ಬೆಂಗಳೂರು ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರ ಭಾವಚಿತ್ರವನ್ನು ಸುದ್ದಿಯೊಂದಕ್ಕೆ ಬಳಕೆ ಮಾಡಿದ ಆರೋಪ ಹಿನ್ನೆಲೆ ಪತ್ರಕರ್ತ ಜಿ. ಮಹಂತೇಶ್ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಅಧಿಕಾರಿಯ ವಿರುದ್ಧ ಮಹಿಳೆಯೊಬ್ಬರು ಎಫ್‍ಐಆರ್ ದಾಖಲಿಸಿದ್ದರು. ಈ ಸಂಬಂಧ ತನ್ನ ‘ದಿ ಫೈಲ್’ ವೆಬ್‍ಸೈಟ್‍ನಲ್ಲಿ ವರದಿ ಮಾಡಿದ ಮಹಂತೇಶ್, ಶ್ರೀಗಳ ಭಾವಚಿತ್ರವನ್ನು ಬಳಕೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಮಠದ ಬಿ.ಎಂ.ಜಗದೀಶ್ ನೀಡಿದ ದೂರನ್ನು ಆಧರಿಸಿ, ಮಹಂತೇಶ್ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾವಚಿತ್ರ ಬಳಕೆ ಮಾಡಿದ್ದಕ್ಕೆ ಪತ್ರಕರ್ತನ ವಿರುದ್ಧ ಎಫ್‍ಐಆರ್ ದಾಖಲಿಸಿದ ಪೊಲೀಸರ ಕ್ರಮಕ್ಕೆ ಪತ್ರಕರ್ತರ ಸಂಘಟನೆಗಳು, ಹೋರಾಟಗಾರರು
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತ ಪಡಿಸಿದ್ದಾರೆ.
ಪ್ರೆಸ್ ಕೌನ್ಸಿಲ್‍ಗೆ ದೂರು: ‘ಮುರುಘಾ ಮಠದ ವಿರುದ್ಧ ನಾನು ಮಾಡಿರುವ ವರದಿಗೆ ಪೂರಕ ದಾಖಲೆಗಳನ್ನು ಹೊಂದಿದ್ದೇನೆ. ಹೀಗಾಗಿ ಮಠದ ಈ ಕ್ರಮದ ವಿರುದ್ಧ ದಿಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಲಿಖಿತ ದೂರು ನೀಡಿದ್ದೇನೆ. ಪತ್ರಕರ್ತರ ಸಂಘಕ್ಕೂ ದೂರು ನೀಡುತ್ತೇನೆ’ ಎಂದು ಪತ್ರಕರ್ತ ಮಹಂತೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಹಾಂತೇಶ್ ರವರು ಮಾಡಿದ್ದ ವರದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ
ಚಿತ್ರದುರ್ಗದ ಮುರುಘಾಶರಣರು ಪತ್ರಕರ್ತ ಮಹಾಂತೇಶ ಭದ್ರಾವತಿ ಅವರ ಮೇಲೆ ದೂರು ನೀಡಿ ಎಫ್.ಐ.ಆರ್ ಹಾಕಿಸಿದ್ದಾರೆ.ಮಹಾಂತೇಶ ನನಗೆ ಕಳೆದ ಹದಿನೇಳು ವರ್ಷಗಳಿಂದ ಗೊತ್ತು ಕೆಲ ಕಾಲ ವಾರ್ತಾಭಾರತಿ ಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದರು. ತುಂಬ ಪ್ರಾಮಾಣಿಕ ವರದಿಗಾರ. ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಇಂದಿನ ಮಾಧ್ಯಮಗಳ ನಡುವೆ ಮಹಾಂತೇಶರಂಥವರು ಸಿಗುವದು ಅಪರೂಪ. ಗದ್ದರ್,ಮೇಧಾ ಪಾಟ್ಕರ್ ,ಸಾಯಿನಾಥ್ ರಂಥವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವ ಮುರುಘಾ ಶರಣರು ಅವರಂಥದೆ ಬದ್ದತೆ ಹೊಂದಿದ ಮಹಾಂತೇಶ ಮೇಲಿನ ದೂರು ವಾಪಸು ಪಡೆಯಲಿ,ಎಫ್.ಐ.ಆರ್ ಕೈಬಿಡಲಿ ಎಂದು ಹಿರಿಯ ಪತ್ರಕರ್ತ ಸನತ್ ಕುಮಾರ ಬೆಳಗಲಿ ಆಗ್ರಹಿಸಿದ್ದಾರೆ.
ಮುರಘಾ ಮಠದ ವಿರುದ್ಧ ಪತ್ರಕರ್ತ ಮಹಾಂತೇಶ್ ಮಾಡಿದ್ದ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಪತ್ರಕರ್ತ ಬಿ.ಮಹಾಂತೇಶ ಅವರ ಮೇಲೆ ದೂರು ದಾಖಲಿಸಿದ ಮುರುಘಾ ಶರಣರ ನಡೆ ಖಂಡನೀಯ ಮತ್ತು ಅಪಾಯಕಾರಿ ಮತ್ತು ಪ್ರಜಾಪ್ರಭುತ್ವ ವಿರೋದಿ.
ವಿರಕ್ತ ಮಠದ ಶರಣರ ಈ ವರ್ತನೆ ಸನಾತನವಾದಿ, ಜಾತಿವಾದಿ, ಕರ್ಮಠರಾದ ಬ್ರಾಹ್ಮಣ ಮಠಗಳ ಜಾಡಿನಲ್ಲಿರುವುದು ಬಸವ ತತ್ತ್ವಕ್ಕೆ ವಿರೋದವಾಗಿದೆ.
ಅನುಬವ ಮಂಟಪದ ಆತ್ಮವೇ ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದನ್ನು ಮುರುಘಾ ಶರಣರು ಮರೆಯಬಾರದು. ಈ ಕೂಡಲೇ ದೂರನ್ನು ಹಿಂಪಡೆದುಕೊಂಡು ತಮ್ಮ ಗೌರವ ಉಳಿಕೊಳ್ಳಲಿ ಎಂದು ಪ್ರಗತಿಪರ ಚಿಂತಕ ಬಿ. ಶ್ರೀಪಾದ್ ಭಟ್ ಆಗ್ರಹಿಸಿದ್ದಾರೆ.