ಬೆಂಗಳೂರು : ದೀಪಾವಳಿ ಹಬ್ಬದ ನಂತರ ಬೆಂಗಳೂರಿಗೆ ಹಿಂತಿರುಗಿದ ಪ್ರಯಾಣಿಕರು ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಮೆಟ್ರೋಗೆ ಮೊರೆ ಹೋಗಿದ್ದು, ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಸುಮಾರು 1 ಕಿ.ಮೀ ಉದ್ದದ ಸರತಿ ಸಾಲು ಕಂಡುಬಂದಿದೆ. ಮೆಟ್ರೋ ಮಾರ್ಗ ವಿಸ್ತರಣೆ ಮಾಡದ ರಾಜಕಾರಣಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ 22ಕ್ಕೂ ಅದಿಕ ಉತ್ತರ ಭಾಗದ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಕಾರು, ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದ ಜನರು ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಹೆದರಿಕೊಂಡು ಮೆಟ್ರೋ ರೈಲಿನಲ್ಲಿ ಹೋಗಲು ಮುಂದಾಗಿದ್ದಾರೆ. ಬೆಂಗಳೂರು ನಗರ ಪ್ರವೇಶ ಆಗುತ್ತಿದ್ದಂತೆ ನಾಗಸಂದ್ರ, ಪೀಣ್ಯ 2ನೇ ಹಂತ, ಗೊರಗುಂಟೆಪಾಳ್ಯ, ಯಶವಂತಪುರ ಸೇರಿದಂತೆ ವಿವಿಧೆಡೆ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಿಂದಾಗಿ ರಸ್ತೆ ಮಾರ್ಗದಲ್ಲಿ ವಾಹನಗಳಲ್ಲಿ ಹೋದರೆ ಹೆಚ್ಚು ಸಮಯ ಆಗಲಿದೆ ಎಂದು ಮೆಟ್ರೋ ಮೊರೆ ಹೋಗಿದ್ದಾರೆ. ಹೀಗಾಗಿ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಾದ ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ನಾಗಸಂದ್ರ ಹಸಿರು ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ಜನರು ಇಳಿದಿದ್ದಾರೆ.
1 ಕಿಮೀ ಸರತಿ ಸಾಲು: ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬರೋಬ್ಬರಿ 5-10 ಸಾವಿರ ಜನರು ಮೆಟ್ರೋ ರೈಲು ಪ್ರಯಾಣಕ್ಕೆ ಹೊರಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸರತಿ ಸಾಲಿನ ಉದ್ದ ಹನುಮಂತನ ಬಾಲದಂತೆ ಸುಮಾರು 1 ಕಿ.ಮೀ ಉದ್ದವಾಗಿತ್ತು. ಟ್ರಾಫಿಕ್ ರಹಿತ ಸಂಚಾರಕ್ಕೆ ಮೆಟ್ರೋ ಮೊರೆ ಹೋದ ಜನರಿಗೆ ಇಲ್ಲಿಯೂ ಕಾಯುವುದು ತಪ್ಪಲಿಲ್ಲ ಎಂಬ ಭಾರೀ ಬೇಸರ ಉಂಟಾಗಿತ್ತು. ಹೀಗಾಗಿ, ಮೆಟ್ರೋ ರೈಲು ಸಂಚಾರಕ್ಕೆ ಅನುಕೂಲ ಆಗುವಂತೆ ಇನ್ನೂ ಮೂರು ನಿಲ್ದಾಣಗಳನ್ನು ವಿಸ್ತರಣೆ ಮಾಡದ ರಾಜಕಾರಣಿಗಳು ಹಾಗೂ ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.