ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಸ್ವಾಮಿಗೆ ಇಂದೂ ಜಾಮೀನು ಮಂಜೂರಾಗಿಲ್ಲ. ಅವರನ್ನು ಮತ್ತೆ ಹನ್ನೊಂದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಮುರುಘಾ ಶರಣರ ನ್ಯಾಯಾಂಗ ಬಂಧನ ಇಂದು ಅಂತ್ಯವಾದ ಹಿನ್ನೆಲೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಮುರುಘಾ ಸ್ವಾಮಿಗೆ ಇಂದು ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಅವರ ವಲಯಕ್ಕೆ ಇತ್ತು, ಆದರೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶಿಸಲಾಗಿದೆ. ಅಕ್ಟೋಬರ್ 21 ರವರೆಗೆ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಚಿತ್ರದುರ್ಗ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶವನ್ನು ನೀಡಿದೆ.
ಪ್ರಕರಣದ ಎರಡನೇ ಆರೋಪಿ ಹಾಸ್ಟೆಲ್‌ನ ಮಹಿಳಾ ವಾರ್ಡನ್ ಅವರ ನ್ಯಾಯಾಂಗ ಬಂಧನ ಮುಗಿದಿತ್ತು. ಅವರನ್ನು ಸಹ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಲೇಡಿ ವಾರ್ಡನ್ ಅವರನ್ನು ಅಕ್ಟೋಬರ್ 21ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.
ಏನಿದು ಪ್ರಕರಣ?: ಕಳೆದ ತಿಂಗಳು ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಬಳಿಕ ಮುರುಘಾ ಸ್ವಾಮಿಯನ್ನು ಸೆಪ್ಟೆಂಬರ್ 5ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.