ಕ್ಯಾನ್ಸರ್‌ಪೀಡಿತೆ ಶಸ್ತ್ರಚಿಕಿತ್ಸೆಗೆ ಎಸ್ಪಿ ನೆರವು: ಪೊಲೀಸ್ ವಸತಿಗೃಹದಲ್ಲೇ ಆಶ್ರಯ
ಹಾಸನ: ಫಾತಿಮಾ ಎಂಬ ಮೂಕ ಮಹಿಳೆ ನಗರದ ಬಹುತೇಕ ಮಂದಿಗೆ ಚಿರ ಪರಿಚಿತಳು. ಹೆಚ್ಚಾಗಿ ಪೊಲೀಸ್ ಠಾಣೆಗಳ ಒಳ-ಹೊರಗೆ ಕಾಣಸಿಗುವ ಈ ಹೆಣ್ಣು ಮಗಳು, ಕೆಲವು ಸಂದರ್ಭ ಪೊಲೀಸರಂತೆ ಲಾಠಿ ಹಿಡಿದು, ಬಾಯಲ್ಲಿ ವಿಸಲ್ ಸಿಕ್ಕಿಸಿಕೊಂಡು ಹಲವು ವರ್ಷಗಳಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೂ ಉಂಟು.
ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವವರಿಗೆ ಮೂಕ ಭಾಷೆಯಲ್ಲೇ ಎಚ್ಚರಿಸಿದ್ದಾಳೆ. ಹೀಗೇಕೆ ಮಾಡುತ್ತೀಯೆ ಎಂದು ಕೇಳಿದರೆ ಆಕೆಯಿಂದ ನಿರುತ್ತರ. ಕಾರಣ ಹೇಳಲು ಮಾತು ಬರುವುದಿಲ್ಲ. ಆದರೂ ತನ್ನ ಆತ್ಮತೃಪ್ತಿಗೋ ಅಥವಾ ಉದರ ಪೋಷಣೆಗೋ, ತೋಚಿದ, ಮಾಡಬೇಕು ಎಂದುಕೊಂಡ ಕೆಲಸವನ್ನು ತುಂಬಾ ಪ್ರಾಮಾಣಿಕತೆ, ನಿಷ್ಠೆಯಿಂದ ಸ್ವಯಃ ಸೇವಕಿಯಾಗಿ ಸಮಾಜ ಮುಖಿ ಸೇವೆ ನಿರ್ವಹಿಸುತ್ತಿದ್ದಳು. ಈ ಮೂಲಕ ಪೊಲೀಸರಾದಿಯಾಗಿ ಜನಮನ ಗೆದ್ದಿದ್ದಳು. ಇದೇ ಕಾರಣಕ್ಕೆ ಸ್ವತಃ ಎಸ್ಪಿ ಅವರೇ ಫಾತಿಮಾಳನ್ನು ತಮ್ಮ ಕಚೇರಿಯಲ್ಲಿ ಅಭಿನಂದಿಸಿ ಬೆನ್ನುತಟ್ಟಿದ್ದರು.
ಕ್ಯಾನ್ಸರ್ ಎಂಬ ವಿಷಬಾಣ: ಫಾತಿಮಾ ಎಂಬ ಮೂಕ ಹಕ್ಕಿ ಭಾಷೆಗೂ ನಿಲುಕದ ಭಾವಗೀತೆಯನ್ನು ತನ್ನೊಳಗೇ ಹಾಡಿಕೊಳ್ಳುತ್ತಾ ದಿನದೂಡುತ್ತಿತ್ತು. ಆದರೆ ಈಕೆತೆ ಗೊತ್ತಿಲ್ಲದಂತೆ ಸ್ತನ ಕ್ಯಾನ್ಸರ್ ಎಂಬ ಹೆಮ್ಮಾರಿಯ ವಿಷಬಾಣ ಬಡಪಾಯಿಗೆ ನಾಟಿಕೊಂಡಿತ್ತು. ಯಾರಿಗಾದರೂ ಹೇಳಿಕೊಳ್ಳೋಣ ಎಂದರೆ ಸಾಧ್ಯವಾಗದ ಅಸಹಾಯಕ ಸ್ಥಿತಿ ಈ ಅಬಲೆಯದು.
