ಮುಖ್ಯಮಂತ್ರಿ ಖುರ್ಚಿ ಮತ್ತೆ ಅಲುಗಾಡುತ್ತಿದೆ

ರಾಜ್ಯ ರಾಜಕಾರಣದಲ್ಲಿ ಮತ್ತೆ ರಾಜೀನಾಮೆ ವಿಚಾರ ಸದ್ದು ಮಾಡುತ್ತಿದೆ, ಈ ಬಾರಿ ರಾಜೀನಾಮೆ ನೀಡಲು ಮುಂದಾಗಿರುವುದು ಯಾರು? ಬಣ ಜಗಳದ ಮೂಲಕ ಸರಕಾರದ ಮಾನವನ್ನು ಬೀದಿಗೆ ತಂದು ನಿಲ್ಲಿಸಿದ್ದು ಯಾಕೆ? ಸಿಎಂ ಖುರ್ಚಿ ಮತ್ತೆ ಅಲುಗಾಡುತ್ತಿದೆಯಾ?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರು, ತಮ್ಮ ಇಲಾಖೆಯ ಕೆಲಸಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾನೂನು ಮೀರಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಈ ಘಟನೆ ಈಗ ಸಾಕಷ್ಟು ಚರ್ಚೆಯನ್ನು ಮಾಡಿದೆ, ಆಡಳಿತ ಪಕ್ಷದ ಕೆಲ ಶಾಸಕರನ್ನು, ಸಚಿವರು ಸಮರ್ಥನೆಯನ್ನು ಮಾಡಿಕೊಳ್ಳುತ್ತಿದ್ದರೆ, ಇತ್ತ ಕಾಂಗ್ರೆಸ್‌ ಯಡಿಯೂರಪ್ಪ ರಾಜಿಮಾಗೆ ಒತ್ತಾಯಿಸುತ್ತಿದೆ. ಉಪಮುಖುಮಂತ್ರಿ ಗೋವಿಂದ ಕಾರಜೋಳ ಪ್ರತಿಕ್ರೀಯೆ ನೀಡಿದ್ದು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯ ನಿರ್ದೇಶನದಂತೆ ಇಡೀ ಸಚಿವ ಸಂಪುಟ ಒಮ್ಮತದಿಂದ ಕೆಲಸ ಮಾಡಬೇಕು. ಅವರ ಪರಮಾಧಿಕಾರವನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಗೋವಿಂದ ಕಾರಜೋಳ ಪ್ರತಿಕ್ರಿಯೇ ನೀಡಿದ್ದರೆ,  ಇತ್ತ ಡಿಕೆ ಶಿವಕುಮಾರ್‌ ಪ್ರತಿಕ್ರೀಯೆ ನೀಡಿದ್ದಾರೆ, ಸಚಿವ ಕೆ.ಎಸ್. ಈಶ್ವರಪ್ಪನವರು ಮುಖ್ಯಮಂತ್ರಿಗಳ ವಿರುದ್ಧ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪನವರನ್ನು ಯಡಿಯೂರಪ್ಪ ಇಂದು ಸಾಯಂಕಾಲದ ಒಳಗೆ ಸಚಿವ ಸ್ಥಾನದಿಂದ ಉಚ್ಛಾಟಿಸಲಿ ಅಥವಾ ತಾವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಇದನ್ನು ಓದಿ : ಪಶ್ಚಿಮ ಬಂಗಾಳದ ಚುನಾವಣೆ ಹೇಗಿದೆ ಆಡಳಿತ ವಿರೋಧಿ ಅಲೆ ಎಡಪಕ್ಷಕ್ಕೆ, ಬಿಜೆಪಿಗೆ ಲಾಭವಾಗುತ್ತಾ?

ಸಚಿವ ಈಶ್ವರಪ್ಪನವರ ನಡೆ ಹಲವು ಆಯಾಮಗಳನ್ನು ಬಿಚ್ಚಿಡುತ್ತಿದೆ, ಕೆ.ಎಸ್.ಈಶ್ವರಪ್ಪ ತಮ್ಮ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಇನ್ನು ಇಬ್ಬರು ಹಿರಿಯ ಸಚಿವರು ಕೂಡ ಅದೇ ತಂತ್ರವನ್ನು ಅನುಸರಿಸಲಿದ್ದು, ಆ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪದಚ್ಯುತಿಗೆ ಪಕ್ಷದ ವಲಯದಲ್ಲೇ ವೇದಿಕೆ ಸಿದ್ದವಾಗುತ್ತಿದೆ.. ಪರೋಕ್ಷವಾಗಿ ಬಿಎಸ್‍ವೈ ಹಠಾವೋ, ಬಿಜೆಪಿ ಬಚಾವೊ ಅಭಿಯಾನಕ್ಕೆ ಕಮಲ ಪಡೆಯ ಒಂದು ಬಣ ಚಾಲನೆ ಕೊಟ್ಟಂತಾಗಿದೆ.

ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಸಚಿವ ಕೆಎಸ್‌ ಈಶ್ವರಪ್ಪ ರಾಜೀನಾಮೆ ಸಲ್ಲಿಸಬಹುದು ಎಂಬ ವದಂತಿ ನಾಲ್ಕಾರು ದಿನದಿಂದ ಹರಿದಾಡುತ್ತಿದೆ. ಇದರ ಅಪಾಯವನ್ನು ಅರಿತಿರುವ  ಅರುಣ್‌ ಸಿಂಗ್‌ ಈಶ್ವರಪ್ಪನವರಿಗೆ ದೂರವಾಣೆ ಕರೆ ಮಾಡಿ  ಈ ರೀತಿ ನಿರ್ಧಾರ ಕೈಗೊಳ್ಳಬಾರದು ಈ ಪ್ರಕರಣ ಬೆಳೆಸುವ ಅಗತ್ಯವಿಲ್ಲ. ಉಪ ಚುನಾವಣೆ ಗೆಲುವಿಗೆ ಗಮನ ಹರಿಸಬೇಕು ಎಂಬ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈಶ್ವರಪ್ಪನವರು ರಾಜಿನಾಮೆ ನೀಡುವ ಕುರಿತು ಯೋಚಿಸಲು ಹಲವು ಆಯಾಮಗಳಿವೆ ಅವುಗಳನ್ನು ತೆರೆದು ನೋಡುವುದಾದರೆ, ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿದ್ದಾರೆ ಎಂಬುದು ಕೇವಲ ಒಂದು ಕುಂಟು ನೆಪವಷ್ಟೇ. ಯಡಿಯೂರಪ್ಪನವರನ್ನು ಸಿಎಂ ಖುರ್ಚಿಯಿಂದ ಇಳಿಸುವ ಪ್ರಯತ್ನವೂ ಇದರ ಹಿಂದಿದೆ. ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾದರೆ ಯಡಿಯೂರಪ್ಪನವರ ಖುರ್ಚಿ ಅಲಗಾಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದನ್ನು ಮನಗಂಡಿರುವ ಯಡಿಯೂರಪ್ಪನವರ ವಿರೋಧಿ ಬಣ, ಈಶ್ವರಪ್ಪ ಹಾಗೂ ಸಂಘ ಪರಿವಾರಕ್ಕೆ ನಿಷ್ಠರಾಗಿರುವ ಇಬ್ಬರು ಸಚಿವರಿಂದ ರಾಜೀನಾಮೆ ಕೊಡಿಸಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷದಲ್ಲಿ ವೇದಿಕೆಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಆ ರೀತಿಯ ಸುದ್ದಿ ಓಡಾಡಲಿಕ್ಕೂ ಕಾರಣವಿದೆ ಅದು ಏನು ಅಂದ್ರೆ, ಮೇ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ನಿರಂತರವಾಗಿ ಹೇಳಿಕೆಯನ್ನು ನೀಡುತ್ತಾ ಇರುವಂತದ್ದು ಕಾರಣವಾಗಿದೆ. ನಿನ್ನೆ ವಿಜಯಪುರದಲ್ಲೂ ಒಂದು ಹೇಳಿಕೆಯನ್ನು ನೀಡಿದ್ದಾರೆ, ಆ ಹೇಳಿಕೆ ಏನು ಅಂದ್ರೆ, ಮೇ 2 ರೊಳಗೆ ಮುಖ್ಯಮಂತ್ರಿ ಬದಲಾವಣೆಯಾಗದಿದ್ದರೆ ಬಿಜೆಪಿಯಲ್ಲಿ ಭಾರಿ ಸ್ಪೋಟವಾಗಲಿದೆ ಎಂದು ಹೇಳಿದ್ದಾರೆ. ಸಚಿವ ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ರಾಜ್ಯಾಧ್ಯಕ್ಷರಾಗಿ ಅನುಭವ ಹೊಂದಿದವರು. ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಈಶ್ವರಪ್ಪನವರ ಶ್ರಮ ಇದೆ. ಅಂಥವರು ಬೇಸತ್ತು ರಾಜ್ಯಪಾಲರಿಗೆ ದೂರು ನೀಡಿರುವುದು ತಪ್ಪಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಮುಖ್ಯಮಂತ್ರಿಗೆ ಬುದ್ಧಿವಾದ ಹೇಳಬೇಕಿತ್ತು. ಅದನ್ನು ಬಿಟ್ಟು ಈಶ್ವರಪ್ಪನವರ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇನ್ನೂ ಯಡಿಯೂರಪ್ಪನವರಿಗೆ ಒಂದರ ಮೇಲೆ ಒಂದರಂತೆ ಟೆನ್ಷನ್‌ ಆರಂಭವಾಗಿದೆ, ಮೂರು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತಮ್ಮ ಪಕ್ಷದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮೇಲೆ ಬಂದಿರುವ ಗಂಭೀರ ಆರೋಪ ಒಂದೆಡೆಯಾದರೆ, ಈಶ್ವರಪ್ಪನವರು ಬರೆದ ಪತ್ರ ಮತ್ತೊಂದು ಕಡೆ, ಇನ್ನೊಂದೆಡೆ  ನ್ಯಾಯಾಲಯದಿಂದ ಹಲವು ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಆದೇಶ ನೀಡಿರುವುದು ಯಡಿಯೂರಪ್ಪನವರು ಸಂಕಷ್ಟಕ್ಕೆ ತಳ್ಳಿದೆ. ಈ ಘಟನೆಗಳು ಪಕ್ಷಕ್ಕೆ ಮುಜುಗರ ತರುತ್ತಿದ್ದು, ಖುರ್ಚಿ ಅಲಗಾಡಿಸುವಿಕೆಗೆ ಇವನ್ನೆ ಮುಂದೆ ಮಾಡುವ ಸಾಧ್ಯತೆಯೂ ಇದೆ ಹೇಳಲಾಗುತ್ತಿದೆ.

ಬಿಜೆಪಿಯ ಬಣಜಗಳ ಇವತ್ತು ನಿನ್ನೆಯದಲ್ಲ, ಅದರಲ್ಲೂ ಈಶ್ವರಪ್ಪ ಮತ್ತು ಯಡಿಯೂರಪ್ಪನವರ ಜಗಳ ಯಾವಗಲೂ ಇದ್ದೆ ಇರುತ್ತದೆ, ಇಬ್ಬರೂ ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಕಟ್ಟುವಲ್ಲಿ ಸಾಕಷ್ಟು ಶ್ರಮವನ್ನು ಹಾಕಿದವರು., 2008 ರಲ್ಲಿ ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು ಈಶ್ವರಪ್ಪ ಇಂಧನ ಸಚಿವರಾಗಿದ್ದರು. ಕೆಲ ಸಮಯದಲ್ಲಿ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿತು.

ಶಿವಮೊಗ್ಗದಲ್ಲಿ ಲೋಕಸಭಾ ಕ್ಷೇತ್ರಕ್ಕೆ ಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸಿದ ಯಡಿಯೂರಪ್ಪ ನಡೆಗೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ, ಪಕ್ಷದಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಕಿಡಿಕಾಡಿದವರಲ್ಲಿ ಈಶ್ವರಪ್ಪ ಪ್ರಮುಖರಾಗಿದ್ದರು.

ಪಕ್ಷದಲ್ಲಿ ಕುಟುಂಬ ರಾಜಕೀಯಕ್ಕೆ ಅವಕಾಶ ಇಲ್ಲದಿದ್ದರೂ ಯಡಿಯೂರಪ್ಪ ಕುಟುಂಬವೂ ಬಿಜೆಪಿಯಲ್ಲಿ ಸಕ್ರಿಯ ಹಿಡಿತವನ್ನು ಹೊಂದಿರುವುದು ಈಶ್ವರಪ್ಪ ಮುನಿಸಿಗೆ ಒಂದು ಕಾರಣ ಎನ್ನಲಾಗುತ್ತಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಕುಟುಂಬದ್ದೇ ರಾಜ್ಯಭಾರ. ಈಶ್ವರಪ್ಪ ಈ ಜಿಲ್ಲೆಯವರಾಗಿದ್ದರೂ ಇವರ ಮಾತಿಗಿಂತ ಯಡಿಯೂರಪ್ಪ ಕುಟುಂಬ ಮಾತೇ ಹೆಚ್ಚಾಗಿ ನಡೆಯುತ್ತದೆ. ಇದರಿಂದಾಗಿ ತಾನು ಪ್ರತಿನಿಧಿಸುವ ಜಿಲ್ಲೆಯಲ್ಲೇ ಈಶ್ವರಪ್ಪಗೆ ಅನಾತ ಭಾವ ಕಾಡುತ್ತಿದೆ. ಅಲ್ಲದೆ ಮುಜುಗರ ಉಂಟಾಗುವ ಹಲವು ಸನ್ನಿವೇಶಗಳು ಎದುರಾಗಿವೆ. ಇವೆಲ್ಲವೂ ಈಶ್ವರಪ್ಪ ಅವರ ಮುನಿಸಿಗೆ ಕಾರಣಗಳಾಗಿವೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಬಿಜೆಪಿಯಲ್ಲಿ ಈಶ್ವರಪ್ಪ ವರ್ಸಸ್‌ ಯಡಿಯೂರಪ್ಪ ನಡುವಿನ ಮುನಿಸು ತೀವ್ರಗೊಳ್ಳುತ್ತಿದ್ದಂತೆ ಒಂದಲ್ಲಾ ಒಂದು ರೀತಿಯಲ್ಲಿ ಬಿಎಸ್‌ವೈಗೆ  ಈಶ್ವರಪ್ಪ ಟಕ್ಕರ್ ನೀಡುತ್ತಾ ಬಂದಿದ್ದಾರೆ. ಅದು ರಾಯಣ್ಣ ಬ್ರಿಗೇಡ್ ಆರಂಭ ಮಾಡುವ ಮೂಲಕ ಹಾಗೂ ಕುರುಬ ಮೀಸಲಾತಿ ಹೋರಾಟದ ಮೂಲಕ ಟಕ್ಕರ್‌ ನೀಡಿದ್ದಾರೆ. ಸಂಘದ ಕಟ್ಟಾ ಅನುಯಾಯಿ ಆಗಿರುವ ಈಶ್ವರಪ್ಪ ದಿಢೀರ್‌ ಆಗಿ ರಾಯಣ್ಣ ಬ್ರಿಗೇಡ್‌ ಆರಂಭ ಮಾಡಿದರು. ಇದು ಆರಂಭ ಮಾಡಿದ್ದು ಏಕೆ ಹಾಗೂ ಇದ್ದಕ್ಕಿದ್ದಂತೆ ಅದರಿಂದ ದೂರ ಆಗಿದ್ದು ಏಕೆ ಎಂಬುವುದು ಇಂದಿಗೂ ಯಕ್ಷಪ್ರಶ್ನೆಯಾಗಿದೆ.

ಅದರ ಜೊತೆಗೆ ಕುರುಬ ಮೀಸಲಾತಿ ಹೋರಾಟದ ಉದ್ದೇಶವೂ ಯಡಿಯೂರಪ್ಪರಿಗೆ ಟಕ್ಕರ್ ನೀಡುವುದೇ ಆಗಿತ್ತು ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು. ಒಟ್ಟಿನಲ್ಲಿ ಒಂದು ಕಾಲದ ಸ್ನೇಹಿತರ ನಡುವೆ ಪದೇ ಪದೇ ಮುನಿಸು ಕಾಣಿಸಿಕೊಳ್ಳುತ್ತಾ ಬರುತ್ತಿದೆ. ಶೀತಲ ಸಮರವಾಗಿ ಕಾಣಿಸಿಕೊಳ್ಳುತ್ತಿದ್ದ ಸಂಘರ್ಷ ಇದೀಗ ಬಹಿರಂಗವಾಗಿ ಸ್ಫೋಟಗೊಂಡಿದೆ. ಇದರಲ್ಲಿ ವೈಯಕ್ತಿಯ ಏನೂ ಇಲ್ಲ ಎಂದು ಸಮರ್ಥನೆ ನೀಡಿದರೂ ಸದ್ಯ ಆಗಿರುವ ಡ್ಯಾಮೇಜ್‌ ಸರಿಪಡಿಸಲು ಅಸಾಧ್ಯ ಎನ್ನುತ್ತಿವೆ ಬಿಜೆಪಿ ಮೂಲಗಳು.

ರಾಜ್ಯದಲ್ಲಿ ಅನೇಕ ಕೆಲಸಗಳು ಚುರುಕುಕೊಳ್ಳುತ್ತಿಲ್ಲ, ಆಡಳಿತ ಯಂತ್ರ ಜಿಡ್ಡುಗಟ್ಟಿ, ಅಭಿವೃಧ್ಧಿ ಕೆಲಸಗಳು ನಿಧಾನಕ್ಕೆ ಸಾಗುತ್ತಿವೆ, ಬಿಜೆಪಿ ಸರಕಾರ ಅವುಗಳ ಕಡೆ ಗಮನ ನೀಡದೆ ಚುನಾವಣೆಗಳಲ್ಲಿ ಗೆಲ್ಲುವುದರ ಕಡೆ ಗಮನ ನೀಡಿ ತನ್ನ ಸರಕಾರವನ್ನು ಭದ್ರಗೊಳಿಸುತ್ತಿರುವುದು ಒಂದು ಕಡೆಯಾದರೆ, ಈ ರೀತಿ ಬೀದಿ ಜಗಳದ ಮೂಲಕ ಸರಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ. ಇನ್ನೂ ಬಿಜೆಪಿ ಹೈಕಮಾಂಡ್‌ ಕಿವಿ ಹಿಂಡುವ ಕೆಲಸಕ್ಕೆ ಹೋಗೆದೆ ಇನ್ನಷ್ಟು ಕಚ್ಚಾಡಿಕೊಂಡರಲಿ ಎಂದು ಬಿಟ್ಟಂತೆ ಕಾಣುತ್ತಿದೆ. ಒಟ್ಟಾರೆ ಈಶ್ವರಪ್ಪನರು ಬರೆದ ಪತ್ರ ಇಲಾಖೆಗಳಲ್ಲಿ ಹಸ್ತಕ್ಷೇಪವನ್ನು ನಿಲ್ಲಿಸುತ್ತಾ, ಅಥವಾ ಮುಖ್ಯಮಂತ್ರಿ ಸ್ಥಾನವನ್ನೆ ಕಳೆಯುತ್ತಾ ಕಾಲವೇ ಉತ್ತರ ಹೇಳಲಿದೆ.

 

Donate Janashakthi Media

Leave a Reply

Your email address will not be published. Required fields are marked *