ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ದಲಿತ ಯುವಕನ ಬರ್ಬರ ಕೊಲೆ

ಕಲಬುರಗಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದ ಅಂಬೇಡ್ಕರ ಸರ್ಕಲ್ ಬಳಿ ಕಳೆದ ರಾತ್ರಿ ನಡೆದಿದೆ.

ಕೊಲೆಯಾದ ಯುವಕನನ್ನು ವಾಡಿ ಪಟ್ಟಣದ ವಿಜಯ ಕಾಂಬಳೆ ಎಂದು ಗುರುತಿಸಲಾಗಿದೆ. ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವಿಜಯ ಕಾಂಬಳೆ ವಾಡಿ ಪಟ್ಟಣದಲ್ಲಿ ವಾಸವಿರುವ ಅಲ್ಪಸಂಖ್ಯಾತ ಕುಟುಂಬದ ಯುವತಿಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದನು. ಯುವತಿಯೂ ಸಹ ಈತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ಈ ವಿಚಾರವಾಗಿ ಯುವತಿಯ ಕಡೆಯವರು ವಿಜಯ ಕಾಂಬಳೆಯೊಂದಿಗೆ ಕಳೆದ ಎಂಟು ತಿಂಗಳ ಹಿಂದೆಯೂ ಜಗಳ ಮಾಡಿದ್ದರು. ಆಗ ವಿಜಯ ಕಾಂಬಳೆ ಮೇಲೆ ಮಾರಣಾಂತಿಕ ಹಲ್ಲೆಯೂ ನಡೆದಿತ್ತು. ಅಲ್ಲದೇ ವಿಜಯ ಕಾಂಬಳೆ ಮನೆಗೆ ಬಂದು ಆತನ ತಾಯಿಗೂ ಬೆದರಿಕೆ ಮಾಡಿದ್ದಾರೆ ಎನ್ನಲಾಗಿದೆ. ನಮ್ಮ ತಂಗಿಯ ತಂಟೆಗೆ ಬಂದರೆ ಸರಿ ಇರುವುದಿಲ್ಲವೆಂದು ಆಕೆಯ ಅಣ್ಣ, ವಿಜಯ ಕಾಂಬಳೆಯ ತಾಯಿಗೆ ಬೆದರಿಕೆ ಹಾಕಿದ್ದರು.

ಬೆದರಿಕೆಗಳ ನಂತರವೂ ದಲಿತ ಯುವಕ ವಿಜಯ ಕಾಂಬಳೆ ಮತ್ತು ಮುಸ್ಲಿಂ ಯುವತಿ ಪ್ರೀತಿಸುತ್ತಿದ್ದರು. ನಂತರದಲ್ಲಿ ವಿಜಯನ ತಾಯಿ, ತಾಳಿ ಕಟ್ಟಿ ಬಿಡು ಎಂದು ಮಗನಿಗೆ ಒಮ್ಮೆ ಹೇಳಿದ್ದಳು. ಇದರಿಂದ ಇನ್ನಷ್ಟು ಕೋಪಗೊಂಡ ಯುವತಿಯ ಅಣ್ಣ ತನ್ನ ಸ್ನೇಹಿತನ ಜೊತೆಗೂಡಿ ಕೊಲೆ ಮಾಡಿದ್ದಾನೆ.

ಕಳೆದ ರಾತ್ರಿ ಎಂಟು ಗಂಟೆಯ ಸುಮಾರಿಗೆ ವಿಜಯ ಕಾಂಬಳೆ ಮನೆಯಿಂದ ತರಕಾರಿ ತರುವುದಾಗಿ ತಾಯಿಗೆ ಹೇಳಿ  ಹೊರಬಿದ್ದಿದ್ದ. ತನ್ನ ಸ್ನೇಹಿತನ ಜೊತೆ ಜನನಿಬಿಡ ಪ್ರದೇಶ ಅಂಬೇಡ್ಕರ್ ಸರ್ಕಲ್ ಬಳಿ ಮಾತನಾಡುತ್ತ ಕುಳಿತಿದ್ದ ವಿಜಯ್ ಜಾಗಕ್ಕೆ ಆಗಮಿಸಿದ ಇಬ್ಬರು ಏಕಾಏಕಿ ದಾಳಿ ಮಾಡಿದರು. ಮೊದಲು ಬೆತ್ತದಿಂದ ವಿಜಯನ ತಲೆಗೆ ಏಟು ಕೊಟ್ಟಿದ್ದಾನೆ.

ಬೆತ್ತದಿಂದ ಹೊಡೆಯುತ್ತಿದ್ದ ವ್ಯಕ್ತಿಯನ್ನು ತಡೆಯಲು ಸ್ನೇಹಿತ ರಾಘವೇಂದ್ರ ಯತ್ನಿಸುತ್ತಿದ್ದ ಹೊತ್ತಲ್ಲೇ, ಇತ್ತ ಇನ್ನೊಬ್ಬ ಹಂತಕ, ನೆಲಕ್ಕೆ ಬಿದ್ದ ವಿಜಯನ ಕತ್ತಿಗೇ ಚಾಕು ಹಾಕಿದ್ದಾನೆ. ಅಷ್ಟೇ ಅಲ್ಲದೆ, ಹೊಟ್ಟೆಗೆ ಚಾಕು ಹಾಕಿ ಪರಾರಿಯಾಗಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಸ್ನೇಹಿತನ ಕಣ್ಣೆದುರೇ ವಿಜಯ ಕಾಂಬಳೇ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.

ಈ ಸಂಬಂಧ ಕೊಲೆಯಾದ ವಿಜಯ ಕಾಂಬಳೆ ತಾಯಿ ರಾಜೇಶ್ವರಿ ವಾಡಿ ಠಾಣೆಗೆ ದೂರು ನೀಡಿದ್ದಾಳೆ. ಮುಸ್ಲಿಂ ಯುವತಿಯನ್ನು ನನ್ನ ಮಗ ಪ್ರೀತಿಸುತ್ತಿದ್ದು ಇದೇ ಕಾರಣಕ್ಕಾಗಿ ಆಕೆಯ ಕುಟುಂಬದವರು ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಜಯನನ್ನು ಪ್ರೀತಿಸುತ್ತಿದ್ದ ಯುವತಿಯ ಸಹೋದರ, ಕೊಲೆ ಆರೋಪಿ ಶಾಬುದ್ದಿನ್ ಹಾಗೂ ಆತನ ಸ್ನೇಹಿತ ಪರಾರಿಯಾಗಿದ್ದು ಹಂತಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.‌

Donate Janashakthi Media

Leave a Reply

Your email address will not be published. Required fields are marked *