ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ನಗರದಲ್ಲಿ ಶಿಥಿಲಗೊಂಡಿರುವ ಎಲ್ಲಾ ಕಟ್ಟಡಗಳ ಮರು ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದು, ಮುಂದಿನ 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ನಿಖರ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಎಲ್ಲಾ ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಬಿಎಂಪಿ ವತಿಯಿಂದ 2019ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ 185 ಶಿಥಿಲಾವಸ್ಥೆಯ ಕಟ್ಟಡಗಳ ಪೈಕಿ ಈಗಾಗಲೇ 10 ಕಟ್ಟಡಗಳನ್ನು ನೆಲಸಮ ಮಾಡಲಾಗಿದ್ದು, ಬಾಕಿ 175 ಕಟ್ಟಡಗಳ ಮಾಲೀಕರಿಗೆ ನೋಟಿಸ್ ಕೂಡಲೇ ನೀಡಬೇಕು. ಜೊತೆಗೆ ಆಯಾ ವಲಯಗಳಲ್ಲಿ ಸಂಬಂಧಪಟ್ಟ ಎಂಜಿನಿಯರ್ ಗಳು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸ್ಥಳಕ್ಕೆ ಭೇಟಿ ನೀಡಿ ಮರುಪರಿಶೀಲಿಸಬೇಕು. ಕಟ್ಟಡ ನೆಲಸಮ ಮಾಡುವ ಸಲುವಾಗಿ ವಲಯವಾರು ಗುತ್ತಿಗೆದಾರರನ್ನು ನೇಮಿಸುವಂತೆ ಸೂಚಿಸಲಾಗಿದೆ.
ಇದನ್ನು ಓದಿ: ಬೆಂಗಳೂರಿನ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ
ನಗರದಲ್ಲಿ 2019 ಶಿಥಿಲಾವಸ್ಥೆಯಲ್ಲಿ ಇರುವ ಕಟ್ಟಡಗಳನ್ನು ಸಮೀಕ್ಷೆ ಮಾಡಿರುವ ಪ್ರಕಾರ ಇದೂವರೆಗೆ ಎಷ್ಟು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂಬುದರ ಬಗ್ಗೆ ಆಯುಕ್ತರು ಎಂಟು ವಲಯಗಳಿಂದ ಮಾಹಿತಿ ಪಡೆದರು.
ಈಗಾಗಲೇ ಈ ಹಿಂದೆ ಗುರುತಿಸಿದ್ದ ಶಿಥಿಲವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ವಾಸವಾಗಿರುವ ಜನರನ್ನು ಆ ಸ್ಥಳದಿಂದ ಖಾಲಿ ಮಾಡಿಸಿ ಕಟ್ಟಡವನ್ನು ನೆಲಸಮ ಮಾಡುವ ಇಲ್ಲವೇ, ದುರಸ್ತಿ ಮಾಡಿಸುವ ಕೆಲಸ ಈ ಹಿಂದೆಯೇ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ.
ಕಟ್ಟಡಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಹೊಸದಾಗಿ ಅವಶ್ಯಕತೆ ಇರುವ ಕಡೆಗಳಲ್ಲಿ ಸಮೀಕ್ಷೆ ಮಾಡಲಾಗಿಸಲಾಗುವುದು. ಜೊತೆಗೆ ವಾಸಕ್ಕೆ ಯೋಗ್ಯವಾಗಿಲ್ಲದ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತೇವೆಂದು ತಿಳಿಸಿದ್ದಾರೆ.
ಇದನ್ನು ಓದಿ: ಮತ್ತೊಂದು 3 ಅಂತಸ್ತಿನ ಕಟ್ಟಡ ಕುಸಿತ: ಡೈರಿ ಸರ್ಕಲ್ ಬಳಿ ಘಟನೆ
2019ರಲ್ಲಿ ನಡೆಸಿರುವ ಸಮೀಕ್ಷೆ ಸರಿಯಾಗಿದ್ದರೆ, ಅದನ್ನೇ ಅನುಸರಿಸುತ್ತೇವೆ. ಇಲ್ಲದಿದ್ದರೆ ಹೊಸದಾಗಿ ಸಮೀಕ್ಷೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ. ಸಮೀಕ್ಷೆಗೆ ವಲಯಗಳ ಆಯುಕ್ತರು, ಜಂಟಿ ಆಯುಕ್ತರ ನೇತೃತ್ವದಲ್ಲಿ ವಿವಿಧ ವಿಭಾಗಗಳ ಅಧಿಕಾರಿಗಳ ತಂಡ ರಚಿಸಲಾಗುವುದು, ಇನ್ನೆರಡು ದಿನಗಳಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುತ್ತೇವೆಂದು ಹೇಳಿದರು.
ನಗರದಲ್ಲಿ ಇತ್ತೀಚಿಗೆ ಶಿಥಿಲಾವಸ್ಥೆಯಲ್ಲಿರುವ ಎರಡು ಕಟ್ಟಡಗಳು ಏಕಾಏಕಿಯಾಗಿ ಕುಸಿತ ಕಂಡಿರುವ ಘಟನೆ ಸೆಪ್ಟೆಂಬರ್ 27ರಂದು ಲಕ್ಕಸಂದ್ರ ಹಾಗೂ ಸೆಪ್ಟೆಂಬರ್ 28ರಂದು ಕೆಎಂಎಫ್ ಆವರಣದಲ್ಲಿ ನಡೆದಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ನಗರದಲ್ಲಿ ಇಂತಹ ಶಿಥಿಲಾವಸ್ಥೆಗೊಂಡಿರುವ ಹಲವು ಕಟ್ಟಡಗಳಿವೆ ಮತ್ತು ಕೆಲವುಗಳಲ್ಲಿ ಆತಂಕದಿಂದ ವಾಸವಾಗಿದ್ದಾರೆ.