ತುಮಕೂರು: ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಯಾವಾಗ ಮಾಡಬೇಕು ಎಂದು ನಿರ್ಧರಿಸುವುದು ಚುನಾವಣಾ ಆಯೋಗವೇ ಹೊರತು ರಾಜ್ಯ ಸರ್ಕಾರವಲ್ಲ. ಮೀಸಲಾತಿ ಪಟ್ಟಿ ಸಿದ್ಧಪಡಿಸಿದ ನಂತರ ದಿನಾಂಕ ಘೋಷಣೆ ಮಾಡಲಾಗುತ್ತದೆ. ಹಾಗಾಗಿ ಡಿಸೆಂಬರ್ ಒಳಗೆ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ನಡೆಯುವ ನಿರೀಕ್ಷೆಯಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಮುಂಬರುವ ಚುನಾವಣೆಗಳಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳು ಹಾಗೂ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಕ್ರಮಗಳು ಮತ್ತು ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹ ಮುಂತಾದ ಉದ್ದೇಶಗಳೊಂದಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ ಇಂದು ಸಭೆ ನಡೆಸಿದೆ.
ಇದನ್ನು ಓದಿ: ಬಿಜೆಪಿಯಲ್ಲೀಗ ಹೊಸ ಸಿಎಂ ಚರ್ಚೆ ?! ದಾಳ ಉರುಳಿಸಬಹುದಾ ವಲಸಿಗರು?!!
ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಆಗುತ್ತಿದ್ದಾರೆ. ಅವರ ಬಳಿಕ ಇನ್ನೊಬ್ಬ ಭ್ರಷ್ಟರು ಬರುತ್ತಾರೆ. ಬಿಜೆಪಿ ಪಕ್ಷವೇ ಭ್ರಷ್ಟ ಪಕ್ಷವಾಗಿದೆ. ಐಎಎಸ್, ಐಪಿಎಸ್, ಐಆರ್ಎಸ್ಗಳಿಂದ ಲಂಚ ತೆಗೆದುಕೊಂಡು ಹುದ್ದೆಯನ್ನು ಮಂಜೂರು ಮಾಡುತ್ತಾರೆ. ನಾನು ಇಂಥಹ ಭ್ರಷ್ಟ ಸರಕಾರವನ್ನು ನೋಡೇಯಿಲ್ಲ. ಅಭಿವೃದ್ದಿ ಕೆಲಸಗಳಿಗೆ ದುಡ್ಡೇ ಇಲ್ಲ. ಮಾತು ಎತ್ತಿದರೆ ಕೊರೊನಾ ಅಂತಾರೆ. ರಾಜ್ಯ ಉಳಿಸೋಕೆ ಬಿಜೆಪಿ ಪಕ್ಷವನ್ನ ತೆಗಿಯಬೇಕು ಅಂತ ಸಿದ್ದರಾಮಯ್ಯ ಹೇಳಿದರು.
ರಣದೀಪ್ ಸುರ್ಜೇವಾಲಾ ಮಾತನಾಡಿ ʻʻಪಕ್ಷದ ಸಂಘಟನೆಯ ತಿಳುವಳಿಕೆ, ಶಕ್ತಿಯುತಗೊಳಿಸುವುದು ಮತ್ತು ನಾಯಕರ ಅಭಿಪ್ರಾಯ ಸಂಗ್ರಹದ ಹಿನ್ನೆಲೆಯಲ್ಲಿ ಸಭೆ ಸೇರಲಾಗಿದೆ. ಭೂತ್ ಸಮಿತಿ ಹಾಗೂ ಬ್ಲಾಕ್ ಸಮಿತಿಯಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಒಬಿಸಿ, ಎಸ್ಸಿ ಎಸ್ಟಿ, ಅಲ್ಪಸಂಖ್ಯಾತ ಘಟಕಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗಿದೆ. ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಕೈ ಹಿಡಿಯುತ್ತಾರೆ. ಕರ್ನಾಟಕದ ಬಿಜೆಪಿ ಸರಕಾರ ಜನರ ಆಯ್ಕೆಯಿಂದ ಆಗಿದ್ದಲ್ಲ. ಬಿಜೆಪಿಯದ್ದು ಹೈಜಾಕ್ ಸರಕಾರ ಎಂದರು.
ಬಿಜೆಪಿಯದ್ದು ಭ್ರಷ್ಟಾಚಾರದಿಂದ ಕೂಡಿದ ಸರಕಾರ. ಈಗ ನಾಯಕತ್ವ ಬದಲಾವಣೆ ನಾಟಕ ಶುರುವಾಗಿದೆ. ಏನೂ ಅಭಿವೃದ್ಧಿ ಮಾಡುತ್ತಿಲ್ಲ. ಮುಂಬರುವ ದಿನಗಳಲ್ಲಿ ಸಂಕಲ್ಪ ಯಾತ್ರೆ ಆರಂಭಿಸಲು ಚಿಂತಿಸಲಾಗಿದೆ. ಮುಂದಿನ ಚುನಾವಣೆಗೆ ಈಗಿಂದಲೇ ತಯಾರಿ ನಡೆಸುತಿದ್ದೇವೆ. ಇಡೀ ರಾಜ್ಯದ ಜನತೆ ಕಾಂಗ್ರೆಸ್ ಸರಕಾರದ ಮತ್ತು ಬಿಜೆಪಿ ಸರಕಾರದ ಆಡಳಿತ ಹೋಲಿಕೆ ಮಾಡುತಿದ್ದಾರೆ. ಉತ್ತಮ ಆಡಳಿತ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಬದಲಾವಣೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಇದನ್ನು ಓದಿ: ಅಂಗನವಾಡಿ ಮಕ್ಕಳ ಮೊಟ್ಟೆಗೆ ಕನ್ನ ಹಾಕಿದ ಸಚಿವೆ, ಸಚಿವೆಗೆ ಸಾಥ್ ನೀಡಿದ ಶಾಸಕ ಪರಣ್ಣ
ಬಾಯಿ ತಪ್ಪದ ಮಾತು
ಕಳೆದ ಎರಡು ವರ್ಷದಿಂದ ಒಂದು ಮನೆ ಕಟ್ಟಿಸಲು ಇವರಿಂದ ಆಗಿಲ್ಲ. ನಿಗದಿಯಾದ ಯೋಜನೆಗಳನ್ನೂ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡದ ಸರಕಾರ ಸುಳ್ಳು ಭರವಸೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಹಾಗಾಗಿ, ರಾಜ್ಯವನ್ನು ಉಳಿಸಬೇಕಾದರೆ, ಈ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕಾಗಿದೆ. ನಾವು ಅಧಿಕಾರಕ್ಕೆ ಬರುವುದು ಮುಖ್ಯವಲ್ಲ” ಎಂದು ಸಿದ್ದರಾಮಯ್ಯ ಹೇಳಿದರು.
ತಕ್ಷಣ ಪಕ್ಕದಲ್ಲೇ ಇದ್ದ ಎಸ್.ಆರ್.ಪಾಟೀಲ್ ತಪ್ಪಾಗಿರುವುದನ್ನು ಮೆಲ್ಲನೆ ಹೇಳಿದ ನಂತರ, ಕಾಂಗ್ರೆಸ್ ಪಕ್ಷವನ್ನಲ್ಲ, ಬಿಜೆಪಿಯನ್ನು ಸಿದ್ದರಾಮಯ್ಯ ಮಾತು ಬದಲಿಸಿದರು.
ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಧ್ರುವ ನಾರಾಯಣ, ಸಲೀಂ ಅಹಮದ್, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಉಪಸ್ಥಿತರಿದ್ದರು.