ಸಂಜೆಯ ನಂತರ ಮಹಿಳೆ ಹೊರ ಬರುವುದೇ ತಪ್ಪು: ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ, ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಿ ನ್ಯಾಯ ದೊರಕಿಸಬೇಕಾದ ತುರ್ತು ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯುವತಿ ಮತ್ತು ಯುವಕ ಆ ಸಮಯದಲ್ಲಿ ಅಲ್ಲಗೆ ಹೋಗಿದ್ದೇ ತಪ್ಪು, ಯುವತಿ ಸಂಜೆ 7.30 ಕ್ಕೆ ಅಲ್ಲಿಗೆ ಹೋಗಬಾರದಿತ್ತು ಎಂದು ಗೃಹ ಸಚಿವರು ಹೇಳಿದ್ದಾರೆ. ಗೃಹ ಸಚಿವರ ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿವೆ.

ಮಹಾತ್ಮಾ ಗಾಂಧೀಜಿಯವರು ಮಧ್ಯರಾತ್ರಿಯಲ್ಲಿ ಮಹಿಳೆ ಒಂಟಿಯಾಗಿ ಓಡಾಡುವಂತಾದಾಗ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ ಎಂದು ತಿಳಿಸಿದ್ದರು. ಎರಡು ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

ಇದನ್ನು ಓದಿ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ʻʻಮೈಸೂರು ಘಟನೆಯಲ್ಲಿ ಕಾಂಗ್ರೆಸ್ ನವರು ರಾಜಕೀಯ ಮಾಡಬಾರದು. ಇದು ರಾಜಕೀಯ ಮಾಡುವ ಘಟನೆಯಲ್ಲ. ಕಾಂಗ್ರೆಸ್ ಅವಧಿಯಲ್ಲಿ ಎಲ್ಲವೂ ಸುಖವಾಗಿತ್ತಾ? ಇಂತಹ ಘಟನೆಗಳು ಆಗಿರಲಿಲ್ವಾ? ಅವರ ಅವಧಿಯಲ್ಲೂ ನಡೆದಿತ್ತು. ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಆರೋಪಮಾಡುತ್ತಿದ್ದಾರೆ. ರಾಜಕೀಯ ಲಾಭ ಪಡೆಯುವುದು ಸರಿಯಲ್ಲ ವಾಗ್ದಾಳಿ ನಡೆಸಿದರು.

ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ಗಂಭೀರವಾಗಿದ್ದು ಪೊಲೀಸರು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ತನಿಖೆಗಾಗಿ ಬೆಂಗಳೂರಿನಿಂದ ಹಿರಿಯ ಅಧಿಕಾರಿ ಪ್ರತಾಪ್ ರೆಡ್ಡಿಯವರನ್ನು ಕಳುಹಿಸಲಾಗಿದೆ. ತನಿಖಾ ತಂಡಗಳನ್ನು ರಚಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕ್ರಮವಹಿಸಲಾಗುವುದು ಎಂದರು.

ಮೈಸೂರು ನಗರದ ಹೊರವಲಯದಲ್ಲಿ ನಡೆದ ಅತ್ಯಾಚಾರವಾಗಿದೆ. ಕಾಂಗ್ರೆಸ್ ನವರು ನನ್ನನ್ನು ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಲಾಭ ಪಡೆಯಲು ನೋಡುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಗೃಹ ಸಚಿವರ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಘಟನೆ ನಡೆದು ಎರಡು ದಿನಗಳು ಕಳೆದರೂ ಸಹ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಇದು ಪೊಲೀಸ್ ಇಲಾಖೆಯ ವೈಫಲ್ಯವಾಗಿದ್ದು ಇಲಾಖೆಯ ಬಗ್ಗೆ ನಾಚಿಕೆಯೆನಿಸುತ್ತದೆ. ರೇಪ್ ಪದ ಬಿಜೆಪಿಯವರಿಗೆ, ಗೃಹ ಸಚಿವರಿಗೆ ಸರಳ, ಪ್ರಿಯವಾದ ಪದ ಅಂತ ಕಾಣುತ್ತಿದೆ. ಅವರ ಹೇಳಿಕೆಗೆ ಬಿಜೆಪಿ ಪಕ್ಷದ ನಾಯಕರೆಲ್ಲರೂ ಉತ್ತರ ನೀಡಬೇಕು ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ʻಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ರಾಜ್ಯದಲ್ಲಿ ಕುಸಿದುಬಿದ್ದಿರುವ ಕಾನೂನು-ಸುವ್ಯವಸ್ಥೆಗೆ ಸಾಕ್ಷಿಯಾಗಿದೆ. ಪೊಲೀಸರು ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಿ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಬೇಕು. ಆ ಮೂಲಕ ಭಯಭೀತಿತರಾದ ಜನರಲ್ಲಿ ಧೈರ್ಯ ತುಂಬಬೇಕಿದೆ. ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಅಪರಾಧಗಳ‌ ಸಂಖ್ಯೆ‌ ಹೆಚ್ಚಾಗುತ್ತಿದೆ ಎಂದಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *