ವಿಶ್ವವಿಖ್ಯಾತ ಮೈಸೂರು ದಸರಾಗೆ ಎಸ್. ಎಂ. ಕೃಷ್ಣ ಅವರಿಂದ ವಿದ್ಯುಕ್ತ ಚಾಲನೆ

ಮೈಸೂರು: ಸರಳ, ಸಾಂಪ್ರದಾಯಿಕವಾಗಿ ಜರುಗಿದ ಐತಿಹಾಸಿಕ ವಿಶ್ವವಿಖ್ಯಾತ 411ನೇ ಮೈಸೂರು ದಸರಾ ಮಹೋತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಗುರುವಾರ ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಮೈಸೂರು ದಸರಾ ಮಹೋತ್ಸವ 2021ಕ್ಕೆ ಎಸ್. ಎಂ. ಕೃಷ್ಣ ದೀಪ ಬೆಳಗಿ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಉದ್ಘಾಟಕ ಎಸ್.ಎಂ.ಕೃಷ್ಣ ಅವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ನಂತರ ಶ್ರೀಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹತ್ತು ಹನ್ನೆರಡು ವರ್ಷಗಳ ಬಾಲಕನಾಗಿದ್ದಾಗ ಮೈಸೂರಿಗೆ‌ ನಮ್ಮಪ್ಪ ನನ್ನನ್ನು ಓದಲು‌ ಕಳಿಸಿದರು. ಒಂಟಿಕೊಪ್ಪಲ್‌ ಮಿಡ್ಲ್ ಸ್ಕೂಲ್, ಮಹಾಜನ ಹೈಸ್ಕೂಲ್, ಯುವರಾಜ ಕಾಲೇಜು, ಮಹಾರಾಜ ಕಾಲೇಜಿನಲ್ಲಿ‌ ಕಲಿತೆ. ಮೈಸೂರು ಜೊತೆಯಲ್ಲೇ ಬೆಳೆದೆ. ಪ್ರತಿ ದಿನ ಬೆಟ್ಟದ ಕಡೆ ನೋಡಿ‌ ಕೈ ಮುಗಿದು ಶಾಲೆಗೆ ಹೋಗುತ್ತಿದ್ದೆ’ ಎಂದು ಸ್ಮರಿಸಿದರು.

‘ಅಪ್ಪ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ಈ ಪಿಡುಗುಗಳಿರಲಿಲ್ಲ. ಮಹಾ ಸಡಗರದಿಂದ ದಸರಾ ನಡೆಯುತ್ತಿತ್ತು.‌ ಜನ ವಿದೇಶಗಳಿಂದಲೂ ಬರುತ್ತಿದ್ದರು. ಜಗನ್ಮೋಹನ ಅರಮನೆಯಲ್ಲಿ ಪ್ರಜಾಪ್ರತಿನಿಧಿ ಸಭೆ ನಡೆಯುತ್ತಿತ್ತು. ಮರಿಮಲ್ಲಪ್ಪ ಹೈಸ್ಕೂಲಿನಲ್ಲಿ ಪ್ರತಿನಿಧಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು. ಡಿ.ದೇವೇಂದ್ರಪ್ಪ, ಪಿಟೀಲು ಚೌಡಯ್ಯ‌ ಪ್ರತಿ ರಾತ್ರಿ ಸಂಗೀತ ಕಚೇರಿಗಳನ್ನು ಏರ್ಪಡಿಸುತ್ತಿದ್ದರು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಇದನ್ನೂ ಓದಿ :  ಮಹಿಷಾ ದಸರಾ ಆಚರಣೆ : ಸಂವಿಧಾನದ ರಕ್ಷಕರೇ ಭಕ್ಷರಾಗಿದ್ದಾರೆಂದು ಜ್ಞಾನಪ್ರಕಾಶ ಸ್ವಾಮೀಜಿ ಕಿಡಿ

”ಯದುಕುಲದ ಅರಸರು ಈ ಹಬ್ಬವನ್ನು ನಾಡ ಹಬ್ಬವನ್ನಾಗಿ ಪರಿವರ್ತಿಸಲು ಶ್ರಮ‌ಪಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಸೇರಿದಂತೆ ಹಲವು ಅರಸರು, ಸರ್.ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರಂಥ‌ ದಿವಾನರು ದಸರಾಗೆ ವಿಶೇಷ ಮೆರುಗು ತಂದುಕೊಟ್ಟರು’ ಎಂದು ಹೇಳಿದರು.

‘ ಕೃಷ್ಣರಾಜ ಜಲಾಶಯವನ್ನು ನಿರ್ಮಿಸಲು ರಾಜಮನೆತನದ ಒಡವೆಗಳನ್ನು ಒತ್ತೆ ಇಟ್ಟು ಹಣ ತಂದ ಅರಸರಿಗೆ ಲಕ್ಷಾಂತರ ರೈತರ ಪರವಾಗಿ ಅನಂತ ವಂದನೆಗಳು. ರಾಜಶಾಹಿಯನ್ನು ನಾವು ವಿರೋಧಿಸುತ್ತೇವೆ. ಆದರೆ ಅವರು ಮಾಡಿದ ಇಂಥ ಜನಪರ‌ ಕೆಲಸಗಳನ್ನು ಇತಿಹಾಸದಿಂದ ಅಳಿಸಲು ಆಗುವುದಿಲ್ಲ’ ಎಂದು ಎಸ್ ಎಂ ಕೃಷ್ಣ ಹೇಳಿದರು.

ದಸರಾ ಪ್ಯಾಕೇಜ್ ಟೂರ್ ಮಾಡಿ : ತಮ್ಮ ಭಾಷಣದ ಸಂದರ್ಭದಲ್ಲಿ ದಸರಾ ಪ್ಯಾಕೇಜ್ ಟೂರಿಸಂಗೆ ಸಲಹೆ ನೀಡಿದ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದರಿಂದ ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗುತ್ತದೆ. ಸಿಂಗಾಪುರ ನೋಡಲು ಲಕ್ಷಾಂತರ ಜನ ಹೋಗುತ್ತಾರೆ. ಸಿಂಗಾಪುರ ತುಂಬಾ ಸ್ವಚ್ಛವಾಗಿರುವುದರಿಂದ ಹೋಗುತ್ತಾರೆ. ನಮ್ಮ ಮೈಸೂರನ್ನು ಕೂಡ ಸುಂದರ ನಗರ ಮಾಡಬೇಕು. ಪ್ರಕೃತಿದತ್ತವಾಗಿ ಎಲ್ಲ ಸಿಗಬೇಕಾದರೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳ ಪತ್ನಿ ಚೆನ್ನಮ್ಮ ಬಸವರಾಜ ಬೊಮ್ಮಾಯಿ, ಪತ್ನಿ ಸಹಕಾರ ಹಾಗೂ ಮೈಸೂರು- ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಹಾಗೂ ಸಚಿವರುಗಳಾದ ವಿ.ಸುನೀಲ್ ಕುಮಾರ್, ಆರ್‌.ಅಶೋಕ್. ಭೈರತಿ ಬಸವರಾಜ್, ಡಾ.ಕೆ.ಸಯಧಾಕರ್ ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಶಶಿಕಲಾ ಜೊಲ್ಲೆ, ನಾರಾಯಣಗೌಡ, ಸಂಸದರುಗಳಾದ ಅಣ್ಣಾ ಸಾಹೇಬ್ ಜಿಲ್ಲೆ, ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ, ಶಾಸಕರುಗಳಾದ ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ, ಕೆ.ಮಹದೇವ್ , ಹರ್ಷವರ್ಧನ್, ಸಿ.ಎಸ್.ನಿರಂಜನ್ ಕುಮಾರ್, ಅರವಿಂದ್ ಬೆಲ್ಲದ್, ವಿಧಾನ ಪರಿಷತ್ ಸದಸ್ಯರುಗಳಾದ ಎಚ್.ವಿಶ್ವನಾಥ್, ಮುನಿರಾಜೇಗೌಡ, ಕೆ.ಟಿ.ಶ್ರೀಕಂಠೇಗೌಡ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಉಪಮೇಯರ್ ಅನ್ವರ್ ಬೇಗ್, ಚಾಮುಂಡಿ ಬೆಟ್ಟ ಗ್ರಾ.ಪಂ.ಅಧ್ಯಕ್ಷ ಭರತ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಪ್ರವಾಸೋಧ್ಯಮ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಎಲ್.ಶಿವಲಿಂಗಯ್ಯ, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಕೋಟೆ ಶಿವಣ್ಣ, ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಎಲ್.ಆರ್.ಮಹದೇವಸ್ವಾಮಿ, ಪಣೀಶ್, ಅಪ್ಪಣ್ಣ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ವಾಗತಿಸಿದರು.

Donate Janashakthi Media

Leave a Reply

Your email address will not be published. Required fields are marked *