತ್ರಿ ಕುರಿತು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಬಿಜೆಪಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಇಂದು ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸದೀಯ ಮಂಡಳಿ ಸಭೆಯ ನಂತರ ಪಕ್ಷದ ವೀಕ್ಷಕರು ಬೆಂಗಳೂರಿಗೆ ತೆರಳಲಿದ್ದಾರೆ. ಶಾಸಕರು ಮತ್ತು ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಿದ್ದಾರೆ. ನಾನೂ ವೀಕ್ಷಕರೊಂದಿಗೆ ತೆರಳುವೆ’ ಎಂದು ಅವರು ತಿಳಿಸಿದರು.