ಮುಂಬೈ: ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧಿಸಲಾಗಿರುವ 26 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ. ಅವುಗಳಲ್ಲಿ ಪ್ರಮುಖವಾದದ್ದು, ಅತ್ಯಾಚಾರ ಒಳಗಾದ ಯುವತಿಯನ್ನು ಮದುವೆಯಾಗಬೇಕೆಂದು ಆದೇಶ ನೀಡಿದೆ! ಆರೋಪಿಯೂ ಸಹ ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ.
ಹೈಕೋರ್ಟ್ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ಏಕ ಪೀಠವು ಆದೇಶವನ್ನು ನೀಡಿದ್ದು, ಸದ್ಯ ಸಂತ್ರಸ್ತ ಯುವತಿ ನಾಪತ್ತೆಯಾಗಿದ್ದು, ಆಕೆ ಒಂದು ವರ್ಷದೊಳಗೆ ಪತ್ತೆಯಾದರೆ ಮದುವೆಯಾಗಬೇಕು ಎಂದು ಷರತ್ತು ವಿಧಿಸಿದೆ. ಆದರೆ, ಒಂದು ವರ್ಷದ ಬಳಿಕ ಬಾಧಿತ ಯುವತಿ ಪತ್ತೆಯಾಗದಿದ್ದಲ್ಲಿ ಆರೋಪಿಯು ಈ ಷರತ್ತಿಗೆ ಬದ್ಧವಾಗಿರಬೇಕಿಲ್ಲ ತಿಳಿಸಲಾಗಿದೆ.
ಅತ್ಯಾಚಾರ ಆರೋಪಿ 22 ವರ್ಷದ ಯುವತಿಯೊಂದಿಗೆ ಸಮ್ಮತಿಯ ಸಂಬಂಧದಲ್ಲಿಯೇ ಇದ್ದರು. ಆದರೆ ಆಕೆ ಗರ್ಭಿಣಿಯಾಗಿದ್ದನ್ನು ತಿಳಿದು ಯುವಕ ಬಳಿಕ ಆಕೆಯನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದ. ಇದರಿಂದ ಬೇಸತ್ತ ಯುವತಿ ಅತ್ಯಾಚಾರ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿದ್ದಳು.
ಬಾಧಿತ ಸಂತ್ರಸ್ತೆ 2020ರ ಫೆಬ್ರವರಿಯಲ್ಲಿ ಆರೋಪಿಯ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಳು. ಆತನನ್ನು ಬಂಧಿಸಲಾಗಿತ್ತು. ಈ ದೂರಿನತ್ವಯ ಇವರಿಬ್ಬರೂ 2018 ರಿಂದ ಪರಸ್ಪರ ಸಂಬಂಧ ಹೊಂದಿದ್ದರು. ಈ ವಿಷಯ ತಮ್ಮ ತಮ್ಮ ಕುಟುಂಬಗಳಿಗೆ ತಿಳಿದಿತ್ತು ಮತ್ತು ಅದನ್ನು ಕುಟುಂಬವರ್ಗ ವಿರೋಧಿಸಲಿಲ್ಲ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದರು.
2019ರಲ್ಲಿ, ಬಾಧಿತ ಯುವತಿಯು ತಾನು ಗರ್ಭಿಣಿ ಎಂದು ಆರೋಪಿಗೆ ತಿಳಿಯುತ್ತಿದ್ದಂತೆ ಯುವತಿಯಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ್ದಾರೆ. ಇದೇ ವೇಳೆ ಬಾಧಿತ ಮಹಿಳೆಯು ಗರ್ಭಾವಸ್ಥೆ ಬಗ್ಗೆ ತನ್ನ ಕುಟುಂಬದ ಸದಸ್ಯರಿಗೆ ತಿಳಿಸಲು ಇಷ್ಟಪಡದ ಕಾರಣ ತನ್ನ ಮನೆಯನ್ನು ತೊರೆದು ದೂರವಾಗಿದ್ದಾಳೆ. ಅದಾದ ಮೇಲೆ ಜನವರಿ 27, 2020 ರಂದು ಬಾಧಿತ ಮಹಿಳೆಯು ನಗರದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು.
ಜನವರಿ 30 ರಂದು ಮಹಿಳೆಯು ಮಗುವನ್ನು ಒಂದು ಭವನದ ಮುಂದೆ ಬಿಟ್ಟು ಹೋಗಿದ್ದರು. ಈ ವಿಷಯವಾಗಿ, ಮಗುವನ್ನು ತ್ಯಜಿಸಿದ್ದಕ್ಕೆ ಆಕೆಯ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ. “ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಅರಿತ ಯುವತಿ ಬಹುಶಃ ನ್ಯಾಯದ ಹಾದಿಯಿಂದ ಪಲಾಯನ ಮಾಡಲು ಕಾರಣವಾಗಿರಬಹುದು” ಎಂದು ನ್ಯಾಯಮೂರ್ತಿ ಡಾಂಗ್ರೆ ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಸಂತ್ರಸ್ತ ಯುವತಿಯನ್ನು ಮದುವೆಯಾಗಲು ಮತ್ತು ಮಗುವಿನ ಪಿತೃತ್ವ ಜವಾಬ್ದಾರಿಯನ್ನು ಅಂಗೀಕರಿಸಲು ತಾನು ಸಿದ್ಧನಿದ್ದೇನೆ ಎಂದು ಆರೋಪಿಯು ಹೈಕೋರ್ಟ್‌ಗೆ ಭರವಸೆ ನೀಡಿದ್ದಾನೆ. ಸದ್ಯ ಯುವತಿ ನಾಪತ್ತೆ ನಾಪತ್ತೆಯಾಗಿದ್ದಾಳೆ ಮತ್ತು ಶಿಶುಪಾಲನಾ ಕೇಂದ್ರಕ್ಕೆ ದಾಖಲಾಗಿದ್ದ ಮಗುವನ್ನು ಈಗಾಗಲೇ ದತ್ತು ನೀಡಲಾಗಿದೆ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸೂಕ್ತವೆಂದು ನ್ಯಾಯಪೀಠ ತಿಳಿಸಿದೆ.