ಕರಾವಳಿ ಪ್ರದೇಶ ಆದ್ಯತೆಯಾಗಿ ಮೂರು ಸೇನಾ ಪೂರ್ವ ತರಬೇತಿ ಶಾಲೆ ಆರಂಭ

ಕಾರವಾರ: ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಅಗ್ನಿಪಥ್ ಯೋಜನೆ ಹಿನ್ನಲೆಯಲ್ಲಿ ಆಕಾಂಕ್ಷಿಗಳಿಗೆ ಸೇನಾ ಆಯ್ಕೆ ಪೂರ್ವ ತರಬೇತಿ ನೀಡುವ ಸಲುವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ತರಬೇತಿ ಶಾಲೆ ಆರಂಭಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆ ಪರ-ವಿರೋಧವಾಗಿ ದೇಶದಲ್ಲಿ ಚರ್ಚೆಗಳು ನಡೆಯುತ್ತಿವೆ. ದೇಶದ ರಕ್ಷಣಾ ಪಡೆಗಳು ಯೋಜನೆ ಅನ್ವಯ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಿವೆ. ಅಲ್ಲದೆ ತರಬೇತಿ ಶಾಲೆಗಳು ಆರಂಭವಾಗುತ್ತಿವೆ.

ಕರಾವಳಿ ಜಿಲ್ಲೆಗಳಿಂದ ಸೈನ್ಯಕ್ಕೆ ಸೇರಲು ಯುವಕರನ್ನು ಪ್ರೇರೇಪಿಸುವ ಆದ್ಯತೆ ಹಾಗೂ ಕೇಂದ್ರ ಸರಕಾರದ ಹೊಸ ಯೋಜನೆ “ಅಗ್ನಿಪಥʼʼಕ್ಕೆ ಯುವ ಪಡೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಈ ತರಬೇತಿ ಶಾಲೆ ಆರಂಭಿಸಲಾಗುತ್ತಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೇನಾ ಪೂರ್ವ ತರಬೇತಿ ನೀಡಲು ಶಾಲೆಗಳನ್ನು ಆರಂಭಿಸುತ್ತಿದೆ. ಈ ಶಾಲೆಗಳಲ್ಲಿ ಉಚಿತವಾಗಿ ಯುವಕರಿಗೆ ತರಬೇತಿ ನೀಡಲಿದೆ ಎಂದು ವರದಿಯಾಗಿದೆ.

ಕರಾವಳಿ ಜಿಲ್ಲೆಯ ಸ್ಥಳೀಯ ಸ್ವತಂತ್ರ ಹೋರಾಟಗಾರರ ಹೆಸರಿನಲ್ಲಿ ಶಾಲೆ ತೆರೆಯಲು ನಿರ್ಧಾರ ಮಾಡಿದ್ದು, ಉತ್ತರ ಕನ್ನಡ ಜಿಲ್ಲೆಯ ಬ್ರಿಟಿಷರ ವಿರುದ್ಧ ಹೋರಾಡಿದ ಹೆಂಜಾ ನಾಯ್ಕ, ಉಡುಪಿ ಜಿಲ್ಲೆಯ ಕೋಟಿ ಚನ್ನಯ್ಯ, ದಕ್ಷಿಣ ಕನ್ನಡ ಜಿಲ್ಲೆಯ ವೀರ ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ತರಬೇತಿ ಶಾಲೆ ಇನ್ನೊಂದು ತಿಂಗಳಲ್ಲಿ ಪ್ರಾರಂಭವಾಗಲಿದೆ.

ಜಿಲ್ಲಾ ಉಸ್ತುವಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರಿನಿವಾಸ್ ಪೂಜಾರಿ ಈ ಬಗ್ಗೆ ಮಾತನಾಡಿ, “ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸೇನೆ, ಇತರ ಸೇವೆಗಳಿಗೆ ಆಯ್ಕೆಯಾಗಲು ಪ್ರೋತ್ಸಾಹಿಸುವ ಸಲುವಾಗಿ ಈ ತರಬೇತಿ ಶಾಲೆ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಭಾರತೀಯ ಸೇನೆ ಮತ್ತು ಇತರ ಸೇವೆಗಳಿಗೆ ಸೇರಬಯಸುವ ರಾಜ್ಯದ ಎಲ್ಲಾ ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಭಾಗವಾಗಿದ್ದು ಇವರ ತರಬೇತಿಗೆ ತಗಲುವ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಭರಿಸಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರದಲ್ಲಿ ಶಾಲೆ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಇದರಿಂದ ಜಿಲ್ಲೆಯಲ್ಲಿರುವ ನಿರುದ್ಯೋಗಿ ಯುವಕರಿಗೆ ಹೆಚ್ಚು ಅನುಕೂಲವಾಗಲಿದೆ” ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *