ಮುಖ್ಯವಾಹಿನಿಯಲ್ಲ, ಕಾರ್ಪೊರೆಟ್ ಮಾಧ್ಯಮ, ಪರ್ಯಾಯವಲ್ಲ,  ಜನತಾ ಮಾಧ್ಯಮ : ಸಾಯಿನಾಥ್

ವಸಂತರಾಜ ಎನ್.ಕೆ.

ಮುಖ್ಯವಾಹಿನಿ ಜನತೆಯ ಕುರಿತು ಬರೆಯುವಜನತಾ ಮಾಧ್ಯಮಗಳು, ಅವುಗಳ ಗಾತ್ರ, ತಲುಪುವಿಕೆ ಎಷ್ಟೇ ಇರಲಿ, ತಮ್ಮನ್ನು ತಾವು ಮುಖ್ಯವಾಹಿನಿ  ಮಾಧ್ಯಮಗಳೆಂದು ಪರಿಗಣಿಸಬೇಕು. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಗಾಂಧಿ, ಅಂಬೇಡ್ಕರ್ ನಡೆಸಿದ ಪತ್ರಿಕೆಗಳು ಎಷ್ಟೇ ಸಣ್ಣವಾಗಿದ್ದರೂ ಜನತೆಯ ಮಾಧ್ಯಮಗಳಾಗಿ ಅಗಾಧ ರಾಜಕೀಯ ಪರಿಣಾಮ ಬೀರಿದವು. ಕಳೆದ 2-3 ದಶಕ ಬಿಟ್ಟರೆ ಸುಮಾರು 2 ಶತಕಗಳ ಭಾರತೀಯ ಮಾಧ್ಯಮದ ಇತಿಹಾಸದ ಉದ್ದಕ್ಕೂ ಇದು ಸಾಧ‍್ಯವಾಗಿತ್ತು. ಆದ್ದರಿಂದ ಕಾರ್ಪೊರೆಟ್ ಮಾಧ್ಯಮಗಳಿಂದ ಪ್ರತ್ಯೇಕವಾದಜನತಾ ಮಾಧ್ಯಮಕ್ಕೆ ತಕ್ಕುದಾದ ಶೈಲಿ, ಉದ್ದೇಶ, ಕಂಟೆಂಟ್, ಸಂರಚನೆ, ಸಂಪನ್ಮೂಲ ಹೊಂಚುವಿಕೆ, ನೋಡುಗ/ಓದುಗ ಸಮೂಹವನ್ನು ಕಟ್ಟಿ ಬೆಳೆಸುವ ಬಗೆ ಇತ್ಯಾದಿಗಳನ್ನು ರೂಪಿಸಿಕೊಳ್ಳಬೇಕು.

*********************************************************

ಮುಖ್ಯವಾಹಿನಿ ಮಾಧ್ಯಮ’ ಮತ್ತು ‘ಪರ್ಯಾಯ ಮಾಧ್ಯಮ’ ಎಂಬ ಪರಿಕಲ್ಪನೆಯನ್ನೇ ನಾನು ಪ್ರಶ್ನಿಸುತ್ತೇನೆ. ನಾವು ಮುಖ್ಯವಾಹಿನಿ ಮಾಧ್ಯಮ ಎಂದು ಕರೆಯುತ್ತಿರುವುದು ನಿಜವಾಗಿಯೂ, ಕಾರ್ಪೊರೆಟುಗಳ ಮತ್ತು ಕಾರ್ಪೊರೆಟುಗಳಿಗಾಗಿ ಇರುವ ಕಾರ್ಪೊರೆಟ್ ಮಾಧ್ಯಮವಾಗಿದೆ. ‘ಮುಖ್ಯವಾಹಿನಿ’ಯ ಬಹುಸಂಖ‍್ಯಾತ ರೈತರು, ಕೂಲಿಕಾರರು, ಗ್ರಾಮೀಣ ಜನತೆ, ನಗರದ ಕಾರ್ಮಿಕರ ಕುರಿತು ಈ ಮಾಧ್ಯಮ ಬರೆಯುವುದೇ ಇಲ್ಲ. ಉದಾಹರಣೆಗೆ, ‘ರಾಷ್ಟ್ರೀಯ ದೈನಿಕ’(ಇದು ಇನ್ನೊಂದು ಹುಸಿ ಕಲ್ಪನೆ)ಗಳು ಕೊರೊನಾ-ಪೂರ್ವ 5 ವರ್ಷ ಅವಧಿಯಲ್ಲಿ ಮುಖಪುಟದಲ್ಲಿ ಶೇ.69 ಭಾರತೀಯರು ವಾಸಿಸುವ ಗ್ರಾಮೀಣ ಪ್ರದೇಶದ ಜನರ (ರೈತರು, ಕೂಲಿಕಾರರು) ಹಾಗೂ ಕೃಷಿ, ಕಸುಬುಗಳು ಮತ್ತಿತರ ಗ್ರಾಮೀಣ ವಿದ್ಯಮಾನಗಳಿಗೆ ಕೊಟ್ಟ ಜಾಗ ಕೇವಲ 0.67%. ಹೀಗಿರುವಾಗ ಈ ಕಾರ್ಪೊರೆಟ್ ಮಾಧ್ಯಮವನ್ನು ಮುಖ್ಯವಾಹಿನಿ ಮಾಧ್ಯಮ ಎಂದು ಕರೆಯುವುದು ಹೇಗೆ? – ಹೀಗೆಂದು ಪ್ರಶ್ನಿಸಿದವರು ಖ್ಯಾತ ಪತ್ರಕರ್ತ ಮತ್ತು ‘ಪರಿ’ (PARI – People’s Archives of Rural India) ಸ್ಥಾಪಕ ಸಂಪಾದಕ ಪಿ ಸಾಯಿನಾಥ್. ಅವರು ಅಕ್ಟೋಬರ್ 17ರಂದು ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಏರ್ಪಡಿಸಿದ್ದ ವೆಬಿನಾರ್ ಸರಣಿಯ ‘ಪರ್ಯಾಯ ಮಾಧ್ಯಮ ಏಕೆ? ಹೇಗೆ? : ಕೊರೊನಾ ಕಾಲದಲ್ಲಿ, ಮೊದಲು ಮತ್ತು ನಂತರ’ ಎಂಬ ವೆಬಿನಾರಿನಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.  ಮುಂದುವರೆದು ಅವರು ಮುಖ್ಯವಾಹಿನಿ ಜನರ ಕುರಿತು ಬರೆಯುವ, ಬರೆಯಲು ಬಯಸುವ ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆ ಯಂತಹ ಮಾಧ್ಯಮಗಳು ತಮ್ಮನ್ನು ‘ಜನತಾ ಮಾಧ್ಯಮ’ (People’s Media) ಎಂದು ಭಾವಿಸಬೇಕು ಎಂದರು.

ಕೊರೊನಾ ಕಾಲದಲ್ಲಿ ಈ ಕಾರ್ಪೊರೆಟ್ ಮಾಧ್ಯಮಗಳ ವರ್ತನೆ ಇದನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸಿದೆ. ಲಾಕ್ ಡೌನ್ ಕಾಲದಲ್ಲಿ ತಮ್ಮ ಹುಟ್ಟುಗ್ರಾಮಗಳತ್ತ ವಲಸೆ ಕಾರ್ಮಿಕರ ಚಾರಿತ್ರಿಕ ಗಾತ್ರದ (ದೇಶವಿಭಜನೆಯ ನಂತರದ ವಲಸೆಯನ್ನು ನೆನಪಿಸುವ) ವಲಸೆಯ ಸಂದರ್ಭದಲ್ಲಿ ಇವರು ಕೇಳಿದ ಪ್ರಶ್ನೆ ‘ಇವರು ಯಾಕೆ ಹೀಗೆ ಹೋಗುತ್ತಿದ್ದಾರೆ’ ಅಂತ. ಅದೂ ನಗರಗಳ ಕುಲೀನರು, ಮಧ್ಯಮ ವರ್ಗದವರು ಬಯಸುವ (ಮನೆಕೆಲಸ, ಹಾಲು/ಪೇಪರ್, ಆಫೀಸ್ ಬಾಯ್ ಇತ್ಯಾದಿ) ಸೇವೆಗಳಲ್ಲಿ ಭಾರೀ ವ್ಯತ್ಯಯಗಳಾದ್ದರಿಂದ. ಆದರೆ ಅವರು ನಿಜವಾಗಿಯೂ ಕೇಳಬೇಕಾಗಿದ್ದ ಮತ್ತು ಉತ್ತರ ಕಂಡುಕೊಳ್ಳಬೇಕಾಗಿದ್ದ ಪ್ರಶ್ನೆ ‘ಇವರು ಯಾಕೆ ಯಾವಾಗ ಇಷ್ಟು ಸಂಖ್ಯೆಯಲ್ಲಿ ನಗರಗಳಿಗೆ ವಲಸೆ ಬಂದಿದ್ದಾರೆ’ ಕಳೆದ ದಶಕದಲ್ಲಿ 1990ರ ಜಾಗತೀಕರಣದ ನೀತಿಗಳ ಪರಿಣಾಮವಾಗಿ ಗ್ರಾಮೀಣ ಮತ್ತು ಕೃಷಿಯ ಸಂಕಷ್ಟಗಳಿಂದ ಸಂತ್ರಸ್ತರಾಗಿ  ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ದೇಶವಿಭಜನೆಯ ನಂತರದ (ಅಥವಾ ಅದನ್ನೂ ಮೀರಿಸುವ) ಗಾತ್ರದ ವಲಸೆ ನಡೆದಿದ್ದು, ಅದು ಅವುಗಳ ಪ್ರಧಾನ ವರದಿಯಾಗಿರಬೇಕಿತ್ತು. ಆಗ ಇವೆರಡೂ ಪ್ರಶ್ನೆಗಳನ್ನೂ ಕೇಳುವ ಅಗತ್ಯವಿರುತ್ತಿರಲಿಲ್ಲ ಎಂದು ಸಾಯಿನಾಥ್ ಕಾರ್ಪೊರೆಟ್ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡರು.

ಇದು ಸಾಲದೆಂಬಂತೆ ಕೊರೊನಾ ಕಾಲದಲ್ಲಾದರೂ ಇವರ ಕುರಿತು ಬರೆಯಬಹುದಾಗಿದ್ದ ಸಾವಿರಾರು ಪತ್ರಕರ್ತರನ್ನು ವಜಾ ಮಾಡಲಾಗಿದೆ. ಹೆಚ್ಚಿನ ಮಾಧ್ಯಮಗಳಲ್ಲಿ (ಕೊರೊನಾ ಸಂಬಂಧಿತ ಹಣಕಾಸಿನ ಸಮಸ್ಯೆ ಕೆಲವೇ ಪ್ರಸಂಗಗಳಲ್ಲಿ ನಿಜವಾದ ಕಾರಣವಾಗಿತ್ತು) ಈ ಕೊರೊನಾ ‘ಸದವಕಾಶ’ವನ್ನು ಬಳಸಿ ಖರ್ಚು ಕಡಿತ ಮಾಡಿ ಲಾಭ ಹೆಚ್ಚಿಸಿಕೊಳ್ಳುವ ಮುಖ್ಯ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಕೊರೊನಾ ಕಾಲದಲ್ಲಿ ಜನರ ಸಂಕಷ್ಟಗಳು, ಸರಕಾರಗಳ ವೈಫಲ್ಯಗಳ ಕುರಿತು ವರದಿಗಳ ಮೂಲಕ ತಮ್ಮ ಕರ್ತವ್ಯ ಪಾಲಿಸಿದ ಪತ್ರಕರ್ತರ ಮೇಲೆ ಸರಕಾರ 75ಕ್ಕೂ ಹೆಚ್ಚು ಎಫ್.ಐ.ಆರ್  ಗಳನ್ನು ಕೊರೊನಾ ಅವಧಿಯಲ್ಲಿ ದಾಖಲಿಸುವ ಮೂಲಕ ದಮನಚಕ್ರ ನಡೆಸಿತು. ಇದನ್ನು ಮಾಧ್ಯಮ ಧಣಿಗಳು  ಮೌನವಾಗಿ ನೋಡುತ್ತಿದ್ದರು ಅಥವಾ ವಾಸ್ತವ ಮರೆಮಾಚುವ ಈ ಕೆಲಸದಲ್ಲಿ ಶಾಮೀಲಾದರು. ಕರ್ತವ್ಯನಿರತ ಪತ್ರಕರ್ತರ ಮೇಲೆ ಯು.ಎ.ಪಿ.ಎ, ಎನ್.ಎಸ್.ಎ, ದೇಶದ್ರೋಹ ಮುಂತಾದ ಕರಾಳ ಕಾನೂನುಗಳು ಅಲ್ಲದೆ ಸಾಂಕ್ರಾಮಿಕ ಕಾಯಿದೆ ಸೇರಿದಂತೆ 55 ಕಾನೂನುಗಳ ದುರ್ಬಳಕೆ ಮಾಡಲಾಗಿದೆ, ಎಂದು ಪಿ ಸಾಯಿನಾಥ್ ಕಿಡಿ ಕಾರಿದರು.

ಇದಕ್ಕೆ ಕಾರಣ, ಮಾಧ್ಯಮ ಇಂದು ಮಾಹಿತಿ ಸಂವಹನದ ಸಂರಚನೆಗೆ ಸೀಮಿತವಾಗಿಲ್ಲ. ಮಾಧ್ಯಮ ಮತ್ತು ಮನೋರಂಜನೆ ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ಒಂದು ಅಗಾಧ ದೈತ್ಯ ಗಾತ್ರದ ಉದ್ಯಮ. ಕಾರ್ಪೊರೆಟ್ ಮಾಧ್ಯಮ ಕಂಪನಿಗಳು ಇನ್ನೂ ದೊಡ್ಡ ದೈತ್ಯ ಗಾತ್ರದ ಉದ್ಯಮ ಸಮೂಹಗಳ ಭಾಗ. ಇವುಗಳ ಉದ್ದೇಶ ತನ್ನ ಧಣಿಗಳ ಆರ್ಥಿಕ ಹಿತಾಸಕ್ತಿ ಕಾಯುವುದು ಬಿಟ್ಟರೆ ಬೇರೇನೂ ಅಲ್ಲ. 2014ರ ನಂತರ ಸಾಮಾಜಿಕ-ಧಾರ್ಮಿಕ ಮೂಲಭೂತವಾದಿಗಳ ಮತ್ತು ಆರ್ಥಿಕ-ಮಾರುಕಟ್ಟೆ ಮೂಲಭೂತವಾದಿಗಳ ಕೂಟ ರಾಜಕೀಯ ಅಧಿಕಾರ ಪಡೆದಿದೆ.  ಇದು ಕಾರ್ಪೊರೆಟ್ ಹಿತಾಸಕ್ತಿಗೆ ಹಿಂದೆಂದೂ ಕಾಣದಷ್ಟು ಬದ್ಧವಾಗಿದೆ. ಆದ್ದರಿಂದ ಕಾರ್ಪೊರೆಟ್ ಮಾಧ್ಯಮ ಕಂಪನಿಗಳು ಸರಕಾರದ ಜತೆ ಪೂರ್ಣವಾಗಿ ಶಾಮೀಲಾಗಿವೆ. ದೇಶದ ಅತಿ ದೊಡ್ಡ ಏಕಸ್ವಾಮ್ಯ ಮಾಧ್ಯಮ ಕಾರ್ಪೊರೆಟ್ ಕಂಪನಿ, ದೇಶದ ಅತಿ ದೊಡ್ಡ ಕಾರ್ಪೊರೆಟ್ ಕಂಪನಿ ಸಮೂಹದ ಭಾಗ. ದೇಶದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ದೇಶದ ಅತಿ ದೊಡ್ಡ ಕಾರ್ಪೊರೆಟ್ ಮಾಧ್ಯಮದ ಧಣಿ ಕೂಡಾ. ಆದ್ದರಿಂದ ಮುಖ್ಯವಾಹಿನಿ ಜನತೆಯ ಕುರಿತು ಈ ಮಾಧ್ಯಮಗಳಲ್ಲಿ ಹೆಚ್ಚನ್ನು ನಿರೀಕ್ಷಿಸುವುದು ಹುಂಬತನವಾಗುತ್ತದೆ ಎಂದು ಸಾಯಿನಾಥ್ ಅಭಿಪ್ರಾಯಪಟ್ಟರು.

ಸಾಮಾಜಿಕ ಮಾಧ್ಯಮ ಎಂಬುದಿಲ್ಲ, ಅವೂ ಕಾರ್ಪೊರೆಟ್ ಮಾಧ್ಯಮಗಳೇ

ಅದೇ ರೀತಿ ಗೂಗಲ್/ಯೂಟ್ಯೂಬ್, ಫೇಸ್ ಬುಕ್/ವಾಟ್ಸಪ್ ಇತ್ಯಾದಿ ಇಂಟರ್ನೆಟ್ ಆಧಾರಿತ ವೇದಿಕೆಗಳು ಸಾಮಾಜಿಕ ಮಾಧ್ಯಮಗಳು ಎಂದು ಭಾವಿಸುವುದು ಮತ್ತು ಅದು ಜನಪರ ಮಾಧ್ಯಮಗಳಿಗೆ ವೇದಿಕೆಯಾಗಬಲ್ಲುದು ಎಂದು ನಿರೀಕ್ಷಿಸುವುದು ಸಹ ಹುಂಬತನವಾಗುತ್ತದೆ. ಏಕೆಂದರೆ ಜಗತ್ತಿನ ಮೊದಲ ಹತ್ತು ದೈತ್ಯ ಕಾರ್ಪೊರೆಟುಗಳ ಪಟ್ಟಿಯಲ್ಲಿ ಬರುವ ಈ ಕಂಪನಿಗಳ ಆರ್ಥಿಕ ಶಕ್ತಿ ಹಲವು ದೊಡ್ಡ ಮೂರನೇ ಜಗತ್ತಿನ ದೇಶಗಳ ಆರ್ಥಿಕ ಶಕ್ತಿಗಿಂತ ದೊಡ್ಡದು. ಇವುಗಳ ಆರ್ಥಿಕ ಹಿತಾಸಕ್ತಿ ಸಹ, (ಹಿಂದೆ ಹೇಳಿದ) ದೇಶದ ರಾಜಕೀಯ ಅಧಿಕಾರ ಹಿಡಿದಿರುವ ಸಾಮಾಜಿಕ-ಧಾರ್ಮಿಕ ಮೂಲಭೂತವಾದಿಗಳ ಮತ್ತು ಆರ್ಥಿಕ-ಮಾರುಕಟ್ಟೆ ಮೂಲಭೂತವಾದಿಗಳ ಕೂಟಗಳ ಹಿತಾಸಕ್ತಿಯೊಂದಿಗೆ ಮಿಳಿತವಾಗುತ್ತವೆ. ಅವೂ ಕಾರ್ಪೊರೆಟ್ ಮಾಧ್ಯಮಗಳೇ. ಜನತೆಯ ಖಾಸಗಿ ಮಾಹಿತಿಯನ್ನು ಕದ್ದು ಮಾರುವ, ಮತ್ತು ಜನಪರ ಮಾಧ್ಯಮ ಘಟಕಗಳು ಕಟ್ಟಿ ಬೆಳೆಸಿದ ಜನಪ್ರಿಯತೆ ಮತ್ತು ಕಂಟೆಂಟನ್ನು ಪುಕ್ಕಟೆಯಲ್ಲಿ ಪಡೆದು, ಅದರ ಬಳಕೆದಾರರನ್ನು ಜಾಹೀರಾತುದಾರರಿಗೆ ಮಾರುವುದು ಅವುಗಳ ವಹಿವಾಟಿನ ಮಾದರಿ. ಆದ್ದರಿಂದ ಅವು  ಜನಪರ ಮಾಧ್ಯಮ ಘಟಕಗಳ ತಲುಪುವಿಕೆ ಇತ್ಯಾದಿಗಳನ್ನು ತಮ್ಮ ಆರ್ಥಿಕ ಹಿತಾಸಕ್ತಿಗೆ ಅಧೀನವಾಗಿ ನಿಯಂತ್ರಿಸುತ್ತವೆ. ಆದ್ದರಿಂದ ‘ಜನತಾ ಮಾಧ್ಯಮ’ಗಳು ಇವುಗಳ ಮೇಲೆ ಹೆಚ್ಚು ಅವಲಂಬಿಸದೆ, ಮುಕ್ತ   ತಂತ್ರಾಂಶ (ಫ್ರೀ ಸಾಫ್ಟ್ ವೇರ್) ವೇದಿಕೆಗಳನ್ನು ಬಳಸಲು ಪ್ರಯತ್ನಿಸಬೇಕು ಎಂದು ಜನಪರ ಮಾಧ್ಯಮ ಕಟ್ಟುವುದರಲ್ಲಿ ತೊಡಗಿರುವವರಿಗೆ ಸಲಹೆಯಿತ್ತರು.

ಮುಖ್ಯವಾಹಿನಿ ಜನತೆಯ ಕುರಿತು ಬರೆಯುವ ‘ಜನತಾ ಮಾಧ್ಯಮ’ಗಳು, ಅವುಗಳ ಗಾತ್ರ, ತಲುಪುವಿಕೆ ಎಷ್ಟೇ ಇರಲಿ, ತಮ್ಮನ್ನು ತಾವು ಮುಖ್ಯವಾಹಿನಿ  ಮಾಧ್ಯಮಗಳೆಂದು ಪರಿಗಣಿಸಬೇಕು. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಗಾಂಧಿ, ಅಂಬೇಡ್ಕರ್ ನಡೆಸಿದ ಪತ್ರಿಕೆಗಳು ಎಷ್ಟೇ ಸಣ್ಣವಾಗಿದ್ದರೂ ಜನತೆಯ ಮಾಧ್ಯಮಗಳಾಗಿ ಅಗಾಧ ರಾಜಕೀಯ ಪರಿಣಾಮ ಬೀರಿದವು. ಕಳೆದ 2-3 ದಶಕ ಬಿಟ್ಟರೆ ಸುಮಾರು 2 ಶತಕಗಳ ಭಾರತೀಯ ಮಾಧ್ಯಮದ ಇತಿಹಾಸದ ಉದ್ದಕ್ಕೂ ಇದು ಸಾಧ‍್ಯವಾಗಿತ್ತು. ಆದ್ದರಿಂದ ಕಾರ್ಪೊರೆಟ್ ಮಾಧ್ಯಮಗಳಿಂದ ಪ್ರತ್ಯೇಕವಾದ ‘ಜನತಾ ಮಾಧ್ಯಮ’ಕ್ಕೆ ತಕ್ಕುದಾದ ಶೈಲಿ, ಉದ್ದೇಶ, ಕಂಟೆಂಟ್, ಸಂರಚನೆ, ಸಂಪನ್ಮೂಲ ಹೊಂಚುವಿಕೆ, ನೋಡುಗ/ಓದುಗ ಸಮೂಹವನ್ನು ಕಟ್ಟಿ ಬೆಳೆಸುವ ಬಗೆ ಇತ್ಯಾದಿಗಳನ್ನು ರೂಪಿಸಿಕೊಳ್ಳಬೇಕು. ಸಂಪನ್ಮೂಲ ಹೊಂಚುವಿಕೆಗೆ ಇತರ ಮೂಲಗಳಲ್ಲದೆ ಸಾರ್ವಜನಿಕರಿಂದ ದೊಡ್ಡ ಸಂಖ‍್ಯೆಯ ಸಣ್ಣ ದಾನಗಳು (‘ಪರಿ’ಯ ಒಟ್ಟು ಆದಾಯದ 35% ಈ ರೀತಿ ಬರುತ್ತವೆ) ಮುಖ್ಯ ಮೂಲವಾಗಬೇಕು ಜಾಹೀರಾತುಗಳಲ್ಲೂ ಕೆಲವೇ ದೊಡ್ಡ ಜಾಹೀರಾತುದಾರರ ಮೇಲೆ ಅವಲಂಬಿಸಬಾರದು.. ಜನಪರ ಪತ್ರಕರ್ತರು ಮತ್ತು ಸಂಪನ್ಮೂಲ ವ್ಯಕ್ತಿಗಳ ಸ್ವಯಂ-ಸೇವೆ ಇತ್ಯಾದಿ ಇತರ ಮೂಲಗಳನ್ನೂ ಹೊಂಚಬೇಕು. ಜನತೆಯ ಜತೆ ಸತತ ಸಾವಯವ ಸಂಪರ್ಕ ಸಾಧಿಸುವುದು ‘ಜನತಾ ಮಾಧ್ಯಮ’ಗಳಿಗೆ ಅತ್ಯಂತ ಆದ್ಯತೆಯ ಕೆಲಸವಾಗಬೇಕು. ಕಾರ್ಪೊರೆಟ್ ಮಾಧ್ಯಮಗಳಲ್ಲಿ ಜನಪರ ಕಂಟೆಂಟ್ ಪ್ರಕಟಿಸುವ ಅವಕಾಶಕ್ಕಾಗಿ, ಅಲ್ಲಿ ಕೆಲಸ ಮಾಡುವ ಜನಪರ ಪತ್ರಕರ್ತರು ಸಹ ಹೋರಾಡಬೇಕು. ಕಾರ್ಪೊರೆಟ್ ಮಾಧ್ಯಮಗಳಲ್ಲಿನ ಪತ್ರಕರ್ತರು ‘ಶತ್ರು ವಲಯದಲ್ಲಿರುವ ‘ಗೆರಿಲ್ಲಾ ಹೋರಾಟಗಾರ’ರಾದರೆ, ಜನತಾ ಮಾಧ್ಯಮಗಳು ‘ವಿಮೋಚಿತ ಪ್ರದೇಶ’ಗಳಂತೆ ಕೆಲಸ ಮಾಡಬೇಕು ಎಂದು ಸಾಯಿನಾಥ್ ಕಿವಿಮಾತು ಹೇಳಿದರು.