ನನ್ನವರು ಎಂದು ಈಕೆಗೆ ಯಾರೂ ಇಲ್ಲದ ಕಾರಣ, ಅನೇಕ ದಿನಗಳ ಕಾಲ ತನ್ನ ನೋವನ್ನು ತಾನೇ ಉಂಡಿದ್ದಳು ಫಾತಿಮಾ. ನನಗೆ ಮಾರಣಾಂತಿಕ ಕ್ಯಾನ್ಸರ್ ಇದೆ ಎಂದು ಆಕೆಗೆ ಗೊತ್ತಿರಲಿಲ್ಲ. ಇಂಥ ಮಹಿಳೆಗೆ ಎಸ್ಪಿ ಆದಿಯಾಗಿ ಅನೇಕರು ನೆರವಿಗೆ ನಿಲ್ಲುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎಸ್ಪಿ ಬಳಿ ನಿವೇದನೆ: ಕಡೆಗೊಂದು ದಿನ ಎದೆಯೊಳಗೆ ನೋವು ಹೆಚ್ಚಾದಾಗ ನೇರವಾಗಿ ಎಸ್ಪಿ ಆರ್.ಶ್ರೀನಿವಾಸ್‌ಗೌಡ ಅವರ ಬಳಿಗೆ ಹೋದ ಫಾತಿಮಾ, ಎದೆ ನೋವು ಎಂದು ಮೂಕ ಭಾಷೆಯಲ್ಲಿಯೇ ಅರುಹಿದಳು. ಕೂಡಲೇ ಇದನ್ನು ಗ್ರಹಿಸಿದ ಎಸ್ಪಿ, ತಕ್ಷಣ ಅವರನ್ನು ತಮ್ಮ ಇಲಾಖೆಯ ವಾಹನದಲ್ಲೇ ಹಿಮ್ಸ್ಗೆ ಆಸ್ಪತ್ರೆಗೆ ದಾಖಲಿಸಿದರು. ಜಿಲ್ಲಾಸ್ಪತ್ರೆ ವೈದ್ಯರು ತಪಾಸಣೆ ಮಾಡಿದಾಗ ಫಾತಿಮಾಗೆ ಸ್ತನ ಕ್ಯಾನ್ಸರ್ ಜೊತೆಗೆ ಗೆಡ್ಡೆ ಬೆಳೆದಿರುವುದು ಗೊತ್ತಾಯಿತು. ಕೂಡಲೇ ಶಸ್ತç ಚಿಕಿತ್ಸೆ ಮಾಡದಿದ್ದರೆ ಈಕೆಯ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದರು.
ನೆರವಿಗೆ ನಿಂತ ಶ್ರೀನಿವಾಸ್‌ಗೌಡ: ಆ ವೇಳೆಗಾಗಲೇ ಫಾತಿಮಾಗೆ ನನ್ನವರು ಎಂದು ಯಾರು ಇಲ್ಲ ಎಂಬುದನ್ನು ತಿಳಿದಿದ್ದ ಶ್ರೀನಿವಾಸ್‌ಗೌಡ ಅವರು, ಚಿಕಿತ್ಸೆಗೆ ತಗುಲುವ ವೆಚ್ಚವನ್ನು ನಾನೇ ಭರಿಸುವೆ ನೀವು ಶಸ್ತ್ರ ಚಿಕಿತ್ಸೆ ಮಾಡಿ ಎಂದು ವೈದ್ಯರಿಗೆ ತಿಳಿಸಿದರು.
ಇದೀಗ ನಿರ್ಗತಿಕ ಮಹಿಳೆಗೆ ಯಶಸ್ವಿಯಾಗಿ ಒಂದಲ್ಲ, ಎರಡು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎದೆಯ ಭಾಗದಲ್ಲಿದ್ದ ಗೆಡ್ಡೆಯನ್ನೂ ಹೊರ ತೆಗೆಯಲಾಗಿದೆ. ಎಸ್ಪಿ ಅವರ ಜೊತೆ ಎಎಸ್ಪಿ ಬಿ.ಎನ್.ನಂದಿನಿ ಮೊದಲಾದವರು ಕೈ ಜೋಡಿಸಿದ್ದಾರೆ. ಸದ್ಯಕ್ಕೆ ಮಹಿಳೆಗೆ ಯಾವುದೇ ತೊಂದರೆ ಇಲ್ಲ ಎಂದು ಹಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಮೂರ್ತಿ ಹೇಳಿದ್ದಾರೆ.
ಯಾವುದೇ ಫಲಾಪೇಕ್ಷೆ ಇಲ್ಲದೆ ನಾವು ಕೆಲಸ ಮಾಡಿದರೆ ಇಂದಲ್ಲ ನಾಳೆ ನಮ್ಮ ಪರ ಯಾರಾದರೂ ನಿಲ್ಲುತ್ತಾರೆ ಎಂಬುದಕ್ಕೆ ಫಾತಿಮಾ ಕಣ್ಣಮುಂದಿನ ಉದಾಹರಣೆ ಯಾಗಿದ್ದಾಳೆ. ಇನ್ನು ಪೊಲೀಸ್ ಅಧಿಕಾರಿಗಳೆಂದರೆ ನಿಷ್ಠೂರ ಮನೋಭಾವದವರು ಎಂಬ ಅಭಿಪ್ರಾಯವನ್ನು ಶ್ರೀನಿವಾಸ್‌ಗೌಡ ಅವರು ಸುಳ್ಳಾಗಿಸಿ ಇತರರಿಗೆ ಮಾದರಿಯಾಗಿದ್ದಾರೆ. ಎಸ್ಪಿ ಮತ್ತವರ ತಂಡದ ಈ ಮಾನವೀಯ ಕಾರ್ಯ ಅಪಾರ ಜನಮೆಚ್ಚುಗೆ ಹಾಗೂ ಪ್ರಶಂಸಗೆ ಪಾತ್ರವಾಗಿದೆ.
ವಸತಿಗೃಹದಲ್ಲಿ ಆಶ್ರಯ: ಕ್ಯಾನ್ಸರ್ ಗೆದ್ದಿರುವ ಫಾತಿಮಾಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಜೊತೆಗೆ ಆರೈಕೆ ಬೇಕು ಎಂಬ ವೈದ್ಯರ ಸಲಹೆ ಮೇರೆಗೆ ಬಿ.ಕಾಟೀಹಳ್ಳಿಯ ಪೊಲೀಸ್ ವಸತಿಗೃಹದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಊಟ ತಿಂಡಿ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಗಳೇ ಮಾಡುತ್ತಿರುವುದಲ್ಲದೇ ಆರೈಕೆಯ ಜವಾಬ್ದಾರಿಯನ್ನೂ ಮಾಡುತ್ತಿದ್ದಾರೆ. ಪೊಲೀಸ್ ಅಲ್ಲದೇ ಇದ್ದರೂ ಫಾತಿಮಾ ಎಷ್ಟೋ ಸಂದರ್ಭ, ಸನ್ನಿವೇಶಗಳಲ್ಲಿ ತಮ್ಮ ಕೆಲಸ ಮಾಡಿದ್ದಾಳೆ. ಸಂಕಷ್ಟದಲ್ಲಿರುವ ಆಕೆಗೆ ಈಗ ನಾವು ಫಾತಿಮಾಳ ಯೋಗಕ್ಷೇಮ ನೋಡಿ ಕೊಳ್ಳುತ್ತಿದ್ದೇವೆ ಎಂಬುದು ಪೊಲೀಸ್ ಸಿಬ್ಬಂದಿಯ ಮಾನವೀಯ ನುಡಿಯಾಗಿದೆ.