ನಾಗರಿಕ ಸೇವಾ ನಡತೆ -2020 : ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ

 – ಬಿ. ಶ್ರೀಪಾದ ಭಟ್

ಕರ್ನಾಟಕ ಸರಕಾರವು ‘ನಾಗರಿಕ ಸೇವಾ (ನಡತೆ) 2020’ ಕರಡನ್ನು ಬಿಡುಗಡೆ ಮಾಡಿದೆ. ಇದರಲ್ಲಿ ‘ಸರಕಾರಿ ನೌಕರರು ತಟಸ್ಥವಾಗಿರಬೇಕು, ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಬಾರದು, ಸದಸ್ಯರಾಗಬಾರದು, ರಾಜಕೀಯ ಚಳುವಳಿಯಲ್ಲಿ ಭಾಗವಹಿಸಬಾರದು….. ಎಂದೆಲ್ಲಾ ಹೇಳಿದ್ದಾರೆ. ಜೊತೆಗೆ ಪೂರ್ವಾನುಮತಿ ಇಲ್ಲದೆ ಪತ್ರಿಕೆಗಳಿಗೆ ಲೇಖನ ಬರೆಯುವಂತಿಲ್ಲ, ನಿಯತಕಾಲಿಕೆಗಳ ಸಂಪಾದನಾ ಕಾರ್ಯದಲ್ಲಿ ತೊಡಗುವಂತಿಲ್ಲ, ಚಲನಚಿತ್ರ, ಧಾರವಾಹಿಗಳಲ್ಲಿ ನಟಿಸುವಂತಿಲ್ಲ, ಇತ್ಯಾದಿ’ ಅಂಶಗಳಿವೆ. ಇದು ಮೇಲ್ನೋಟಕ್ಕೆ ಕಾಣುವಂತೆ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕಡಿವಾಣ ಹಾಕುತ್ತದೆ.

ಸಂವಿದಾನದ ಪರಿಚ್ಚೇದ 19 (1ಎ) ಅನುಸಾರ ‘ಭಾರತದ ಎಲ್ಲಾ ನಾಗರಿಕರಿಗೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರಯವಿದೆ’. ಆದರೆ ಇದು ಸಂಪೂರ್ಣ ಹಕ್ಕಲ್ಲ. ಪರಿಚ್ಚೇದ 19 (2) ಅನುಸಾರ ‘ದೇಶದ ಸಾರ್ವಭೌಮ, ಸಮಗ್ರತೆ, ಭದ್ರತೆಯ ವಿಶಯ ಬಂದಾಗ ಅದನ್ನು ರಕ್ಷಿಸಲು ಮೇಲಿನ ಪರಿಚ್ಚೇದ ಅಡ್ಡಿ ಬರುವುದಿಲ್ಲ’ ಎಂದೂ ಹೇಳಿದೆ. ಪರಿಚ್ಚೇದ 19 (2) ವನ್ನು ಬಳಸಿಕೊಂಡು ಸರಕಾರಗಳು ತಮ್ಮನ್ನು ಟೀಕಿಸುವವರ ವಿರುದ್ದ ಅಭಿವ್ಯಕ್ತಿ ಸ್ವಾತಂತ್ರಯವನ್ನು ನಿಯಂತ್ರಿಸಲು ಮುಂದಾಗುತ್ತವೆ.

