ನಾಗಪುರ: ದೆವ್ವ ಹಿಡಿಯುವುದು, ಮಾಟಮಂತ್ರ ಎನ್ನುವುದು ಸೇರಿದಂತೆ ಇತ್ಯಾದಿ ಮೌಢ್ಯತೆಗಳಿಗೆ ಬಲಿಯಾಗಿರುವ ಆಧುನೀಕ ಯುಗದ ಜನತೆ ಮಾರಣಾಂತಿಕವಾಗಿ ವರ್ತಿಸುತ್ತಿರುವುದು ನಡೆಯುತ್ತಿದೆ. ಇಂದಿಗೂ ಕೆಲ ಜನರಲ್ಲಿ ಜೀವಂತವಾಗಿರುವ ಇಂತಹ ಮಢ್ಯಾಚರಣೆಗೆ 5 ವರ್ಷದ ಹೆಣ್ಣು ಮಗುವೊಂದು ಬಲಿಯಾಗಿದೆ.
ಮಗಳ ಮೇಲೆ ದುಷ್ಟಶಕ್ತಿ ಸೇರಿಕೊಂಡಿದೆ ಅದನ್ನು ಓಡಿಸಲೆಂದು ಮಾಟಮಂತ್ರ ಮಾಡುತ್ತಿದ್ದ ಪೋಷಕರು ತಮ್ಮ ಬಾಲಕಿಯನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ನಡೆದಿದೆ.
ಬಾಲಕಿಯ ತಂದೆ ಸಿದ್ಧಾರ್ಥ್ ಚಿಮ್ನೆ(45), ತಾಯಿ ರಂಜನಾ(42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್(32) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ಅಥವಾ ಶನಿವಾರ ನಸುಕಿನ ವೇಳೆ ದೆವ್ವ ಬಿಡಿಸುವ ಮೂಢನಂಬಿಕೆಯ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಯೂಟ್ಯೂಬ್‌ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಸಿದ್ದಾರ್ಥ್ ಚಿಮ್ನೆ, ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ ಹಾಗೂ 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್‌ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ತಂದೆ ತನ್ನ ಕಿರಿಯ ಮಗಳ ವರ್ತನೆಯಲ್ಲಿ ಏನೋ ಬದಲಾವಣೆಯಾಗಿದೆ ಎಂದು ಅನುಮಾನಗೊಂಡು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ನಂಬಿ ಆಕೆಯ ದೇಹದಿಂದ ದೆವ್ವವನ್ನು ಓಡಿಸಲೆಂದು ಮಾಟಮಂತ್ರದ ಮೊರೆ ಹೋಗಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
ಹುಡುಗಿಯ ತಂದೆ, ತಾಯಿ ಮತ್ತು ಸಂಬಂಧಿ ಮೂವರು ಸೇರಿ ರಾತ್ರಿ ವೇಳೆ ದೆವ್ವವನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದರ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ಇದು ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದಾಗ ಬಹಿರಂಗವಾಗಿದೆ. ವಿಡಿಯೊದಲ್ಲಿ ಬಾಲಕಿ ನೋವಿನಿಂದ ಅಳುತ್ತಿರುವ ದೃಶ್ಯವಿದೆ.
ವಿಡಿಯೊದಲ್ಲಿ, ಆರೋಪಿಗಳು ಅಳುತ್ತಿದ್ದ ಹುಡುಗಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ಮಗುವಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತರಿಸಲು ಸಾಧ್ಯವಾಗಿಲ್ಲ. ಈ ವೇಳೆ ಮೂವರು ಆರೋಪಿಗಳು ಮಗುವಿನ ಕಪಾಳಕ್ಕೆ ಬಾರಿಸಿದ್ದಾರೆ. ನಂತರ ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಬಾಲಕಿ ಪ್ರಜ್ಞೆ ಕಳೆದುಕೊಂಡು ಕೆಳಗೆ ಕುಸಿದಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಮಗುವನ್ನು ದರ್ಗಾಕ್ಕೆ ಕೊಂಡೊಯ್ದಿದ್ದಾರೆ. ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆರೋಪಿಗಳ ಅನುಮಾನಸ್ಪದ ವರ್ತನೆಯನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ಮೊಬೈಲ್‌ನಲ್ಲಿ ಅವರು ಬಂದಿದ್ದ ಕಾರಿನ ಫೋಟೊ ಸೆರೆ ಹಿಡಿದಿದ್ದಾರೆ.
ಆಸ್ಪತ್ರೆಗೆ ದಾಖಲಾಗುವ ಮೊದಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಣಾ ಪ್ರತಾಪ್ ನಗರ ಪೊಲೀಸರು ಆಸ್ಪತ್ರೆ ಸಿಬ್ಬಂದಿ ಸೆರೆ ಹಿಡಿದಿದ್ದ ಕಾರಿನ ಫೋಟೊ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಹಾರಾಷ್ಟ್ರ ತಡೆಗಟ್ಟುವಿಕೆ ಮತ್ತು ಮಾನವ ಬಲಿ ನಿರ್ಮೂಲನೆ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಆಚರಣೆಗಳು ಮತ್ತು ಮಾಟಮಂತ್ರದ ತಡೆ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.