ಮೈಸೂರು : ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕ ಅವಿನಾಶ್ ಅವರನ್ನು ಅತಿಥಿಗಳಾಗಿ ಆಹ್ವಾನಿಸಿದ ವಿಚಾರಕ್ಕೆ ಪ್ರಗತಿಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪ್ರತಿವರ್ಷದಂತೆ ಈ ವರ್ಷವೂ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜನೆ ಮಾಡಲಾಗಿದೆ. ಆದರೆ ಉತ್ಸವಕ್ಕೆ ಬಿಜೆಪಿ ಪರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹಾಗೂ ನಟಿ ಕಮ್ ಬಿಜೆಪಿ ಮುಖಂಡೆ ಮಾಳವಿಕಾ ಅವಿನಾಶ್ ಕರೆಸಲಾಗುತ್ತಿದೆ. ಇದಕ್ಕೆ ಹವ್ಯಾಸಿ ರಂಗಕರ್ಮಿಗಳು, ಪ್ರಗತಿಪರ ಚಿಂತಕರು ಹಾಗೂ ರಂಗಾಯಣದ ಮಾಜಿ ನಿರ್ದೇಶಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬಹುರೂಪಿ ನಾಟಕೋತ್ಸವಕ್ಕೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ
ಚಕ್ರವತಿ ಸೂಲಿಬೆಲೆ ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ಟೀಕೆಗೆ ಒಳಗಾಗಿದ್ದಾರೆ. ಇತ್ತ ಮಾಳವಿಕಾ ಅವಿನಾಶ್ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರು ರಂಗಭೂಮಿಗೆ ಏನು ಕೊಡುಗೆ ನೀಡಿದ್ದಾರೆ?, ಏತಕ್ಕಾಗಿ ಕರೆಸಲಾಗುತ್ತಿದೆ ಎಂದು ಜನಪರ ಹೋರಾಟಗಾರರು ಪ್ರಶ್ನಿಸಿದ್ದಾರೆ. ಸೂಲಿಬೆಲೆ ಹಾಗೂ ಮಾಳವಿಕ ಅವರನ್ನು ಆಹ್ವಾನಿಸಿದರೆ, ನಾಟಕ ನಡೆಯಲು ಬಿಡುವುದಿಲ್ಲ ಎಂದು ಪ್ರಗತಿಪರರು ಎಚ್ಚರಿಕೆ ನೀಡಿದ್ದು. ಈ ಹಿನ್ನೆಲೆಯಲ್ಲಿ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಹಿರಿಯ ಹೋರಾಟಗಾರ ಪ.ಮಲ್ಲೇಶ್, ಮಾಜಿ ನಿರ್ದೇಶಕ ಜನ್ನಿ, ಕಲಾವಿದ ಮೈಮ್ ರಮೇಶ್ ಸೇರಿದಂತೆ ಹಲವರ ವಿರುದ್ಧ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ – ತನಿಖೆಗೆ ಆಗ್ರಹ
ಕಾರ್ಯಪ್ಪ ವಜಾಕ್ಕೆ ಆಗ್ರಹ : ಮಾಳವಿಕಾ ಅವಿನಾಶ್ ಹಾಗೂ ಚಕ್ರವರ್ತಿ ಸೂಲಿಬೆಲೆಯನ್ನು ಕರೆಸಿಯೇ ಸಿದ್ಧ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿಕೆ ನೀಡಿದ್ದಾರೆ. ಇದು ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾರ್ಯಪ್ಪ ಅವರನ್ನು ವಜಾಗೊಳಿಸಿ ಎಂದು ಪ್ರತಿಭಟನೆ ನಡೆಸಿದ್ದಾರೆ. ರಂಗಾಯಣದಲ್ಲಿ ಕಾರ್ಯಪ್ಪ ಅವರು ಬಲಪಂಥೀಯ ಧೋರಣೆಯನ್ನು ಹೇರುತ್ತಿದ್ದಾರೆ. ಒಂದು ಪಕ್ಷದ ಜೊತೆ ಗುರುತಿಸಿಕೊಂಡಿರುವವರನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತಿದೆ. ರಂಗಾಯಣದಲ್ಲಿ ಮತೀಯ ವಿಚಾರ ಮತ್ತು ಪ್ರಚೋದಿಸುವುವರಿಗೆ ಆಧ್ಯತೆಯನ್ನು ನೀಡಬಾರದು. ಅಲ್ಲಿ ಕಲೆಯನ್ನು ಪ್ರದರ್ಶಿಸುವ ಜಾಗ ಅಲ್ಲಿ ಜಾತಿ- ಧರ್ಮ- ಪಕ್ಷವನ್ನು ತರಬಾರದು ಆ ಕಾರಣದಿಂದ ಬಹುರೂಪಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕಾ ಅವಿನಾಶ್ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. “ಡಿ.17ರಂದು ರಂಗಾಯಣದ ಆವರಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರರು ತಿಳಿಸಿದ್ದು. ಡಿಸೆಂಬರ್ 20 ರಂದು ರಂಗಾಯಣ ಉಳಿಸಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.