ಮೈಸೂರು: ನಕಲಿ ನಂದಿನಿತುಪ್ಪ ತಯಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ನಂದಿನಿ ಹಾಲು ಮತ್ತು ಉತ್ಪನ್ನಗಳ ಬಗ್ಗೆ ಸಾರ್ವಜನಿಕರು ವಿಶ್ವಾಸ ಹೊಂದಿದ್ದರು. ಮೈಸೂರು ತಾಲೂಕು ಹೊಸಹುಂಡಿಯಲ್ಲಿ ನಡೆದಿರುವ ನಂದಿನಿ ತುಪ್ಪದ ಕಲಬೆರಕೆಯಿಂದಾಗಿ ಆ ವಿಶ್ವಾಸಕ್ಕೆ ಧಕ್ಕೆ ಬಂದಿದೆ. ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಹಾಲಿಗೆ ನೀರು ಬೆರೆಸಿರುವ ಪ್ರಕರಣ ಬೆಳಕಿಗೆ ಬಂದು ಜನ ಸಂಶಯದ ದೃಷ್ಟಿಯಿಂದ ನೋಡುವಂತಾಗಿತ್ತು. ಈ ಕಲಬೆರಕೆ ಹಗರಣದಲ್ಲಿ ದಂಧೆಕೋರರು ಅಲ್ಲದೆ ಮೈಮುಲ್ ಡೈರಿಯ ಕೆಲವು ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಕೆಲವರು ಭಾಗಿಯಾಗಿರಬಹುದಾದ ಸಂಶಯಗಳು ಎದ್ದು ಕಾಣುತ್ತಿದ್ದು ಜನ ಆತಂಕಪಡುವಂತಾಗಿದೆ.
ಈ ಹಗರಣ ಕೇವಲ ಹೊಸಹುಂಡಿಯಲ್ಲಷ್ಟೇ ಬೇರೆ ಕಡೆಯೂ ವ್ಯಾಪಕವಾಗಿ ನಡೆದಿರುವ ಅನುಮಾನಗಳಿವೆ. ಈ ಕಾರಣ ಸರ್ಕಾರ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆ ಹಚ್ಚಬೇಕು ಮತ್ತು ಇವರುಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜರುಗಿಸಿ ಇಂತಹ ಹಗರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ನಡೆಸುವ ಹಾಲು ಮಾರಾಟವನ್ನು ಮೈಮುಲ್ ನಿಷೇಧಿಸಿರುವುದು ಸರಿಯಲ್ಲ ಎಂದು ಖಂಡಿಸಿದ ಅವರು, ಇದರಿಂದ ಸಂಘಗಳು ಭಾರಿ ನಷ್ಟಕ್ಕೆ ತುತ್ತಾಗಲಿವೆ. ಹಾಗಾಗಿ ಹಾಲು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಜಿಲ್ಲಾ ಮಹಿಳಾ ಅಧ್ಯಕ್ಷೆ ನೇತ್ರಾವತಿ, ಮುಖಂಡರಾದ ಎಂ.ಎಸ್.ಅಶ್ವತ್ಥನಾರಾಯಣ ರಾಜೇ ಅರಸ್, ಪ್ರಸನ್ನ ಎನ್.ಗೌಡ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜ್, ಹಿರಿಯ ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್, ಕಾರ್ಮಿಕ ಸಂಘಟನೆಯ ಚಂದ್ರಶೇಖರ ಮೇಟಿ, ಜನಾಂದೋಲನಗಳ ಮಹಾಮೈತ್ರಿಯ ಉಗ್ರನರಸಿಂಹೇಗೌಡ, ಅಭಿರುಚಿ ಗಣೇಶ್, ಕೆ.ಕರುಣಾಕರನ್ ಸೇರಿದಂತೆ ಹಲವರು ಭಾಗವಹಿಸಿದ್ದರು.