ಕೊಪ್ಪಳ: ಅಂಧ ಮುಸ್ಲಿಂ ವೃದ್ಧರೊಬ್ಬರಿಗೆ ಜೈ ಶ್ರೀರಾಮ್ ಕೂಗುವಂತೆ ಒತ್ತಾಯಿಸಿ ಅವರ ಮೇಲೆ ಹಲ್ಲೆ ನಡೆಸಿ, ಅವರ ಗಡ್ಡಕ್ಕೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಗಂಗಾವತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯು ನವೆಂಬರ್ 25ರಂದು ನಡೆದಿದ್ದು, ಪೊಲೀಸರು ಅಪರಿಚಿತರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯನ್ನು ಕೊಪ್ಪಳ ಜಿಲ್ಲಾ ಸಿಪಿಐ(ಎಂ) ಖಂಡಿಸಿದ್ದು, ಪಕ್ಷದ ನಿಯೋಗವು ಸಂತ್ರಸ್ತ ಹುಸೇನ್ ಸಾಬ್ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದೆ. ಘಟನೆಯನ್ನು ವಿರೋಧಿಸಿ ಹೋರಾಟ ನಡೆಸುವುದಾಗಿ ಪಕ್ಷವು ಪ್ರಕಟನೆಯಲ್ಲಿ ತಿಳಿಸಿದೆ.
ಸಂತ್ರಸ್ತ ವ್ಯಕ್ತಿಯನ್ನು ಮೆಹಬೂಬ್ ನಗರದ ಹುಸೇನ್ ಸಾಬ್(65) ಎಂದು ಗುರುತಿಸಲಾಗಿದ್ದು, “ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ” ಎಂದು ಅವರು ಪೊಲೀಶರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿ ನವೆಂಬರ್ 25ರಂದು ಮಧ್ಯರಾತ್ರಿ ಗಂಗಾವತಿಗೆ ಬಂದು ಮನೆಗೆ ಹೋಗಲು ಆಟೊ ನಿಲ್ದಾಣದ ಬಳಿ ಕಾಯುತ್ತಿದ್ದಾಗ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಾತಿಗಣತಿ ಬಿಡುಗಡೆಗೆ ಕ್ಯಾಬಿನೆಟ್ ತೀರ್ಮಾನವೇ ಸುಪ್ರೀಂ| ಸಚಿವ ಡಾ.ಎಚ್.ಸಿ. ಮಹದೇವಪ್ಪ
“ಬೈಕ್ ಮೇಲೆ ಬಂದ ಕೆಲವು ಯುವಕರು ಎಲ್ಲಿಗೆ ಹೋಗುತ್ತಿದ್ದಿಯಾ? ಎಂದು ಪ್ರಶ್ನಿಸಿದರು. ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡು ಪಂಪಾನಗರ ಬಳಿ ಕರೆದುಕೊಂಡು ಹೋದರು. ಬಳಿಕ ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ. ನೆಲದ ಮೇಲೆ ಬೀಳಿಸಿ ಹಲ್ಲೆ ಮಾಡಿದ ಯುವಕರ ಗುಂಪು, ನನ್ನ ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ” ಎಂದು ಅವರು ಹೇಳಿದ್ದಾರೆ.
“ನನಗೆ ಕಣ್ಣು ಕೂಡ ಕಾಣುವುದಿಲ್ಲ. ನನ್ನ ಬಳಿಯಿದ್ದ ಹಣ ದೋಚಿಕೊಂಡು ಹೋಗಿದ್ದಾರೆ. ಬಳಿಕ ಬೆಳಗಿನ ಜಾವ ಕುರಿ ಕಾಯುವ ಹುಡುಗರು ನನ್ನ ಮನೆಯ ವಿಳಾಸ ಕೇಳಿ ರಕ್ಷಣೆ ಮಾಡಿ, ಮನೆಗೆ ತಲುಪಿಸಿದ್ದಾರೆ” ಎಂದು ಸಂತ್ರಸ್ತ ಹುಸೇನ್ ಸಾಬ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಜೈ ಶ್ರೀರಾಮ್
ಇದನ್ನೂ ಓದಿ: ರಾಜಧಾನಿಯಲ್ಲಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ
ಘಟನೆಯ ಕುರಿತು ಗುರುವಾರ ರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲದೆ, ಹಲ್ಲೆಯಿಂದ ಹುಸೇನ್ ಸಾಬ್ ಅವರ ಮೇಲೆ ಆಗಿರುವ ಗಾಯಗಳ ವಿಡಿಯೋ ಮಾಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
“ಹುಸೇನ್ ಸಾಬ್ ಅವರು ಹಲವಾರು ವರ್ಷಗಳಿಂದ ಪಕ್ಷದ ಸದಸ್ಯರಾಗಿದ್ದರು. ಅಲ್ಲದೆ, ಡಿವೈಎಫ್‌ಐ ಸಂಘಟನೆ ಕಟ್ಟಿ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದರು. ಪಕ್ಷದ ಜಿಲ್ಲಾ ಸಮಿತಿಯು ಅವರನ್ನು ಭೇಟಿಯಾಗಿ ಧೈರ್ಯ ತುಂಬಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಜೊತೆ ನಾವು ಸಂಪರ್ಕದಲ್ಲಿ ಇದ್ದು, ಆರೋಪಿಗಳನ್ನು ತಕ್ಷಣವೇ ಕಂಡುಹಿಡಿದು ಬಂಧಿಸಬೇಕು. ಈ ಬಗ್ಗೆ ಇತರ ಸಂಗಟನೆಗಳ ಜೊತೆ ಚರ್ಚೆ ನಡೆಸಿ ಹೋರಾಟ ಕೈಗೊಳ್ಳುವ ತೀರ್ಮಾನ ತೆಗೆದುಕೊಳ್ಳಲಿದ್ದೇವೆ” ಎಂದು ಜನಶಕ್ತಿ ಮೀಡಿಯಾ ಜೊತೆ ಮಾತನಾಡುತ್ತಾ ಕೊಪ್ಪಳ ಜಿಲ್ಲಾ ಸಿಪಿಐ(ಎಂ) ಕಾರ್ಯದರ್ಶಿ ನಿರುಪಾದಿ ಅವರು ಹೇಳಿದ್ದಾರೆ.
DISGRACE!
A blind elderly Muslim man who begs for a living, dragged on road, beaten, kicked, abused, robbed & his beard burnt for not chanting Jai Shri Ram in Koppala district in Karnataka. Was rescued in time by Shepards when the goons were about to kill him.
Video with subs👇 pic.twitter.com/9GEvwChO0f
— Waseem ವಸೀಮ್ وسیم (@WazBLR) December 1, 2023
ವಿಡಿಯೊ ನೋಡಿ: ‘ತಪ್ಪುಗಳನ್ನುಪ್ರಶ್ನಿಸಿದವರನ್ನು ಭಯೋತ್ಪದಕ’, ಎಂದು ಹೇಳುವ ಸರ್ಕಾರವನ್ನು ಕಿತ್ತೆಸೆಯಬೇಕು – ಕೆ.ಎನ್. ಉಮೇಶ್