ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ವಿಪಕ್ಷಗಳು ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು, ಸಿಎಂ ಮನೆಗೆ ಮುತ್ತಿಗೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ನಾಗೇಂದ್ರ ಸ್ವಜಿಲ್ಲೆ ಬಳ್ಳಾರಿಯಲ್ಲಿಯೂ ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದು, ಈ ಪ್ರಕರಣವನ್ನು ಬಿಜೆಪಿ ಸೇರಿದಂತೆ ವಿಪಕ್ಷಗಳು ಇನ್ನಷ್ಟು ತಾರಕಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಅಲ್ಲದೇ ಸಚಿವ ನಾಗೇಂದ್ರರ ಸಚಿವಸ್ಥಾನಕ್ಕೆ ಕೊಡಲಿಪೆಟ್ಟು ಹಾಕುತ್ತಲೇ ಇದ್ದು, ರಾಜೀನಾಮೆಗೆ ಇನ್ನಿಲ್ಲದ ಪಟ್ಟುಹಿಡಿದಿವೆ. ಇದರಿಂದ ಇಕ್ಕಟ್ಟಿಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟ ಸಿಲುಕಿದಂತೆ ತೋರುತ್ತಿದೆ. ಹೀಗಾಗಿ ಸಚಿವ ಬಿ.ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ದೇವೇಗೌಡ್ರೆ ಇನ್ನಾದ್ರೂ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ ; ಸಿದ್ದನಗೌಡ ಪಾಟೀಲ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ಅವರು ಖುದ್ದ ಹೇಳಿಕೆ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆಂದು ಗೊತ್ತಾಗಿದೆ.
ಈ ಪ್ರಕರಣ ಮುಂದಿಟ್ಟುಕೊಂಡು ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು ಹಾಗೂ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುಖಭಂಗದಿಂದ ತಪ್ಪಿಸಲು ಸಚಿವ ನಾಗೇಂದ್ರ ಗೆ ರಾಜೀನಾಮೆ ನೀಡಲು ಸೂಚಿಸಿದ್ದು ಇಂದು ಅಥವಾ ನಾಳೆ ಬಿ.ನಾಗೇಂದ್ರ ರಾಜೀನಾಮೆ ನೀಡಲಿದ್ದಾರೆಂದು ಗೊತ್ತಾಗಿದೆ. ಈ ಪ್ರಕರಣದ ತನಿಖೆ ಬಳಿಕ ಆರೋಪ ಸುಳ್ಳಾದರೆ ಮತ್ತೆ ನಾಗೇಂದ್ರ ಅವರು ಸಚಿವ ಸಂಪುಟ ಸೇರಬಹುದು ಎಂದು ಸಿಎಂ ಹೇಳಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ನೋಡಿ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಸಾವು: ಸಾವಿನ ಸುತ್ತ ಅನುಮಾನದ ಹುತ್ತ