ಯಡಿಯೂರಪ್ಪ ಸರಕಾರದ ಆದೇಶವೂ ಸಹ ಇದೇ ನಿರಂಕುಶ ಮನಸ್ಥಿತಿ ಹೊಂದಿದೆ. ಸಂವಿಧಾನವನ್ನು ರಚನೆ ಮಾಡಿದಾಗ ಆಗ ತಾನೆ ಭಾರತವು ವಿಭಜನೆಗೊಂಡಿತ್ತು. ಆ ಸಂದರ್ಭದಲ್ಲಿನ ತೀವ್ರವಾದ ಮತೀಯ ಗಲಭೆಗಳ ಕಾರಣಕ್ಕೆ ಲಕ್ಷಾಂತರ ಜನ ಸಾವಿಗೀಡಾಗಿದ್ದರು. ಆಗ ದೇಶದಲ್ಲಿ ಅಭದ್ರತೆ ಇತ್ತು. ಈ ಹಿನ್ನಲೆಯಲ್ಲಿ ಕಲಮು 19 (1ಎ) ಗೆ ಕೆಲ ನಿರ್ಭಂದಗಳನ್ನು ತಂದು ತಿದ್ದುಪಡಿ ಮಾಡಲಾಯಿತು. ಆದರೆ ಭಾರತಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾಗಿವೆ. ಭಾರತ ವಿಭಜನೆಗೊಂಡ ಸಂದರ್ಭದಲ್ಲಿನ ಪ್ರಕ್ಷುಬ್ದ ಸನ್ನಿವೇಶವು ಈಗಿಲ್ಲ. ಈಗಿನ ವಿರೋಧಾಭ್ಯಾಸವೆಂದರೆ ಸ್ವತಃ ರಾಜಕೀಯ ಪಕ್ಷಗಳು ಅಧಿಕಾರ ಕಬ್ಜಾ ಮಾಡಿಕೊಳ್ಳುವುದಕ್ಕಾಗಿ ಮತೀಯ ಭಾವನೆಗಳನ್ನು ಕೆರಳಿಸುತ್ತವೆ. ಧರ್ಮಗಳ ನಡುವೆ, ಜಾತಿಗಳ ನಡುವೆ ದ್ವೇಶ, ಅಶಾಂತಿ ಹುಟ್ಟಿಸುತ್ತವೆ. ಇಂತಹ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಹೇಗೆ ಅರ್ಥೈಸಬೇಕು? ಇದಕ್ಕೆ 2015ರ ‘ಶ್ರೇಯಾ ಸಿಂಘಾಲ್ ಪ್ರಕರಣ’ದಲ್ಲಿ ನ್ಯಾಯಮೂರ್ತಿ ರೋಹಿಂಗ್ಟನ್ ಫಾಲಿ ನಾರಿಮನ್ ಅವರು ಹೇಳಿದ ಮಾತುಗಳಲ್ಲಿ ಉತ್ತರವಿದೆ. ಅವರು ವಿಚಾರಣೆ ನಡೆಸುತ್ತಾ ‘1969 ರಲ್ಲಿ ಅಮೇರಿಕಾದ ಸುಪ್ರೀಂ ಕೋರ್ಟ ‘Brandenburg case’ ನಲ್ಲಿ ತೀರ್ಪು ನೀಡುತ್ತ ಸಮರ್ಥನೆ ಮತ್ತು ಪ್ರಚೋದನೆ ನಡುವೆ ವ್ಯತ್ಯಾಸವನ್ನು ಅರಿಯಬೇಕಿದೆ.

