ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಮೆ ಮಾಡುತ್ತಿರುವ ಮುನಿಸಿಪಲ್ ಕಾರ್ಮಿಕರಿಗೆ ಸಮಾನ ವೇತನ, ನೇರ ಪಾವತಿ, ಖಾಯಂಮಾತಿ ಸೇರಿದಂತೆ ಇತ್ಯಾದಿ ಬೇಡಿಕೆಗಳ ಬಗ್ಗೆ ಮುನಿಸಿಪಲ್ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಮುಖಂಡರೊಂದಿಗೆ ಸರ್ಕಾರಿ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿಗಳು ಖಾಯಂಮೇತರ ಮುನಿಸಿಪಲ್ ಕಾರ್ಮಿಕರ ನೇರ ಪಾವತಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂಬ ಭರವಸೆಯ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಜಂಟಿ ಸಮಿತಿ ತಿಳಿಸಿದೆ.
ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ಸಿಐಟಿಯು), ಪ್ರಗತಿ ಪರ ಪೌರ ಕಾರ್ಮಿಕರ & ಕಸದ ವಾಹನ ಚಾಲಕರು, ಸಹಾಯಕರ ಸಂಘ(ಎಐಸಿಸಿಟಿಯು), ರಾಜ್ಯ ಹೊರ ಗುತ್ತಿಗೆ ನೌಕರರ ಸಂಘ ಜಂಟಿಯಾಗಿ ರಾಜ್ಯದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದವು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮತ್ತು ರಾಜ್ಯದ ವಿವಿದೆಡೆ ಮುಷ್ಕರದ ಭಾಗವಾಗಿ ಮುನಿಸಿಪಲ್ ಕಾರ್ಮಿಕರು ಭಾಗಿಯಾಗಿದ್ದರು.
ಇದನ್ನು ಓದಿ: ಮುನಿಸಿಪಾಲ್ ಕಾರ್ಮಿಕರ ಖಾಯಮಾತಿಗಾಗಿ ವಿಧಾನಸೌಧ ಎದುರು ಅನಿರ್ದಿಷ್ಟ ಹೋರಾಟ
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ).–ಸಿಐಟಿಯು, ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಅವರು, ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮುನಿಸಿಪಾಲಿಟಿಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡುವ ತನಕ ಸಮಾನ ಕೆಲಸಕ್ಕೆ, ಸಮಾನ ವೇತನ ನೀಡುವಂತೆ ಮಾರ್ಚ್ 20ರಿಂದ ಬೆಂಗಳೂರು ಒಳಗೊಂಡು, ಎಲ್ಲೆಡೆಯೂ ಮುಷ್ಕರ, ಪ್ರತಿಭಟನಾ ಹೋರಾಟಗಳನ್ನು ನಡೆಸಲಾಗಿದೆ. ನೆನ್ನೆ(ಮಾರ್ಚ್ 24) ನಡೆದ ಸಚಿವ ಸಂಪುಟ ಸಭೆಯ ಮೂಲಕ ಸರ್ಕಾರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಕ್ರಮವಹಿಸಬಹುದೆಂಬ ನಿರೀಕ್ಷೆ ಹುಸಿಯಾಯಿತು. ಹೋರಾಟ ಮತ್ತಷ್ಟು ತೀವ್ರತೆಗೊಂಡಿದ್ದು, ಜಂಟಿ ಸಮಿತಿ ಮುಖಂಡರು ಸರ್ಕಾರ ಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಇನ್ನೆರಡು ದಿನದಲ್ಲಿ ಸರ್ಕಾರ ನಿರ್ಧಾರ ಪ್ರಕಟವಾಗಲಿದೆ ಎಂಬ ಭರವಸೆ ನೀಡಿದೆ. ಸದ್ಯ ಮುಷ್ಕರವನ್ನು ಹಿಂಪಡೆಯಲಾಗಿದೆ. ಇನ್ನೆರಡು ದಿನದಲ್ಲಿ ಸರ್ಕಾರದಿಂದ ಯಾವುದೇ ಉತ್ತರ ಸಿಗದಿದ್ದಲ್ಲಿ ಮುಂದಿನ ಹೋರಾಟಕ್ಕೆ ಸಜ್ಜಾಗಲಿದ್ದೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ).–ಸಿಐಟಿಯು ರಾಜ್ಯ ಅಧ್ಯಕ್ಷ ಹರೀಶ್ ನಾಯಕ್ ಮಾತನಾಡಿ, ಕಳೆದ ಜುಲೈ, 2022ರಂದು ನಡೆದಿದ್ದ ಮುಷ್ಕರದ ಸಂದರ್ಭದಲ್ಲಿ ಸರ್ಕಾರವು ಎಲ್ಲಾ ಕಾರ್ಮಿಕರ ಪ್ರಶ್ನೆಗಳನ್ನು ಪರಿಗಣಿಸುವುದಾಗಿ ಮಾತುಕೊಟ್ಟಿತ್ತು. ಮುಖ್ಯಮಂತ್ರಿಗಳು ನಂತರದಲ್ಲಿ 1/3 ಭಾಗ ಪೌರ ಕಾರ್ಮಿಕರನ್ನು ಮಾತ್ರ ನೇರ ನೇಮಕಾತಿಗೆ ಕ್ರಮವಹಿಸುವ ಮೂಲಕ ಮುನಿಸಿಪಲ್ ಕಾರ್ಮಿಕರಲ್ಲಿ ಒಡಕು ಉಂಟು ಮಾಡಿದನ್ನು ಕಾರ್ಮಿಕರ-ನೌಕರರು ಅರ್ಥ ಮಾಡಿಕೊಳ್ಳಲು ಸಂಘ ವಿನಂತಿಸಿತು. ಈ ಬಾರಿ ರಾಜ್ಯದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಸರ್ಕಾರ ಕಾರ್ಮಿಕರ ಪರವಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: ಪೌರ ಕಾರ್ಮಿಕರ ಬೇಡಿಕೆ, ತ್ಯಾಜ್ಯ ವಿಲೇವಾರಿ ಮಾಡದಿದ್ದಲ್ಲಿ ಶಾಸಕರ ಮನೆಯೆದುರು ತ್ಯಾಜ್ಯ ಸುರಿದು ಪ್ರತಿಭಟನೆ: ಬಿ ಕೆ ಇಮ್ತಿಯಾಜ್
ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ).–ಸಿಐಟಿಯು, ರಾಜ್ಯ ಉಪಾಧ್ಯಕ್ಷ ಸ್ಯಾಮ್‌ಸನ್ ಮಾತನಾಡಿ, ಮಧ್ಯವರ್ತಿ ಕಾರ್ಮಿಕರ ಅತೀವ ಶೋಷಣೆಯಲ್ಲಿ ತೊಡಗಿರುವ ಗುತ್ತಿಗೆದಾರರನ್ನು ತೆಗೆದು ಹಾಕಿ, ಎಲ್ಲಾ ಖಾಯಂಮೇತರ ಮುನಿಸಿಪಲ್ ನೌಕರರ ಸೇವೆಗಳನ್ನು ಖಾಯಂ ಮಾಡುವ ತನಕ ವೇತನವನ್ನು ನೇರ ಪಾವತಿಯಲ್ಲಿ ತರಲು ಸಹ ಸರ್ಕಾರ ತಯಾರಿಲ್ಲ. ಇವುಗಳನ್ನು ನೋಡಿದರೆ ಗುತ್ತಿಗೆದಾರರ ಲಾಭಿಗೆ ಸರ್ಕಾರ ಮಣಿದಿದೆ ಎಂಬ ಗುಮಾನಿ ಬಲವಾಗುತ್ತಿದೆ ಎಂದು ಅಪಾದಿಸಿದ್ದಾರೆ.
