ಮಂಡ್ಯ: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಜಿಲ್ಲೆಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ. ಯುವ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಲ್ಲಡ್ಕ ಭಟ್ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ. ನಜ್ಮಾ ನಜೀರ್ ಅವರು ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಿಸಿ ರೌಡಿಶೀಟರ್ ತೆರೆದು ಕಾನೂನು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು, ಪೊಲೀಸರು ಭಟ್ ವಿರುದ್ದ IPC 354, 294, 509, 506, 153A, 295, 295A, 298 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಹೋರಾಟಗಾರ್ತಿ ನಜ್ಮಾ ನಜೀರ್ ಅವರು ದೂರಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ‘ವೃತ್ತಿಪರ ಕ್ರಿಮಿನಲ್ ಆರೋಪಿ’ ಎಂದು ಉಲ್ಲೇಖಿಸಿದ್ದಾರೆ. ಆತ ಮಹಿಳೆಯರನ್ನು ಚುಡಾಯಿಸಿ, ಲೈಂಗಿಕವಾಗಿ ಅವಮಾನಿಸಿ, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಿಸಿ, ಸಾರ್ವಜನಿಕವಾಗಿ ಬೆದರಿಕೆಯೊಡ್ಡಿ, ಧರ್ಮವನ್ನು ಅವಮಾನಿಸಿ, ಧರ್ಮಗಳ ಮಧ್ಯೆ ಎತ್ತಿಕಟ್ಟಿ ಗಲಭೆ ನಡೆಸಿ ಸಾವು ನೋವುಗಳನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ಟ ವಿರುದ್ಧ ಸುಮೊಟೊ ದಾಖಲಿಸಿ | ಜಾಗೃತ ನಾಗರಿಕರು ಕರ್ನಾಟಕ ಒತ್ತಾಯ
ಭಾನುವಾರ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಡೆದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, “ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ಮುಸ್ಲಿಂ ಯುವಕರು ಮಾತ್ರ ಅಲ್ಲ. ಮುಸ್ಲಿಂ ಯುವತಿಯರು ಮೋಸ ಮಾಡುತ್ತಿದ್ದಾರೆ. ಹಿಂದೂ ಯುವಕ ಯುವತಿಯರನ್ನ ಲವ್ ಜಿಹಾದ್ ಮಾಡುತ್ತಿದ್ದಾರೆ. ನಿಮ್ಮಲ್ಲಿ ಯುವತಿ ಯುವಕರು ಇಲ್ಲವೇ?” ಎಂದು ಹೇಳಿಕೆ ನೀಡಿದ್ದರು.
ಪ್ರಭಾಕರ್ ಭಟ್ ಹೇಳಿಕೆಯು ಮಹಿಳೆಯರ ಖಾಸಗಿತನ, ಮಹಿಳೆಯನ್ನು ಲೈಂಗಿಕವಾಗಿ ನಿಂದಿಸುವ, ಮಹಿಳೆಯ ಮೇಲೆ ಸಾರ್ವಜನಿಕರು ಬಲಪ್ರಯೋಗಿಸುವಂತೆ ಪ್ರಚೋದಿಸುವ ಹೇಳಿಕೆಯಾಗಿದ್ದು, “ಮಹಿಳೆಗೆ ಲೈಂಗಿಕ ಮತ್ತು ಜೀವ ಬೆದರಿಕೆ ಒಡ್ಡುವ, ಮಹಿಳೆಯರ ಖಾಸಗಿ ವಿಷಯವನ್ನು ಅಶ್ಲೀಲಗೊಳಿಸುವಿಕೆ”ಯ ಹೇಳಿಕೆಯಾಗಿದೆ ಎಂದು ನಜ್ಮಾ ದೂರಿನಲ್ಲಿ ತಿಳಿಸಿದ್ದಾರೆ.
“ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ವೃತ್ತಿಪರ ಕ್ರಿಮಿನಲ್ ಆರೋಪಿಯಾಗಿದ್ದು, ಜೀವನ ನಿರ್ವಹಣೆಗಾಗಿ ಯಾವುದೇ ನಿರ್ದಿಷ್ಟ ವೃತ್ತಿ ಹೊಂದಿಲ್ಲದ ಈತ ಈ ಹಿಂದೆಯೂ ಸಾಮಾಜಿಕ ಅಶಾಂತಿ, ಗಲಭೆ ಸೃಷ್ಟಿ, ಮಹಿಳೆಯರ ಅವಹೇಳನ, ಹುಡುಗಿಯರ ಚುಡಾವಣೆ, ಧರ್ಮಗಳ ಅವಹೇಳನ ಪ್ರಕರಣಗಳದ್ದೇ ರೀತಿಯ ಕೃತ್ಯಗಳನ್ನು ಹಲವು ಬಾರಿ ನಡೆಸಿದ್ದಾನೆ. ಕರ್ನಾಟಕದ ಹಲವು ಠಾಣೆಗಳಲ್ಲಿ ಈತನ ವಿರುದ್ದ ಈ ಹಿಂದೆ ಇಂತದ್ದೇ ಪ್ರಕರಣಗಳು ದಾಖಲಾಗಿದೆ” ಎಂದು ನಜ್ಮಾ ದೂರಿನಲ್ಲಿ ತಿಳಿಸಿದ್ದಾರೆ.
ವಿಡಿಯೊ ನೋಡಿ: ಕಲ್ಲಡ್ಕ ಪ್ರಭಾಕರ್ ಭಟ್‌ನದ್ದು ಕೊಳಕು ಮನಸ್ಸು, ಭಯೋತ್ಪಾದಕ ಮನಸ್ಥಿತಿ – ಹೋರಾಟಗಾರರ ಆಕ್ರೋಶ Janashakthi Media