ಇದಕ್ಕಿಂತ ಮೊದಲು ವೆಬಿನಾರ್ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಡಿ ಉಮಾಪತಿ ಅವರು ಆಶಯ ಭಾಷಣ ಮಾಡಿದರು. ಪ್ರಚಂಡ ನಾಯಕರು ತಮ್ಮ ಅಭಿಪ್ರಾಯಗಳನ್ನು ಭಾರತದ ಜನತೆಯ ಮೇಲೆ ಹೊರಿಸಿ ಅದು ಅವರದೇ ಅಭಿಪ್ರಾಯ ಎಂದು ಭಾರತದ ಜನತಂತ್ರವನ್ನು ಅಪಹಾಸ್ಯ ಮಾಡುತ್ತಿರುವ ಇಂದಿನ ಸ‍್ಥಿತಿಯನ್ನು ‘ಧ್ವನಿ ಗಾರುಡಿ’ ಅಥವಾ ‘ಮಾತಾಡುವ ಗೊಂಬೆ’ ರೂಪಕದ ಮೂಲಕ, ಉಮಾಪತಿ ಅವರು ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿದರು. ಸರಕಾರಗಳ ಜನ-ವಿರೋಧಿ ನೀತಿಗಳಿಂದ ಮೈಗೆ ಬಿದ್ದ ಪೆಟ್ಟು ಮೆದುಳಿಗೆ ತಿಳಿಯದಿರುವ ಇಂದಿನ ಭಾರತದ ಜನತೆಯ ದಾರುಣ ಸ್ಥಿತಿಯನ್ನು ವಿವರಿಸಿದರು. ಕರುಳುಬಳ್ಳಿಯ ಸಂಬಂಧ ಹೊಂದಿರುವ ಜನತಂತ್ರ ಮತ್ತು ಮಾಧ್ಯಮಗಳಲ್ಲಿ ಒಂದಕ್ಕೆ (ಮಾಧ್ಯಮ) ವಿಷವೇರಿದಾಗ ಇನ್ನೊಂದು ವಿಷಮಯವಾಗುವುದು. ಪ್ರಶ್ನೆಯ ಮತ್ತು ಪ್ರಶ್ನಿಸುವ ಮನೋಭಾವದ ಹತ್ಯೆಯಾಗಿದೆ. ತರ್ಕದ ಬದಲು ಕುರುಡುಶ್ರದ್ಧೆಯನ್ನು ಬೆಳೆಸುವ ಫೇಕ್ ನ್ಯೂಸ್ ಮಾಧ್ಯಮ ಕ್ಷೇತ್ರದ ಕಳೆಯಾಗಿದೆ. ಕಳೆಯೇ ಬೆಳೆಯಾಗುವ ಭೀಕರ ಸ್ಥಿತಿಯಿದೆ ಎಂದು ಇಂದಿನ ಮಾಧ್ಯಮ ಪರಿಸ್ಥಿತಿಯನ್ನು ತಮ್ಮ ಆಶಯ ಮಾತುಗಳಲ್ಲಿ ಉಮಾಪತಿ ಅವರು ಬಿಚ್ಚಿಟ್ಟರು.

ಪರ್ಯಾಯ ಮಾಧ್ಯಮ ಕಟ್ಟುವುದು ಕಲ್ಲುಮುಳ್ಳುಗಳ ಹೋರಾಟದ ಹಾದಿ

ಆ ನಂತರ ಹಿರಿಯ ಪತ್ರಕರ್ತರಾದ ಡಾ. ಆರ್.ಪೂರ್ಣಿಮಾ, ಗೌರೀಶ್ ಅಕ್ಕಿ ಮತ್ತು ಗೌರಿ ಮೀಡಿಯಾ ಸಂಪಾದಕರಾದ ಡಾ.ಎಚ್.ವಿ, ವಾಸು ಭಾಗವಹಿಸಿದ ‘ಪರ್ಯಾಯ ಮಾಧ್ಯಮ : ಏಕೆ, ಹೇಗೆ?’ ಎಂಬ ವಿಷಯದ ಕುರಿತು ಸಂವಾದ ನಡೆಯಿತು. ಸಂವಾದವನ್ನು ಸಂವಹನ ಸಮಾಲೋಚಕರಾದ ಎಸ್.ಸತ್ಯಾ ಅವರು ನಡೆಸಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಡಿ ಉಮಾಪತಿ ಅವರು ಸಹ ಸಂವಾದದಲ್ಲಿ ಭಾಗವಹಿಸಿದರು.