ಗುತ್ತಿಗೆ – ಹೊರಗುತ್ತಿಗೆ, ಲೋಡರ್ ಗಳು, ಯು.ಜಿ.ಡಿ ಕಾರ್ಮಿಕರು, ವಾಟರ್ ಮ್ಯಾನ್ ಗಳು – ವಾಲ್ ಮ್ಯಾನ್, ಪಂಪ್ ಹೌಸ್ ಕಾರ್ಮಿಕರು, ಲಿಕೆಜ್ ಕಾರ್ಮಿಕರು, ಕಸದ ಅಟೋ ಚಾಲಕರು, ವಿವಿಧ ಚಾಲಕರು, ಯು.ಜಿ.ಡಿ ಕಾರ್ಮಿಕರು, ಕಛೇರಿ ಸಹಾಯಕರು, ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಮಿಕರು, ಸ್ಮಶಾಣ ಕಾರ್ಮಿಕರು, ಯುಜಿಡಿ ನೀರು ಸಂಸ್ಕರಣೆ ಘಟಕದ ಕಾರ್ಮಿಕರು, ಉದ್ಯಾನವನದ ಕಾರ್ಮಿಕರು, ಶೌಚಾಲಯಗಳಲ್ಲಿ ದುಡಿಯುವ ಕಾರ್ಮಿಕರ ಹೋರಾಟದಲ್ಲಿ ಭಾಗಿಯಾಗಿದ್ದರು.
ಕಳೆದ 5-6 ದಿನಗಳಿಂದ ನಡೆಯುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ತಮ್ಮ ಸ್ವಕ್ಷೇತ್ರ ಸಿರ್ಸಿಯಲ್ಲಿ ಮುಷ್ಕರ ನಿರತ ಮುನಿಸಿಪಲ್ ಕಾರ್ಮಿಕರುನ್ನು ಬೇಟಿ ಮಾಡಿದ್ದರು. ಕಾಂಗ್ರೆಸ್ ಮುಖಂಡ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಕಾರ್ಮಿಕರನ್ನು ಭೇಟಿ ಮಾಡಿ ಸರ್ಕಾರದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
ಇದನ್ನು ಓದಿ: 11 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ).–ಸಿಐಟಿಯು, ರಾಜ್ಯ ಸಹ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಎಲ್ಲಾ ಕಾರ್ಮಿಕರ ಪ್ರಶ್ನೆಗಳನ್ನು ಪರಿಗಣಿಸದೆ ಇರುವ ಕಾರಣ ಮುನಿಸಿಪಲ್ ಕಾರ್ಮಿಕರ ನ್ಯಾಯಯುತವಾದ ಹಕ್ಕೊತ್ತಾಯಗಳಿಗೆ ಹೋರಾಟ ಮುಂದುವರಿಸುವುದಾಗಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ಸಿಐಟಿಯು) ಕರೆ ನೀಡಿದೆ. ಹಲವು ಕಡೆಗಳಲ್ಲಿ ಕೆಲಸದಿಂದ ತೆಗೆಯುವ ಬೆದರಿಕೆಗಳನ್ನು ಹಾಕಲಾಗಿದ್ದರು, ಹಬ್ಬದ ದಿನದಂದು ಹೋರಾಟ ಮುನ್ನಡೆಸಿದ ಮುನಿಸಿಪಲ್ ಕಾರ್ಮಿಕರಿಗೆ ಸಂಘವು ಅಭಿನಂದಿಸುತ್ತದೆ. ಯಾವುದೇ ಕಾರಣಕ್ಕೂ ಕಾರ್ಮಿಕರು ಎದೆಗುಂದದೆ ಹೋರಾಟಕ್ಕೆ ಸಜ್ಜಾಗಬೇಕೆಂದು ಸಂಘವು ಕರೆ ನೀಡಿದೆ ಎಂದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