ಶೌಚಾಲಯ ನಿರ್ಮಾಣಕ್ಕೆ ನಿರಾಸಕ್ತಿ: ಪಾಲಿಕೆ ಮುಂದೆ ಅರೆಬೆತ್ತಲೆಯಾಗಿ ಪ್ರತಿಭಟಿಸಿದ ವ್ಯಕ್ತಿ

ಔರಂಗಾಬಾದ್ : ಜನನಿಬಿಡ ಪ್ರದೇಶವಾದ ಗುಲ್ಮಂಡಿ ಮಾರುಕಟ್ಟೆಯಲ್ಲಿ ಶೌಚಾಲಯ ನಿರ್ಮಿಸಿಲ್ಲ.
ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ವ್ಯಕ್ತಿಯೊಬ್ಬ ಔರಂಗಾಬಾದ್​ ಮಹಾನಗರ ಪಾಲಿಕೆ ಮುಂದೆ ಏಕಾಂಗಿಯಾಗಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಕಚೇರಿ ಪ್ರವೇಶಿಸಲು ಮುಂದಾದಾಗ ಆತನನ್ನು ಬಂಧಿಸಲಾಗಿದೆ.

ನಗರದ ಪ್ರಮುಖ ಮಾರುಕಟ್ಟೆಯಾದ ಗುಲ್ಮಂಡಿಯಲ್ಲಿ ದಿನಂಪ್ರತಿ ಸಾವಿರಾರು ಜನರು ವಹಿವಾಟಿಗೆ ಬರುತ್ತಾರೆ. ನಿತ್ಯಕರ್ಮಕ್ಕೆ ಶೌಚಾಲಯ ಇಲ್ಲವಾಗಿದೆ. ಇದ್ದ ಶೌಚಾಲಯವನ್ನು ಪಾಲಿಕೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯ ಕೇಳಿ ಬಂದಿತ್ತು.

ಮಾರುಕಟ್ಟೆ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಮಾಡಲು ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸೊಪ್ಪು ಹಾಕದ ಕಾರಣ ಅರೆ ಬೆತ್ತಲೆಯಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಈ ಹಿಂದೆಯೇ ಪ್ರತಿಭಟನಾಕಾರ ಎಚ್ಚರಿಕೆ ನೀಡಿದ್ದರು.

ಇದನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರು. ಇಂದು ಬೆಳಗ್ಗೆ ಪಾಲಿಕೆ ಮುಂದೆ ಪ್ರತಿಭಟನೆ ಆರಂಭಿಸಿದ ರಮೇಶ್​ ಪಾಟೀಲ್​ ಎಂಬುವವರು, ಪಾಲಿಕೆ ವಿರುದ್ಧ ಘೋಷಣೆ ಕೂಗಿದರು. ಬಳಿಕ ಬಟ್ಟೆಯನ್ನು ಕಳಚಿ ಒಳಪುಡಿನಲ್ಲೇ ಪ್ರತಿಭಟನೆ ಶುರು ಮಾಡಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಅಧಿಕಾರಿಗಳು ಪೊಲೀಸರ ನೆರವಿನಿಂದ ಆತನನ್ನು ತಡೆದು ಬಲವಂತವಾಗಿ ಬಂಧಿಸಿದ್ದಾರೆ.

ಶೌಚಾಲಯ ಕಟ್ಟಿ ಎಂದು ಪ್ರತಿಭಟನೆ ನಡೆಸಿದ ವ್ಯಕ್ತಯ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ ಬಂಧನ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ಸ್ವಚ್ಛ ಭಾರತ ಅಭಿಯಾನಕ್ಕೆ ಕೋಟ್ಯಾಂತರ ಹಣ ಖರ್ಚು ಮಾಡುವ ಸರಕಾರಗಳು, ಸಾರ್ವಜನಿಕವಾಗಿ ಶೌಚಾಲಯ ಕಟ್ಟಿದಿರುವುದು ಜನವಿರೋಧಿಯಾಗಿದೆ. ರಮೇಶ್ ಪಾಟೀಲ್ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *