ಪಕ್ಷ ಹಾಗೂ ಸರ್ಕಾರದ ಘನತೆ ಉಳಿಸಲು ನಾಗೇಂದ್ರ ಸ್ವಯಂ ಪ್ರೇರಣೆಯಿಂದ ರಾಜೀನಾಮೆಗೆ ಮುಂದಾಗಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಪಕ್ಷ ಹಾಗೂ ಸರ್ಕಾರದ ಘನತೆಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಸಚಿವ ನಾಗೇಂದ್ರ ಸ್ವಯಂ ಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಗುರುವಾರ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ನೀಟ್-ಯುಜಿ ಪರೀಕ್ಷೆ; ಅಖಿಲ ಭಾರತ ಮಟ್ಟದಲ್ಲಿ ವಿ. ಕಲ್ಯಾಣ್‌ ಗೆ ಪ್ರಥಮ ರ್‍ಯಾಂಕ್

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ಬಗ್ಗೆ ಕೇಳಿದಾಗ, “ನಾನು, ಗೃಹ ಸಚಿವರು ಸಚಿವ ನಾಗೇಂದ್ರ ಜತೆ ಚರ್ಚೆ ಮಾಡಿದ್ದೇವೆ. ಅವರು ಈ ಅಕ್ರಮದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಆದರೆ ಪಕ್ಷದ ಹಾಗೂ ಸರ್ಕಾರದ ಘನತೆಗೆ ಧಕ್ಕೆ ಬರಬಾರದು ಎಂದು ಸ್ವತಃ ನಾಗೇಂದ್ರ ಅವರೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂದು ಅವರು ರಾಜೀನಾಮೆ ನೀಡಬಹುದು” ಎಂದರು.

ಸರ್ಕಾರ ರಾಜೀನಾಮೆ ಸ್ವೀಕರಿಸಲಿದೆಯೇ ಎಂದು ಕೇಳಿದಾಗ, “ಮುಖ್ಯಮಂತ್ರಿಗಳು ಪಕ್ಷದ ಹೈಕಮಾಂಡ್ ಜತೆ ಚರ್ಚೆ ಮಾಡಿ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ” ಎಂದರು.

ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಕೇಳಿದಾಗ, “ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಸಂತೋಷವಾಗಿದೆ. ನಮ್ಮ ಮೈತ್ರಿಕೂಟ ಅಧಿಕಾರದ ಸನಿಹಕ್ಕೆ ಬಂದರೂ ಸರ್ಕಾರ ರಚನೆ ಪ್ರಯತ್ನದಿಂದ ದೂರವಿರಲು ನಿರ್ಧರಿಸಿದೆ. ಪ್ರತಿಪಕ್ಷಗಳು ಬಲಿಷ್ಠವಾಗಿರಬೇಕು ಎಂದು ದೇಶ ಅಭಿಪ್ರಾಯ ಪಟ್ಟಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ರಕ್ಷಣೆಗೆ ಹೊಸ ಭರವಸೆ ಸಿಕ್ಕಿದೆ. ಭವಿಷ್ಯದ ಬಗ್ಗೆ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡಲಿದ್ದಾರೆ” ಎಂದರು.

ಗ್ಯಾರಂಟಿ ಜಾರಿ ವಿಚಾರವಾಗಿ ಕೇಳಿದಾಗ, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುವುದು. ಕಾಂಗ್ರೆಸ್ ಪಕ್ಷ ಎಂದಿಗೂ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗುವುದು” ಎಂದರು.

ಇದನ್ನೂ ನೋಡಿ: ಪರಿಸರ ಸಂರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ | ವಿಶ್ಲೇಷಣೆ – ಅಖಿಲೇಶ್Janashakthi Media

Donate Janashakthi Media

Leave a Reply

Your email address will not be published. Required fields are marked *