ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿಯ ಜಂಬೂ ಸವಾರಿ ಮೆರವಣಿಗೆ ವೇಳೆ ಒಟ್ಟು ಐವತ್ತೊಂದು ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಸ್ತಬ್ಧ ಚಿತ್ರಗಳ ಪಾಲ್ಗೊಳ್ಳುವಿಕೆ ಕುರಿತಾಗಿ ಮೈಸೂರು ದಸರಾ ಮಹೋತ್ಸವ 2024ರ ಸ್ತಬ್ಧ ಚಿತ್ರ ಉಪ ಸಮಿತಿಯಿಂದ ಕೈಪಿಡಿ ಬಿಡುಗಡೆಯಾಗಿದ್ದು, ಈ ವರ್ಷ ಅತೀ ಹೆಚ್ಚು ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತಿವೆ.
ಅತ್ಯುತ್ತಮ ಮೂರು ಸ್ತಬ್ಧ ಚಿತ್ರಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನೂ ನೀಡಲಾಗುತ್ತದೆ.ರಾಜ್ಯದ ಎಲ್ಲಾ ಮೂವತ್ತೊಂದು ಜಿಲ್ಲೆಗಳ ಸ್ತಬ್ಧ ಚಿತ್ರಗಳ ಜೊತೆಗೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸ್ತಬ್ದ ಚಿತ್ರಗಳು ಜಂಬೂ ಸವಾರಿ ಮೆರವಣಿಗೆಯುದ್ದಕ್ಕೂ ಸಾಗಲಿವೆ. ಶುಕ್ರವಾರ ಸಂಜೆ ವೇಳೆಗೆ ಎಲ್ಲಾ ಸ್ತಬ್ಧ ಚಿತ್ರಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಮೈಸೂರಿನಲ್ಲಿಯೇ ಎಲ್ಲಾ ಸ್ತಬ್ಧ ಚಿತ್ರಗಳನ್ನು ಸಿದ್ಧಗೊಳಿಸಲಾಗುತ್ತಿದೆ.
ಜಂಬೂ ಸವಾರಿ ದಿನವಾಗಿರುವ ಶನಿವಾರ ಮಧ್ಯಾಹ್ನ ಮಧ್ಯಾಹ್ನ 1.41 ಗಂಟೆಯಿಂದ 2.10 ಗಂಟೆಯವರೆಗೆ ಮೈಸೂರು ಅರಮನೆ ಆವರಣದ ಬಲರಾಮ ದ್ವಾರದಲ್ಲಿ ನಂದಿ ಧ್ವಜ ಪೂಜೆಯಲ್ಲಿ ಭಾಗಿಯಾಗಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಂಜೆ 4 ಗಂಟೆಯಿoದ 4.30 ಗಂಟೆಯವರೆಗೆ ಅರಮನೆಯ ಒಳ ಆವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಉದ್ಘಾಟನೆ ಮಾಡಲಿದ್ದಾರೆ.
ನಂತರ ರಾತ್ರಿ ಏಳು ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಆಯೋಜಿಸಿರುವ ಪಂಜಿನ ಕವಾಯತು ಅನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗಿಯಾಗಲಿದ್ದಾರೆ. ಈ ಮಧ್ಯೆ ಜಂಬೂ ಸವಾರಿ ಮೆರವಣಿಗೆಗಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ, ಅಶ್ವಾರೋಹಿ ದಳ, ಪೊಲೀಸ್ ಇಲಾಖೆಯ ಎಂಟು ತುಕಡಿಗಳು ಸೇರಿದಂತೆ ಎರಡು ಹಂತದ ಭದ್ರತೆ ಕೈಗೊಳ್ಳಲಾಗಿದೆ.
ಇದನ್ನು ನೋಡಿ : ಕೇಂದ್ರ ಸರ್ಕಾರ ಮಕ್ಕಳ ಹಕ್ಕುಗಳನ್ನು ಕಸಿಯುತ್ತಿದೆ – ಯಮುನಾ ಗಾಂವ್ಕರ್ Janashakthi Media