ಒಂದು ನಿರ್ದಿಷ್ಟ ಅಂಶವನ್ನು ಸಮರ್ಥಿಸಿಕೊಳ್ಳುವುದು ಮತ್ತು ಸರಕಾರದ ವಿರುದ್ದ ಶಸಸ್ತ್ರ ಹೋರಾಟ ನಡೆಸುವಂತೆ ಉತ್ತೇಜಿಸುವುದು ಎರಡರ ನಡುವೆ ವ್ಯತ್ಯಾಸವಿದೆ ಎಂದು ಹೇಳಿದೆ’. ನಾವೂ ಸಹ ಇದೇ ಪರೀಕ್ಷೆಯನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳುತ್ತಾರೆ. ಇದನ್ನು ವಿವರಿಸುವ ನ್ಯಾಯವಾದಿ ಅಭಿನವ್ ಚಂದ್ರಚೂಡ ‘ಒಬ್ಬ ವ್ಯಕ್ತಿ ತನಗೆ ಸರಿ ಅನಿಸಿದ್ದನ್ನು ಹೇಳುತ್ತಾನೆ (ಅದು ಪ್ರಭುತ್ವಕ್ಕೆ ಅಪಥ್ಯವಾಗಿದ್ದರೂ ಸಹ), ಇಬ್ಬರು ವ್ಯಕ್ತಿಗಳು, ಗುಂಪುಗಳು ತಮ್ಮ ತಮ್ಮ ದೃಷ್ಟಿಕೋನಕ್ಕೆ ಸೂಕ್ತವೆನಿದ್ದನ್ನು ವಾದಿಸುತ್ತಾರೆ, ಸಮರ್ಥಿಸುತ್ತಾರೆ, ಜಗಳವೂ ಆಡಬಹುದು (ಇದು ಪ್ರಭುತ್ವಕ್ಕೆ ರುಚಿಸದೇ ಇರಬಹುದು). ಆದರೆ ಅವರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ದಕ್ಕೆ ಉಂಟು ಮಾಡಬಾರದು’ ಎಂದು ಹೇಳುತ್ತಾರೆ. ಇದನ್ನು ಮುಂದುವರೆಸಿ ಹೇಳಬೇಕೆಂದರೆ ಸರಕಾರದ ನೀತಿಗಳ, ಶಾಸನಗಳ ವಿರುದ್ದ ಟೀಕೆ ಮಾಡುವುದರಿಂದ ದೇಶದ ಸಾರ್ವಭೌಮಕ್ಕೆ, ಸಮಗ್ರತೆಗೆ ಧಕ್ಕೆ ಉಂಟಾಗುವುದಿಲ್ಲ. ಈ ಸನ್ನಿವೇಶದಲ್ಲಿ ಪರಿಚ್ಚೇದ 19 (1ಎ) ಅನ್ವಯವಾಗುತ್ತದೆ. ಆದರೆ ವ್ಯಕ್ತಿಯೊಬ್ಬ, ಗುಂಪೊಂದು ಪರಿಶಿಷ್ಟ ಜಾತಿಯವರ ಮೇಲೆ ಜಾತಿ ಕಾರಣಕ್ಕೆ ನಿಂದಿಸುವುದು, ಅಲ್ಪಸಂಖ್ಯಾತರನ್ನು ಅವರ ಧರ್ಮದ ಕಾರಣಕ್ಕೆ ಹಂಗಿಸುವುದು ಅಭಿವ್ಯಕ್ತಿ ಸ್ವಾತಂತ್ರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ರೀತಿಯ ವರ್ತನೆಗಳು ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತವೆ, ಗಲಭೆಗಳಿಗೆ ಕಾರಣವಾಗುತ್ತವೆ. ಫೆಬ್ರವರಿ 2020ರಲ್ಲಿನ ದೆಹಲಿ ಗಲಭೆಗಳು ತೀರಾ ಇತ್ತೀಚಿನ ಉದಾಹರಣೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ಸಂಸದರು, ಶಾಸಕರು, ಮಂತ್ರಿಗಳು ಬಹಿರಂಗವಾಗಿ ಮುಸ್ಲಿಂ ಧರ್ಮದ ವಿರುದ್ಧ ದ್ವೇಷದ ಮಾತುಗಳನ್ನಾಡಿ ಜನರನ್ನು ಪ್ರಚೋದಿಸಿದರು. ಗಲಭೆಗಳಿಗೆ ಕುಮ್ಮುಕ್ಕು ನೀಡಿದರು. ಇದಕ್ಕೆ ವಿಡಿಯೋ ಸಾಕ್ಷಿಗಳಿವೆ. ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ಯದ ರಕ್ಷಣೆ ದೊರಕುವುದಿಲ್ಲ. ಈ ಸನ್ನಿವೇಶದಲ್ಲಿ ಪರಿಚ್ಚೇದ 19 (2) ಅನ್ವಯವಾಗುತ್ತದೆ. ಆದರೆ ಯಾವುದು ಗಲಭೆಗೆ ಪ್ರಚೋದಿಸುತ್ತದೆ? ಯಾವುದು ರಚನಾತ್ಮಕ ವಿಮರ್ಶೆ ಎಂದು ನಿರ್ಧರಿಸುವುದನ್ನು ಸಹ ಕಗ್ಗಂಟಾಗಿರುವುದು ಇಂದಿಗೂ ಬಗೆ ಹರಿಯಲಾಗದ ಬಿಕ್ಕಟ್ಟು. ಈ ಬಿಕ್ಕಟ್ಟನ್ನು ಸಹ ಪ್ರಭುತ್ವವು ತನ್ನ ಅನುಕೂಲಕ್ಕಾಗಿ ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿಕೊಂಡಿದೆ. ಇಲ್ಲಿನ ಮೊದಲ ಜಟಿಲತೆ ಇರುವುದು ಇಲ್ಲಿನ ಕಾನೂನುಗಳು ಅಪರಾಧೀ ಕಾನೂಗಳು. ಅಭಿನವ್ ಚಂದ್ರಚುಡ ಹೇಳುವಂತೆ ಶಾಸಕಾಂಗವು ಕರಾಳ ಶಾಸನವನ್ನು ತಂದರೆ ಅದನ್ನು ಪ್ರಶ್ನಿಸಿ ಕೋರ್ಟನಲ್ಲಿ ಅಪೀಲು ಸಲ್ಲಿಸಬಹುದು, ಆದರೆ ನ್ಯಾಯಾಂಗವೇ ಕಾನೂನುಗಳನ್ನು ರೂಪಿಸಿದಾಗ ಮೇಲ್ಮನವಿ ಸಲ್ಲಿಸಲು ನಮಗೆ ಅವಕಾಶವಿಲ್ಲ. ಇದು ‘ಹೆಳವನ ಹೆಗಲ ಮೇಲೆ ಕುರುಡ ಕೂತಂತೆ’

ಈ ಎಲ್ಲಾ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸರಕಾರ ತಂದ ‘ನಾಗರಿಕ ಸೇವಾ (ನಡತೆ) 2020’ ನೀತಿಸಂಹಿತೆಗಳು ಸ್ಪಷ್ಟವಾಗಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಭಂಗ ತರುತ್ತವೆ. ಸರಕಾರಿ ನೌಕರ ಲೇಖನ ಬರೆಯಬಾರದು, ಪೂರ್ವಾನುಮತಿ ಪಡೆಯಬೇಕು, ಅಭಿನಯಿಸಬಾರದು, ಹಾಡಬಾರದು ಇತ್ಯಾದಿಗಳು ಅನಾಗರಿಕ ಕಾನೂನುಗಳು. ‘ನಿನಗೆ ಮಾತನಾಡಲು ಅವಕಾಶವಿದೆ, ಆದರೆ ನೀನು ಏನು ಮಾತನಾಡುತ್ತೀಯ ಎಂಬುದನ್ನು ನಿಗಾ ವಹಿಸಲಾಗುತ್ತದೆ’ ಎನ್ನುವ ಕತ್ತಲಿನಿಂದ ‘ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರವಿದೆ. ಆದರೆ ನಮಗೆ ಮಾತನಾಡಲು ಅವಕಾಶ ಕೊಟ್ಟಾಗ ಮಾತ್ರ’ ಎನ್ನುವ ಕಗ್ಗತ್ತಲಿಗೆ ಜಿಗಿಯುತ್ತಿರುವುದು ಆತಂಕಕಾರಿಯಾಗಿದೆ. ಪ್ರಜಾಪ್ರಬುತ್ವ ದೇಶದಲ್ಲಿ ಪ್ರಜೆಯ ಮಾತಿಗೆ, ಬರವಣಿಗೆಗೆ ಸೆನ್ಸಾರ್ ಹೇರುವುದು ಕರಾಳತೆ ಎನಿಸಿಕೊಳ್ಳುತ್ತದೆ. ‘ಸಂಪೂರ್ಣ ಸ್ವಾತಂತ್ರ ಎನ್ನುವುದರ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ‘ಸಂಪೂರ್ಣ ನಿಯಂತ್ರಣ’ ಎನ್ನುವ ಯಡಿಯೂರಪ್ಪ ಸರಕಾರದ ಈ ಅಧಿಕಾರದ ಯಾಜಮಾನಕೀಯತೆ ಸ್ವಾತಂತ್ರವನ್ನೇ ಕಸಿದುಕೊಳ್ಳುತ್ತದೆ. ಸಂಬಂಧಪಟ್ಟ ಸರಕಾರಿ ನೌಕಕರು ಇನ್ನು ಮೌನವಾಗಿರಬಾರದು. ತಮ್ಮ ಅಭಿವ್ಯಕ್ತಿ ಸ್ವಾತಂತ್ರವು ಈ ರೀತಿಯಾಗಿ ಹರಣವಾಗಲು ಅವಕಾಶ ಮಾಡಿಕೊಡಬಾರದು.

 

 

Donate Janashakthi Media

Leave a Reply

Your email address will not be published. Required fields are marked *