ಮುರುಘಾ ಮಠದಿಂದ 22 ಮಕ್ಕಳು ನಾಪತ್ತೆ!

ಚಿತ್ರದುರ್ಗ : ಪೋಕ್ಸೊ ಪ್ರಕರಣದಲ್ಲಿ ಮುರುಘಾ ಸ್ವಾಮಿ ಜೈಲುಪಾಲಾಗಿದ್ದು, ಇದೀಗ ಮುರುಘಾ ಮಠದ ಹಾಸ್ಟೆಲ್‌ನಲ್ಲಿ ವಾಸವಿದ್ದ 22 ಅನಾಥ ಮಕ್ಕಳು ನಾಪತ್ತೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಚಿತ್ರದುರ್ಗದ ಆರ್‌ಟಿಐ ಕಾರ್ಯಕರ್ತ ಬಿ.ಎಚ್.ಗೌಡ್ರು ಗಂಭೀರ ಆರೋಪ ಮಾಡಿದ್ದು, ಮುರುಘಾಮಠದ ಹಾಸ್ಟೆಲ್‌ನಲ್ಲಿದ್ದ 22 ಅನಾಥ ಮಕ್ಕಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರ ಪೈಕಿ 14 ಹೆಣ್ಣು ಹಾಗೂ 8 ಗಂಡು ಮಕ್ಕಳಿದ್ದಾರೆ. ಮಕ್ಕಳ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಎಡಿಜಿಪಿ ಅಲೋಕ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್‌ಪಿ ಕೆ.ಪರಶುರಾಮ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಅನಾಥ ಮಕ್ಕಳು ಮಠಕ್ಕೆ ಸಿಕ್ಕಿದ್ದು ಹೇಗೆ? ಅನಾಥ ಮಕ್ಕಳನ್ನು ಸಾಕಲು ಸರ್ಕಾರದಿಂದ ಅನುಮತಿ ಪಡೆಯಲಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ‘ಬಸವ ಕುಟೀರ’ಕ್ಕೆ ಈ ಹಿಂದೆ ಸರ್ಕಾರದಿಂದ ಅನುದಾನ ಸಿಗುತ್ತಿತ್ತು. ಅದರೆ 2012ರಲ್ಲಿ ಈ ಅನುದಾನವನ್ನು ಶಿವಮೂರ್ತಿ ಮುರುಘಾ ಶರಣರು ನಿರಾಕರಿಸಿದ್ದರು. ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳದ ಸಂಸ್ಥೆಯ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ನೀಡುತ್ತಿರಲಿಲ್ಲ. ಹೀಗಾಗಿ ಮಕ್ಕಳು ನಾಪತ್ತೆಯಾದ ವಿಚಾರವೂ ತಡವಾಗಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ನಾಪತ್ತೆಯಾಗಿರುವ ಮಕ್ಕಳು ಎಲ್ಲಿದ್ದಾರೆ? ಹೇಗಿದ್ದಾರೆ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದೂರು ನೀಡಿರುವ ಮಕ್ಕಳಲ್ಲದೇ ಇತರ ಅನಾಥ ಮಕ್ಕಳ ಮೇಲೆುಯೂ ಶಿವಮೂರ್ತಿ ಮುರುಘಾ ಸ್ವಾಮಿ ದೌರ್ಜನ್ಯ ಎಸಗಿರಬಹುದು ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಒಡನಾಡಿ ಪರಶುರಾಮ್​ಗೆ ನೊಟೀಸ್ : ಚಿತ್ರದುರ್ಗ ಮುರುಘಾ ಮಠದ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ವಿದ್ಯಾರ್ಥಿನಿಯರಿಗೆ ನೈತಿಕ ಬಲ ತುಂಬಿ, ದೂರು ನೀಡಲು ಸಹಕರಿಸಿದ್ದ ಒಡನಾಡಿ ಸಂಸ್ಥೆಯ ಪರಶುರಾಮ್ ಅವರಿಗೆ ಪ್ರಕರಣದ ವಿಚಾರದಲ್ಲಿ ಸುಮ್ಮನಾಗಲು ಅಥವಾ ಹಿಂದೆ ಸರಿಯಲು ₹ 3 ಕೋಟಿ ಆಮಿಷ ಒಡ್ಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತು ಪರಶುರಾಮ್ ಅವರೇ ಅಧಿಕೃತವಾಗಿ ಮಾತನಾಡಿದ ನಂತರ ಆರೋಪಕ್ಕೆ ಪುಷ್ಟಿ ಸಿಕ್ಕಂತೆ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಸಾಕ್ಷ್ಯ ನೀಡಬೇಕು ಎಂದು ಕೋರಿ ಪರಶುರಾಮ್ ಅವರಿಗೆ ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಲೋಕೇಶ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಅನಾರೋಗ್ಯ ಕಾರಣದಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಆನ್​ಲೈನ್​ ವಿಚಾರಣೆ ಎದುರಿಸುತ್ತೇನೆ’ ಎಂದು ಪರಶುರಾಮ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *