ಬೆಂಗಳೂರು : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮೊದಲ ಆರೋಪಿ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಸ್ವಾಮೀಜಿ ಹಾಗೂ ಇತರೆ ನಾಲ್ವರು ಆರೋಪಿಗಳು, ಅನುಯಾಯಿಗಳು, ಮುರುಘಾ ಮಠ ಮತ್ತು ಪದಾಧಿಕಾರಿಗಳ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ, ವಿವಾದಾತ್ಮಕ ವಿಚಾರ ಪ್ರಸಾರ, ಪ್ರಕಟ ಮಾಡದಂತೆ ವಿದ್ಯುನ್ಮಾನ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳು ಸೇರಿದಂತೆ 48 ಸಂಸ್ಥೆಗಳ ವಿರುದ್ಧ ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಮಧ್ಯಂತರ ಪ್ರತಿಬಂಧಕಾದೇಶ ನೀಡಿದೆ.
ಮುರುಘಾ ಮಠದ ಅನುಯಾಯಿಗಳು ಹಾಗೂ ಮಠದ ಉದ್ಯೋಗಿಗಳಾಗಿರುವ ಚಿತ್ರದುರ್ಗದ ಬಸವಕುಮಾರ್ ಎಂ ಆರ್ ಹಾಗೂ ಚೇತನ್ ಕುಮಾರ್ ಅವರು ಸಲ್ಲಿಸಿರುವ ಮೂಲ ದಾವೆಯ ವಿಚಾರಣೆಯನ್ನು 59ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರಿದ್ದ ಪೀಠವು ವಿಚಾರಣೆ ನಡೆಸಿ ಆದೇಶ ಮಾಡಿದೆ. ಮುಂದಿನ ವಿಚಾರಣೆವರೆಗೆ ಮುರುಘಾ ಮಠ, ಡಾ. ಶಿವಮೂರ್ತಿ ಶರಣರು ಮತ್ತು ಇತರೆ ಆರೋಪಿಗಳು, ಮಠದ ಪದಾಧಿಕಾರಿಗಳ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ ಮತ್ತು ವಿವಾದಾತ್ಮಕ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡದಂತೆ 48 ಪ್ರತಿವಾದಿ ಮಾಧ್ಯಮಗಳಿಗೆ ಆದೇಶಿಸಿದೆ. ಅಲ್ಲದೇ, ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಿದೆ.
ಯಾವೆಲ್ಲಾ ಮಾಧ್ಯಮಗಳಿಗೆ ಪ್ರತಿಬಂಧಕಾದೇಶ?
ಕನ್ನಡದ ದೃಶ್ಯ ಮಾಧ್ಯಮಗಳಾದ ಬಿಟಿವಿ, ಟಿವಿ9 ಕನ್ನಡ, ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್ 24/7, ಕಸ್ತೂರಿ ನ್ಯೂಸ್, ಪವರ್ ಟಿವಿ, ಟಿವಿ5, ದಿಗ್ವಿಜಯ ನ್ಯೂಸ್, ನ್ಯೂಸ್ 18 ಕನ್ನಡ, ನ್ಯೂಸ್ ಫಸ್ಟ್ ಕನ್ನಡ, ಪ್ರಜಾ ಟಿವಿ, ರಾಜ್ ನ್ಯೂಸ್, ಸಂಭ್ರಮ ಟಿವಿ ಹಾಗೂ ಪತ್ರಿಕೆಗಳಾದ ವಿಜಯ ಕರ್ನಾಟಕ, ವಿಜಯವಾಣಿ, ಪ್ರಜಾವಾಣಿ, ವಾರ್ತಾ ಭಾರತಿ, ಉದಯವಾಣಿ, ಹೊಸದಿಗಂತ, ವಿಶ್ವವಾಣಿ, ಸಂಜೆವಾಣಿ, ಇ-ಸಂಜೆ, ವಾರ ಪತ್ರಿಕೆಗಳಾದ ಅಗ್ನಿ, ಲಂಕೇಶ್ ಪತ್ರಿಕೆ, ಇಂಗ್ಲಿಷ್ ಪತ್ರಿಕೆಗಳಾದ ಬೆಂಗಳೂರು ಮಿರರ್, ಡೆಕ್ಕನ್ ಹೆರಾಲ್ಡ್, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ದಿ ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್, ದಿ ಹಿಂದೂ, ವೆಬ್‌ಸೈಟ್‌ಗಳಾದ ಒನ್ ಇಂಡಿಯಾ, ಸಮಾಚಾರ್.ಕಾಂ, ಇಂಗ್ಲಿಷ್ ಸುದ್ದಿ ವಾಹಿನಿಗಳಾದ ಎನ್‌ಡಿ ಟಿವಿ, ಟೈಮ್ಸ್ ನೌ, ಇಂಡಿಯಾ ಟುಡೇ, ನ್ಯೂಸ್ 9, ನ್ಯೂಸ್ 18, ಸಿಎನ್‌ಎನ್ ಐಬಿಎನ್, ರಿಪಬ್ಲಿಕ್ ಟಿವಿ, ಹೆಡ್‌ಲೈನ್ಸ್ ಟುಡೇ, ಹಿಂದಿ ವಾಹಿನಿಗಳಾದ ಎನ್‌ಡಿ ಟಿವಿ ಹಿಂದಿ, ಆಜ್ ತಕ್, ನ್ಯೂಸ್ ಎಕ್ಸ್, ನ್ಯೂಸ್ 24, ಜೀ ನ್ಯೂಸ್, ಎಬಿಪಿ ನ್ಯೂಸ್, ಇಂಡಿಯಾ ಟಿವಿ.
ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಚಾನೆಲ್, ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಫೇಸ್‌ಬುಕ್ ಇಂಡಿಯಾ, ಟ್ವಿಟರ್ ಕಮ್ಯುನಿಕೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಯಾಹೂ ಇಂಡಿಯಾ, ವಾಟ್ಸಾಪ್ ಮೆಸೇಂಜರ್‌ಗಳು ಫಿರ್ಯಾದಿಗಳು ನೀಡುವ ಲಿಂಕ್‌ಗಳನ್ನು ತಮ್ಮ ತಾಣದಿಂದ ಮುಂದಿನ ವಿಚಾರಣೆಯ ಒಳಗೆ ತೆರವುಗೊಳಿಸಬೇಕು ಎಂದು ನ್ಯಾಯಾಲಯವು ಆದೇಶ ಮಾಡಿದೆ.