ಮೈಸೂರು ವಿವಿ: ಕಾನೂನು ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ

ಮೈಸೂರು: ಮೈಸೂರು ವಿಶ್ವವಿದ್ಯಾಲಯವು ಕಾನೂನು ವಿಷಯಗಳ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿದೆ.  ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪರ, ವಿರೋಧ ಚರ್ಚೆ ನಡೆಯಿತು.

ಮೊದಲಿಗೆ ಕನ್ನಡದಲ್ಲಿ  ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ, ಒಂದು ವೇಳೆ ಪರೀಕ್ಷೆಗೆ ಅವಕಾಶ ನೀಡಿದರೆ ಬೋಧನೆಯನ್ನೂ ಕನ್ನಡದಲ್ಲಿಯೇ ಮಾಡುವಂತೆ ಒತ್ತಾಯ ಕೇಳಿ ಬರುತ್ತದೆ. ಇದರಿಂದ ವಿದೇಶಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಅಲ್ಲದೆ ಕನ್ನಡದಲ್ಲಿ ಪುಸ್ತಕಗಳ ಕೊರತೆ ಇದೆ. ಇದ್ದರೂ ಐದಾರು ಪುಸ್ತಕ ಮಾತ್ರ ಇದೆ. ಅವುಗಳೂ ಕೂಡ ಸರಿಯಾಗಿ ಅನುವಾದವಾಗಿಲ್ಲ. ಇಂತಹ ಪುಸ್ತಕಗಳ ಅಧ್ಯಯನದಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಕೆಳಕ್ಕೆ ಇಳಿಯಲಿದೆ. ಕೋರ್ಟ್‌ನ ತೀರ್ಪುಗಳು ಇಂಗ್ಲಿಷ್‌ನಲ್ಲಿಯೇ ಇರುತ್ತವೆ. ಅವುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ಕಷ್ಟದ ಕೆಲಸ. ಆದ್ದರಿಂದ ಇಂಗ್ಲಿಷ್‌ನಲ್ಲೇ ಬೋಧನೆ, ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕಾನೂನು ವಿಭಾಗದ ಡೀನ್‌ ಪ್ರೊ. ರಮೇಶ್‌ ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪವೂ ವ್ಯಕ್ತವಾಯಿತು. ಒಂದೆರಡು ಸಂಖ್ಯೆಯಲ್ಲಿರುವ ವಿದೇಶಿ ವಿದ್ಯಾರ್ಥಿಗಳಿಗಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಸ್ಥಳೀಯ ವಿದ್ಯಾರ್ಥಿಗಳು ಬಹುಪಾಲು ಹಳ್ಳಿಗಾಡಿನಿಂದ ಬಂದಿರುತ್ತಾರೆ. ಅವರಿಗೆ ಇಂಗ್ಲೀಷ್ ಗಿಂತ ಕನ್ನಡದಲ್ಲಿ ಬೋಧಿಸಿದರೆ ಹೆಚ್ಚು ಸೂಕ್ತ ಎನಿಸುತ್ತದೆ ಎಂದು ಕೆಲವರು‌ ತಮ್ಮ ಅಭಿಪ್ರಾಯ ಮಂಡಿಸಿದರು.

ವಿಜ್ಞಾನಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಕೈಗೊಂಡಿರುವ ಶಿಫಾರಸುಗಳ ಅನುಮೋದನೆಗಾಗಿ ಕಾನೂನು ವಿಭಾಗದ ಡೀನ್‌ ಪ್ರೊ. ರಮೇಶ್‌ ಈ ವಿಷಯ ಮಂಡಿಸಿದರು. ಆಗ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ನಾಮ ನಿರ್ದೇಶನಗೊಂಡಿರುವ ರಾಜಶೇಖರ್‌ ಬಿಎ ಎಲ್‌ಎಲ್‌ಎಂ ಮತ್ತು ಎಲ್‌ಎಲ್‌ಎಂ ಬೋಧನೆ ಮತ್ತು ಪ್ರಶ್ನೆಪತ್ರಿಕೆ ಇಂಗ್ಲಿಷ್‌ನಲ್ಲಿ ಮಾತ್ರ ಇದೆ. ಇದರಿಂದ ಕನ್ನಡದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಕನ್ನಡ ಭಾಷೆಯಲ್ಲೂ ಪ್ರಶ್ನೆಪತ್ರಿಕೆ ನೀಡಬೇಕು ಎಂದು ಆಗ್ರಹಿಸಿದರು.

ಕೆಲ ಡೀನ್‌ಗಳು, ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ವಿಷಯಗಳನ್ನು ಈಗಾಗಲೇ ಕನ್ನಡದಲ್ಲೇ ಬೋಧನೆ ಮತ್ತು ಪರೀಕ್ಷೆ ನಡೆಸಲಾಗುತ್ತದೆ. ಅಂತಹದಲ್ಲಿ ಕಾನೂನು ವಿಷಯದಲ್ಲಿ ಇದನ್ನು ಅಳವಡಿಕೆಗೆ ಅಂತಹ ಕಷ್ಟವಾಗುವುದಿಲ್ಲ ಎಂದರು.

ಕುಲಪತಿ ಪ್ರೊ.ಜಿ. ಹೇಮಂತ್‌ ಕುಮಾರ್‌, ಕಾನೂನು ವಿಷಯಗಳ ಬೋಧನೆ ಇಂಗ್ಲಿಷ್‌ನಲ್ಲಿ ಮತ್ತು ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಅವಕಾಶ ನೀಡಲಾಗುವುದು. ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲೂ ಇದೇ ಪದ್ಧತಿ ಅನುಸರಿಸಲಾಗುತ್ತಿದೆ. ಅದೇ ರೀತಿ ನಮ್ಮಲ್ಲೂ ಜಾರಿ ಮಾಡಲಾಗುವುದು. ಭಾಷೆ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎನ್‌ಇಪಿ ಅಡಿ ಪಠ್ಯಕ್ರಮ ಅಳವಡಿಸಿಕೊಂಡಿರುವ ಕುರಿತು ಅನುಮೋದನೆ ನೀಡಲಾಯಿತು. ಹೊಸದಾಗಿ ಸ್ಥಾಪಿಸಿರುವ ದತ್ತಿ ಚಿನ್ನದ ಪದಕ ಮತ್ತು ಹಲವು ಕಾಲೇಜಿಗೆ ಸಂಯೋಜನೆ ಮುಂದುವರೆಸುವುದಕ್ಕೆ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಕುಲಸಚಿವರಾದ ಪ್ರೊ.ಆರ್‌. ಶಿವಪ್ಪ, ಪ್ರೊ.ಎ.ಪಿ. ಜ್ಞಾನಪ್ರಕಾಶ್‌ ಮೊದಲಾದವರು ಇದ್ದರು.

Donate Janashakthi Media

Leave a Reply

Your email address will not be published. Required fields are marked *