ತುಮಕೂರು: ದೇಶದ ಸರ್ವೋಚ್ಚ ನ್ಯಾಯಾಲಯ 2004ರಲ್ಲಿಯೇ ಯಾವುದೇ ಮುಂಜಾಗ್ರತಾ ಪರಿಕರಗಳಿಲ್ಲದೆ ಪೌರಕಾರ್ಮಿ ಕರನ್ನು ಕೆಲಸಕ್ಕೆ ನಿಯೋಜಿಸಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ. ಆದರೆ ವರ್ಷಕ್ಕೆ ನೂರಾರು ಪಿ.ಕೆ.ಎಸ್‌ಗಳು ಮಲಗುಂಡಿ ಸ್ವಚ್ಚಗೊಳಿಸುವ ವೇಳೆ ಮೃತಪಟ್ಟರು ಇದುವರೆಗೂ ಯಾವ ಅಧಿಕಾರಿ ವಿರುದ್ದವೂ ಶಿಕ್ಷೆಯಾಗಿಲ್ಲ. ಈ ವಿಚಾರದಲ್ಲಿ ಸರಕಾರವೇ ಮೊದಲ ಅಪರಾಧಿ ಎಂದು ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಲಭವನದಲ್ಲಿ ಸಿಯಟಿಯು ನೇತೃತ್ವದ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ಮುನ್ಸಿಪಲ್ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಬೇಡಿಕೆ ಹಿನ್ನೇಲೆಯಲ್ಲಿ ಆಯೋಜಿಸಿದ್ದ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಲಕ್ಷಾಂತರ ಸಂಖ್ಯೆಯಲ್ಲಿರುವ ಮುನ್ಸಿಪಲ್ ನೌಕರರನ್ನು ಕಸ ಗುಡಿಸುವವರು, ಕಸ ಎತ್ತುವವರು, ಸಾಗಿಸುವವರು ಹೀಗೆ ಹಲವು ವಿಭಾಗಗಳಾಗಿ ವಿಂಗಡಿಸಿ, ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ನಮ್ಮ ದ್ವನಿ ಹೆಚ್ಚಾಗದಂತೆ ಮಾಡುತ್ತಿದೆ ಎಂದರು.
ನಿರುದ್ಯೋಗವೆಂದರೆ ಕೇವಲ ಕೆಲಸವಿಲ್ಲದೆ ಇರುವುದು ಎಂದರ್ಥವಲ್ಲ. ಇದರ ಹಿಂದೆ ಕಳ್ಳತನ, ಸುಲಿಗೆ, ದರೋಡೆ, ಭಯೋತ್ಪಾಧನೆ ಯಂತಹ ಸಮಾಜ ವಿದ್ರೋಹಿ ಕೃತ್ಯಗಳು ಅಡಗಿರುವುದರಿಂದ ಸರಕಾರಗಳು ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಮುಂದಾಗಬೇಕು.ಆದರೆ ಆಳುವ ಸರಕಾರಗಳಿಗೆ ನಿರುದ್ಯೋಗ ಒಂದು ರಾಜಕೀಯ ವಿಷಯವಾಗಿದೆಯೇ ಹೊರತು ಇದರ ಹಿಂದಿನ ಸಮಾಜೋ ಅರ್ಥಿಕ ಸಮಸ್ಯೆಗಳ ಪರಿಚಯವೇ ಇಲ್ಲ. ಎಲ್ಲವನ್ನು ಚುನಾವಣೆಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ ಎಂದು ನ್ಯಾ.ನಾಗಮೋಹನ್ ದಾಸ್ ನುಡಿದರು.
ಶಿಕ್ಷಣ ೦ ಉದ್ಯೋಗದ ನಿರಾಕರಣೆ : ಸಮಾನ ಶಿಕ್ಷಣ ಎಂಬುದು ಮರೀಚಿಕೆಯಾಗಿದೆ, ಉದ್ಯೋಗವನ್ನು ನಿರಾಕರಿಸಲಾಗುತ್ತಿದೆ ಎಂದು ದಾಸ್ ಕಳವಳ ವ್ಯಕ್ತಪಡಿಸಿದರು. ಐಸಿಎಇ , ಸಿಬಿಎಸ್‌ಐ, ಖಾಸಗಿ, ಸರಕಾರಿ, ಅನುದಾನಿತ, ಅನುದಾನರಹಿತ ಹೀಗೆ ಹಲವು ಭಾಗಗಳಾಗಿ ವಿಂಗಡಿಸಿ, ಬಡವರು, ತಳಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದಿಂದ ವಂಚಿಸಲಾಗುತ್ತಿದೆ. ದೊಡ್ಡ ಕಟ್ಟಡ, ಪೀಠೋಪಕರಣ, ಪ್ರಯೋಗಾಲಯಗಳೇ ಶಿಕ್ಷಣವೆಂದು ಸರಕಾರಗಳು ತಿಳಿದಂತಿದೆ. ಮಾನವೀಯ ಕಳಕಳಿ,ಸಮಾಜಿಕ ಸ್ಪಂದನೆ ಇಲ್ಲದ ಶಿಕ್ಷಣ,ಜನರ ಕಷ್ಟಗಳಿಗೆ ಪರಿಹಾರ ದೊರಕಿಸುವಂತಹ ಶಿಕ್ಷಣ ಇಲ್ಲವಾಗಿದೆ.ಜಾತಿ, ಧರ್ಮ,ಭಾಷೆಯ ಹೆಸರಿನಲ್ಲಿ ಮಕ್ಕಳಲ್ಲಿ ವಿಷಬೀಜ ಬಿತ್ತಿ, ಹಾಳು ಮಾಡಲಾಗುತ್ತಿದೆ ಎಂದು ನಾಗಮೋಹನ್ ದಾಸ್ ಕಳವಳ ವ್ಯಕ್ತಪಡಿಸಿದರು.
ಇಂದು ಶಿಕ್ಷಣ ಪಡೆದವರಲ್ಲಿ ನಿರುದ್ಯೋಗಿಗಳು, ಅರೆಉದ್ಯೋಗಿಗಳು, ಉದ್ಯೋಗಕ್ಕೆ ಆರ್ಹರಲ್ಲದವರ ಕಾಣಬಹುದಾಗಿದೆ.ಪದವಿ ಪಡೆದ ಶೇ೮೦ರಷ್ಟು ಯುವಜನರಿಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯವೇ ಇಲ್ಲ.ದೇಶದಲ್ಲಿ60.40ಲಕ್ಷ ಹುದ್ದೆಗಳು ಖಾಲಿ ಇವೆ. ಕರ್ನಾಟಕದಲ್ಲಿಯೇ ಸುಮಾರು 2.59 ಲಕ್ಷ ಮಂಜೂರಾದ ಹುದ್ದೆಗಳೇ ಖಾಲಿ ಇವೆ.ಇವುಗಳನ್ನು ತುಂಬುವಾಗ ರೋಸ್ಟರ್ ಪದ್ದತಿ ಅನುಸರಿಸಬೇಕು.ಆಗ ತಳಸಮುದಾಯಗಳಿಗೆ ಉದ್ಯೋಗ ದೊರೆತು ಅವರು ಅರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರುತ್ತಾರೆ ಎಂಬ ಕಾರಣಕ್ಕೆ ಹುದ್ದೆಗಳನ್ನು ತುಂಬದೆ,ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಜೀತದಾಳುಗಳಂತೆ ದುಡಿಸಿಕೊಳ್ಳ ಲಾಗುತ್ತಿದೆ. ರಾಜ್ಯದ 29 ಇಲಾಖೆಗಳಲ್ಲಿ ಶೇ30ರಷ್ಟು ಉದ್ಯೋಗಿಗಳು ಹೊರಗುತ್ತಿಗೆ ಆಧಾರದಲ್ಲಿಯೇ ನೇಮಕಗೊಂಡವರು. ಇವರಿಗೆ ಯಾವುದೇ ಕಾರ್ಮಿಕ ಕಾಯ್ದೆ ಅನ್ವಯ ಆಗಲ್ಲ. ಇದು ಈ ದೇಶದ ದುರಂತ ಎಂದರು.
ದೇಶದಲ್ಲಿ ವಿಜ್ಞಾನ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದರೂ ಪೌರಕಾರ್ಮಿಕರ ಕೆಲಸಗಳಿಗೆ ಇವು ಬಳಕೆಯಾಗುತ್ತಿಲ್ಲ. ಇಂದಿಗೂ ಶೌಚಗುಂಡಿಗೆ ಪೌರಕಾರ್ಮಿಕರೇ ಇಳಿದು ಸ್ವಚ್ಚಗೊಳಿಸಬೇಕಿದೆ. ಒಂದು ವರದಿಯ ಪ್ರಕಾರ ವರ್ಷಕ್ಕೆ 3೦೦ ಜನ ಪೌರಕಾರ್ಮಿಕರು ತಾವು ಸೇವಾನಿರತರಾಗಿರುವಾಗಲೇ ಸಾವನ್ನಪ್ಪುತಿದ್ದಾರೆ.ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. 2017ರಲ್ಲಿ ಸರಕಾರದ ಆದೇಶ ಇದೆ. ಹಾಗಾಗಿ ಕಾನೂನಾತ್ಮಕ ಹೋರಾಟದಲ್ಲಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ.ಜನಪರ ಹೋರಾಟಗಳೇ ಜನರ ಸಮಸ್ಯೆಗಳ ಪರಿಹಾರಕ್ಕೆ ಇರುವ ಮದ್ದು, ಹಾಗಾಗಿ ಎಲ್ಲರೂ ಒಗ್ಗೂಡಿ ಹೋರಾಟ ನಡೆಸುವಂತೆ ನ್ಯಾ.ನಾಗಮೋಹನ್ ದಾಸ್ ಪೌರಕಾರ್ಮಿಕರಿಗೆ ಸಲಹೆ ನೀಡಿದರು.
ಹಿರಿಯ ಚಿಂತಕ ಕೆ.ದೊರೆರಾಜು ಮಾತನಾಡಿ,ಪೌರಕಾರ್ಮಿಕರನ್ನು ಘನತೆಯಿಂದ ನಡೆಸಿಕೊಳ್ಳದಿರುವುದು ಈ ದೇಶದ ದುರಂತ. ಒಂದು ದಿನ ಅವರ ಕೆಲಸಕ್ಕೆ ಸಾಮೂಹಿಕ ರಜೆ ಹಾಕಿದರೆ, ಇಡೀ ದೇಶವೇ ಕೊಚ್ಚೆಗುಂಡಿಯಂತಾಗುತ್ತದೆ.ಹಾಗಾಗಿ ಪೌರಕಾರ್ಮಿಕರ ವೇತನ ಕುರಿತಂತೆ ಒಂದು ರಾಷ್ಟ್ರೀಯ ನೀತಿಯ ಅಗತ್ಯವಿದೆ.ಪೌರಕಾರ್ಮಿಕರನ್ನು ತಮ್ಮ ಬದುಕಿನ ಉನ್ನತ್ತಿಕರಣದತ್ತ ಗಮನಹರಿಸಬೇಕು. ನಮ್ಮಂತೆ ನಮ್ಮ ಮಕ್ಕಳು ಪೌರಕಾರ್ಮಿಕರಂತೆ ನೋಡಿಕೊಂಡರೆ, ಅದಕ್ಕಿಂತ ದೊಡ್ಡ ಬದಲಾವಣೆ ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಪೌರಕಾರ್ಮಿಕರು ಚಿಂತನೆ ನಡೆಸಬೇಕಿದೆ ಎಂದರು.
ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ ಮಾತನಾಡಿ,ಸಮಾನ ಕೆಲಸಕ್ಕೆ ಸಮಾನ ವೇತನ ಕುರಿತಂತೆ ನಿರ್ದೇಶಕರ ಕಚೇರಿಯಲ್ಲಿ ಈಗಾಗಲೇ ಚರ್ಚೆ ಸಾಧ್ಯವಾದಷ್ಟು ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿಸಿ, ಉತ್ತಮ ಪ್ರಜೆಗಳಾಗಿ ರೂಪಿಸಿ ಎಂದು ಸಲಹೆ ನೀಡಿದರು. ಸ್ಲಂ ಜನಾಂದೋಲನದ ನರಸಿಂಹಮೂರ್ತಿಅವರು ಮಾತನಾಡಿ ಮುನಿಸಿಪಲ್ ಕಾರ್ಮಿಕರ ಐಕ್ಯ ಹೋರಾಟವನ್ನು ನಡೆಸಬೇಕಾಗಿದೆ ಎಂದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಅವರು ಪ್ರಾಸ್ತವಿಕವಾಗಿ ಮಾತನಾಡಿ, ನಾಗರಿಕ ಅಗತ್ಯಗಳಾದ ಸ್ವಚ್ಚತೆ, ನೀರು ಸರಬರಾಜು, ಒಳ ಚರಂಡಿ, ಪಾರ್ಕ , ಸ್ಮಶಾಣ, ಗಳಲ್ಲಿ ದುಡಿಯುವ ಕಾರ್ಮಿಕರು 80% ರಷ್ಟು ಗುತ್ತಿಗೆಆಧಾರದಲ್ಲಿ ಇದೆ , ಕಾನೂನು ಬದ್ದ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹರೀಶ್ ನಾಯ್ಕ ವಹಿಸಿದ್ದರು.ಸಿಐಟಿಯುನ ಎನ್.ಕೆ.ಸುಬ್ರಮಣ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು, ಸಿ. ವೆಂಕಟೇಶ್ ಸ್ವಾಗತಿಸಿ, ಕುಮಾರ್ ವಂದಿಸಿದರು, ವೇದಿಕೆಯಲ್ಲಿ ಶಿವರಾಜು , ಸ್ಯಾಮ್ ಸನ್, ಲಕ್ಮಣ ಹಂದ್ರಾಳ್, ಶಾನೂನು ಗುಡ್ಡಾರ್, ಪ್ರಕಾಶ್, ಡಿ,ಎಸ್.ಎಸ್, ಪಿ. ಎನ್, ರಾಮಯ್ಯ, ಸಪಾಯಿ ಕರ್ಮಚಾರಿ ಕಾವಲು ಸಮಿತಿಯ ಓಬಳೇಶ್ ಇತರರು ಇದ್ದರು.