ಪರ್ಯಾಯ ಮಾಧ್ಯಮ ಏಕೆ? – ಎಂಬುದು ದಿಕ್ಸೂಚಿ ಮತ್ತು ಆಶಯ ಮಾತುಗಳಲ್ಲಿ ಇದು ‘ಕಾಲದ ಅಗತ್ಯ’ ಎಂದು ಸ್ಪಷ್ಟವಾಗಿದ್ದರಿಂದ ಪರ್ಯಾಯ ಮಾಧ್ಯಮ ಹೇಗೆ  ಎಂಬುದೇ ಸಂವಾದದ ಪ್ರಮುಖ ವಿಷಯವಾಯಿತು. ಸಂವಾದ ‘ಸಂಬಂಧಿಸಿದ ಹಲವು ನಿರ್ದಿಷ್ಟ ಪ್ರಶ್ನೆಗಳ ಸುತ್ತ ನಡೆಯಿತು.

ವೆಬಿನಾರಿನ ಅಧ್ಯಕ್ಷತೆ ವಹಿಸಿ ಸಂವಾದದಲ್ಲೂ ಭಾಗವಹಿಸಿದ್ದ ಡಿ ಉಮಾಪತಿ ಅವರು, ವೆಬಿನಾರಿನಲ್ಲಿ ಹೊಮ್ಮಿದ ಯೋಚನೆ, ಚರ್ಚೆಗಳ ಒಟ್ಟು ಸಾರವನ್ನು ಸಮಾರೋಪ ಮಾತುಗಳಲ್ಲಿ ಮುಂದಿಟ್ಟರು. ಸಾವಿರಾರು ಕೈಗಳು ಲಕ್ಷಾಂತರ ಹತಾರಗಳನ್ನುಳ್ಳ ಸರ್ವಶಕ್ತ ಪ್ರಭುತ್ವ ಮತ್ತು ದೈತ್ಯ ಕಾರ್ಪೊರೆಟ್ ಮಾಧ್ಯಮಗಳ ಅಪವಿತ್ರ ಮೈತ್ರಿಯ ವಿರುದ್ಧ  ಪರ್ಯಾಯ ಮಾಧ್ಯಮ ಕಟ್ಟುವುದು ಹೂಹಾಸಿದ ಹಾದಿಯಲ್ಲ. ಕಲ್ಲುಮುಳ್ಳುಗಳ ಹೋರಾಟದ ಹಾದಿ. ಇದನ್ನು ಸಾಧಿಸಲು ಒಂದು ಕಡೆ ಜನಸಮೂಹಗಳ ಜತೆ ಸಾವಯವ ಸಂವಹನ ಸಂಪರ್ಕ ಸಾಧಿಸುತ್ತಾ ಪರ್ಯಾಯ ಮಾಧ್ಯಮಗಳ ಜಾಲವನ್ನು ಕಟ್ಟಿಕೊಳ್ಳಬೇಕು ಮತ್ತು ಇನ್ನೊಂದೆಡೆ ಕಾರ್ಪೊರೆಟ್ ಮಾಧ್ಯಮದಲ್ಲೂ ಕಿರು ಆವರಣಗಳನ್ನು ಕಟ್ಟಿಕೊಳ್ಳಬೇಕು ಎಂದರು.

ಮೊದಲಿಗೆ ಜನಶಕ್ತಿ ಮೀಡಿಯಾದ ಪರವಾಗಿ ವಸಂತರಾಜ್, ವೆಬಿನಾರಿನ ಆಶಯದ  ಮಾತುಗಳನ್ನಾಡಿ ಪಿ ಸಾಯಿನಾಥ್, ಡಿ ಉಮಾಪತಿ ಹಾಗೂ ಸಂವಾದದಲ್ಲಿ ಭಾಗವಹಿಸಿದವರನ್ನು ಪರಿಚಯ ಮಾಡಿ ಸ್ವಾಗತಿಸಿದರು, ವೆಬಿನಾರಿನ ನಿರ್ವಹಣೆ ಮಾಡಿದರು. ಗುರುರಾಜ ದೇಸಾಯಿ ಅವರು ಕೊನೆಯಲ್ಲಿ ಫೊಟೊ/ವಿಡಿಯೊ ಸ್ಪರ್ಧೆಯ ತೀರ್ಪನ್ನು ಘೋಷಿಸಿ ವಂದನಾರ್ಪಣೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *