ಶಿವಮೊಗ್ಗ : ಪರವಾನಗಿ ಇಲ್ಲದೆ ಬಂದೂಕು ರಿಪೇರಿ ಮಾಡುತ್ತಿದ್ದ ಆರೋಪ ಸಂಬಂಧ ಪೊಲೀಸರು ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ 9 ನಾಡ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.
ಪಾಲಾಕ್ಷಪ್ಪ (47) ಬಂಧಿತ ಆರೋಪಿ. ಭದ್ರಾವತಿ ತಾಲೂಕು ಶಂಕರಘಟ್ಟ ಗ್ರಾಮದ ಮನೆಯಲ್ಲಿ ಪಾಲಾಕ್ಷಪ್ಪ ನಾಡ ಬಂದೂಕುಗಳ ರಿಪೇರಿ ಮಾಡುತ್ತಿದ್ದ. ಖಚಿತ ಮಾಹಿತಿ ಹಿನ್ನೆಲೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಪಾಲಾಕ್ಷಪ್ಪನ ಮನೆಯಲ್ಲಿ 9 ನಾಡ ಬಂದೂಕುಗಳು ಸಿಕ್ಕಿವೆ. ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಆಯುಧ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ರೀತಿಯ ನಾಡ ಪಿಸ್ತೂಲ್ ಗಳು ರಿಪೇರಿಗೆ ಎಂದು ಬಂದು ಹೋರಾಟಗಾರರನ್ನು ಕೊಲೆ ಮಾಡುವ ಕೃತ್ಯಕ್ಕೆ ಬಳಕೆಯಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಇವರುಗಳನ್ನು ಕೊಲ್ಲಲು ನಾಡ ಬಂದೂಕನ್ನು ಬಳಸಲಾಗಿತ್ತು. ಹಾಗಾಗಿ ಈ ರೀತಿ ಪರವಾನಿಗೆ ಇಲ್ಲದ ಬಂದೂಕುಗಳು ಪಾಲಾಕ್ಷಪ್ಪಬಳಿ ಹೇಗೆ ಬಂದವು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಕೋಮು ಸೌಹಾರ್ದತೆ ಕದಡುವ ಕೆಲಸಗಳು ನಡೆಯುತ್ತಿವೆ. ಕೊಲೆಗಳನ್ನು ನಡೆಯುವ ಮೂಲಕ ಕೋಮುವಿಷ ಬೀಜ ಬಿತ್ತಲಾಗುತ್ತಿದೆ. ಈ ಸಂದರ್ಭದಲ್ಲಿ 9 ನಾಡ ಬಂದೂಕುಗಳು ಪತ್ತೆಯಾಗಿದ್ದು ಶಿವಮೊಗ್ಗದ ಜನರನ್ನು ಆತಂಕಕ್ಕೆ ತಳ್ಳಿದೆ.