ಮೊಹರಂ: ಜನತೆಯ ಧರ್ಮ

-ರಹಮತ್ ತರೀಕೆರೆ

ಏಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್‍ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು. ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತ ಸತ್ತರು. ಮಹಿಳೆಯರು ದುಃಖದಿಂದ ಪರಿತಪಿಸಿದರು.

ಇದನ್ನು ಜನಪದರು ‘ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಆರಾಣ್ಯಾದಾಗ ಅವರಾ ಕಾಣದ ಮೂರು ದಿವಸ ನೀರಾ, ಕುಡದಾರೋ ಕಣ್ಣೀರಾ ಮಕ್ಕಳು ಹುಡುಗರು ಹೆಂಗಸರಾ’ ಎಂದು ಹಾಡಿರುವುದುಂಟು. ಇಂತಹ ದುಗುಡದ ನೆನಪಿನಲ್ಲಿ ಹುಟ್ಟಿದ ಧಾರ್ಮಿಕ ಆಚರಣೆಯೊಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರ ಪಡೆಯಿತು. ಉತ್ತರ ಕರ್ನಾಟದಲ್ಲಿ ಎಲ್ಲ ಧರ್ಮದ ಜಾತಿಯ ಜನರು ಒಟ್ಟಾಗಿ ಆಚರಿಸುವ ಊರಹಬ್ಬವಾಯಿತು. ಹೀಗಾಗಿ ಮುಸ್ಲಿಮರೇ ಇಲ್ಲದ ನೂರಾರು ಊರುಗಳಲ್ಲೂ ಮೊಹರಂ ನಡೆಯುತ್ತದೆ.

ಮೊಹರಂನಲ್ಲಿ ಶೋಕಗೀತೆಯ ರಚನೆ, ಹಾಡಿಕೆ, ಕುಣಿತ, ವೇಷಗಾರಿಕೆ, ಮೆರವಣಿಗೆ, ವಿಶೇಷ ಆಹಾರಗಳ ಆಯಾಮಗಳಿವೆ. ಇದರ ಫಲವಾಗಿ ಕರ್ನಾಟಕದಲ್ಲಿ ಹಾಡು ಕಟ್ಟುವ ಸಾವಿರಾರು ಶಾಹಿರರೂ ಗಾಯಕರೂ ಇದ್ದಾರೆ. ಹೆಜ್ಜೆಕುಣಿತ, ಕೋಡಂಗಿ ಕುಣಿತ, ಡಬಗಳ್ಳಿ ಕುಣಿತ ಮಾಡುವ, ಹುಲಿವೇಷ, ಅಚೊಳ್ಳಿಸೋಗು, ಭಡಂಗ್‍ವೇಷ ಹಾಕುವ ಹರಕೆ ಕಲಾವಿದರಿದ್ದಾರೆ. ನಾನು ಕಂಡಂತೆ, ಬೀಳಗಿ, ಕೆರೂರ ಕುದುರೆಮೋತಿ ಅಗಸನೂರ , ಆಯನೂರು ಯರಗುಪ್ಪಿ ಗೋಕಾಕಫಾಲ್ಸ ಮುದಗಲ್ ಮೊಹರಂ ವಿಶಿಷ್ಟವಾದವು. ಪ್ರತಿಯೊಂದೂ ಊರು ತನ್ನದೇ ಆಚರಣೆಯನ್ನು ರೂಢಿಸಿಕೊಂಡಿದೆ.

ಇದನ್ನೂ ಓದಿ: 13 ವಿಧಾನಸಭೆ ಉಪ ಚುನಾವಣೆಗಳಲ್ಲಿ ಎನ್‌ಡಿಎಗೆ ಹಿನ್ನಡೆ, ವಿಪಕ್ಷಗಳಿಗೆ ಮೇಲುಗೈ

ಅಗಸನೂರಿನಲ್ಲಿ ಹತ್ತು ದಿನಗಳ ಕಾಲ ಚಪ್ಪಲಿ ತೊಡುವುದಿಲ್ಲ. ಮಂಚದಲ್ಲಿ ಮಲಗುವುದಿಲ್ಲ. ಬೀಳಗಿಯಲ್ಲಿ ತೇರಿನಂಥ ರಚನೆಗೆ ಹಿಲಾಲುಗಳನ್ನು ಸಿಕ್ಕಿಸಿ ಉರಿವವೃಕ್ಷವನ್ನೇ ಸೃಷ್ಟಿಸುತ್ತಾರೆ. ಆಯನೂರಲ್ಲಿ ಯಜೀದನ ಸಂಕೇತವಾಗಿ ರಾವಣನ ಪ್ರತಿಕೃತಿ ಸುಡುತ್ತಾರೆ; ಅಗಸನೂರಿ ನಲ್ಲಿ ಅಲಾವಿಯ ಸುತ್ತ ಮಾಡುವ ಹೆಜ್ಜೆ ನೃತ್ಯವು ಅಪೂರ್ವವಾಗಿದೆ. ಕುದುರೆಮೋತಿ, ಹೊಸಪೇಟೆ, ಗಜೇಂದ್ರಗಡಗಳು ಹುಲಿವೇಷಕ್ಕೆ ಹೆಸರಾಗಿವೆ; ಮುದಗಲ್ಲಿನಲ್ಲಿ ಅಗಲಿದ ಹಸನ- ಹುಸೇನರ ಮಿಲನವಾ ಗುವ ಆಚರಣೆ ಕಣ್ತುಂಬಿಕೊಳ್ಳಲು ಕೋಟೆಯ ಹೊರಗೆ ಸಾವಿರಾರು ಜನ ಸೇರುತ್ತಾರೆ.

ಇಂಡಿ ಕಡೆ ಭಡಂಗ್ ಎನ್ನುವ ಹರಕೆವೇಷ ಹಾಕುತ್ತಾರೆ; ಬಾಗಲಕೋಟೆ-ವಿಜಯಪುರ ಸೀಮೆಯಲ್ಲಿ ಆಫ್ರಿಕನ್ ಸಿದ್ದಿಗಳನ್ನು ನೆನಪಿಸುವ ಅಚೊಳ್ಳಿ- ಬಿಚೊಳ್ಳಿ ಸೋಗುಗಳಿವೆ. ಈ ಸೋಗಿಗೆ ಮುಖಕ್ಕೆ ಕಪ್ಪುಮಸಿ ಬಳಿದು, ಸೊಂಟಕ್ಕೆ ಗಂಟೆ ಕಟ್ಟಿ, ತಲೆಗೆ ಲಾಲಿಕೆಯಾಕಾರದ ಅಲಂಕೃತ ಟೋಪಿ ಧರಿಸುತ್ತಾರೆ. ಮೊಹರಂ ಆಚರಣೆಯ ದಿನಗಳಲ್ಲಿ ಮುಸ್ಲಿಮೇತರರು ಲಾಡಿ ಧರಿಸಿ ಫಕೀರರಾಗುವ ಪದ್ಧತಿಯೂ ಇದೆ. ಮುಸ್ಲಿಮೇತರ ಕುಟುಂಬಗಳು ಐದು ಜನ ಫಕೀರರಿಗೆ ಕರೆದು ಬಿನ್ನಹ ಮಾಡಿಸಿದಲ್ಲದೆ ತಾವು ಉಣ್ಣುವುದಿಲ್ಲ.

ಚೋಂಗೆ, ಮಾಲ್ದಿ ಎಂಬ ಸಿಹಿ ಅಡುಗೆ, ಶರಬತ್ತು ಹಾಗೂ ಮೊಸರನ್ನ ಮೊಹರಂ ಮುಖ್ಯ ಅಡುಗೆಗಳು. ಕರ್ಬಲಾ ವೀರರು ಊಟ ನೀರಿಲ್ಲದೆ ಮಡಿದವರಾದ್ದರಿಂದ, ಹಸಿದವರಿಗೆ ಉಣಿಸುವ ಮತ್ತು ಬಾಯಾರಿದವರಿಗೆ ಶರಬತ್ತು ಕುಡಿಸುವ ಪದ್ಧತಿ ರೂಢಿಯಲ್ಲಿದೆ. ಇಂಡಿ ಮತ್ತು ಸೇಡಂ ಭಾಗದಲ್ಲಿ ಕುರಿಬ್ಯಾಟೆ ಕೊಡುವ ಪದ್ಧತಿಯಿದೆ. ಹೀಗೆ ಉತ್ತರ ಕರ್ನಾಟಕದ ಮೊಹರಂ ಬಹುರೂಪಿಯಾಗಿದೆ.

ದೂರದ ಇರಾಕಿನಲ್ಲಿ ಸಾವಿರಾರು ವರ್ಷದ ಹಿಂದೆ ನಡೆದ ಒಂದು ಮಾನವ ದುರಂತವನ್ನು, ತಮ್ಮ ಬೀದಿಯಲ್ಲಿ ನಿನ್ನೆ ಮೊನ್ನೆ ಸಂಭವಿಸಿದ್ದು ಎಂದು ಇನ್ನೊಂದು ದೇಶಕ್ಕೆ, ಕಾಲಕ್ಕೆ ಸಂಸ್ಕೃತಿ ಮತ್ತು ಧರ್ಮಕ್ಕೆ ಸೇರಿದ ಜನಸಮುದಾಯ ಭಾವಿಸಿ ಮಿಡಿಯುವುದೇ ಸೋಜಿಗ. ಇದು ಜನಪದ ಮನಸ್ಸಿನ ಮಾನವೀಯ ಗುಣ. ಇಲ್ಲಿ ಚರಿತ್ರೆಯನ್ನು ಸಮಕಾಲೀನಗೊಳಿಸುವ ಗುಣವೂ ಇದೆ. ವಿಶೇಷವೆಂದರೆ, ಕರ್ಬಲಾ ಹಾಡುಗಳಿಗೆ ದುರಂತದ ವಸ್ತುವಿಗೆ ಸ್ಥಳೀಯ ದುರಂತ ಘಟನೆಗಳೂ ಸೇರಿಕೊಳ್ಳುವುದು.

ಬಸ್ಸು ಕಾಲುವೆಗೆ ಉರುಳಿ ಜನ ಸತ್ತದ್ದು, ಎತ್ತುಗಳನ್ನು ರಕ್ಷಣೆ ಮಾಡುತ್ತ ರೈತ ಕಳ್ಳರ ಕೈಲಿ ಕೊಲೆಯಾಗಿದ್ದು, ದುಷ್ಟನಿಂದ ತನ್ನನ್ನು ಕಾಪಾಡಿಕೊಳ್ಳುವ ಅವಸರದಲ್ಲಿ ತಾಯೊಬ್ಬಳು ಕೂಸನ್ನು ಕಳೆದುಕೊಂಡಿದ್ದು, ಗೆಳೆಯನ ಮಡದಿಯನ್ನು ಪ್ರೇಮಿಸಿ ಸ್ವಹತ್ಯೆ ಮಾಡಿಕೊಂಡಿದ್ದು – ಇವೂ ಮೊಹರಂ ಹಾಡುಗಳ ವಸ್ತುಗಳಾಗಿವೆ. ಬೀಳಗಿ ತಾಲ್ಲೂಕಿನ ರೊಳ್ಳಿಯಲ್ಲಿ ಆಲಮಟ್ಟಿ ಡ್ಯಾಂನ ನೀರಿನಲ್ಲಿ ಊರು ಮನೆ ಜಮೀನು ಮುಳುಗಡೆಯಾದ ದುಃಖವನ್ನು ಕೇಳುವವರ ಎದೆಕಲಕುವಂತೆ ಹಾಡಾಗಿ ಹಾಡಿದ್ದರು.

ಮೊಹರಂ ಹಾಡುಪರಂಪರೆ, ಭಾರತೀಯ ಗುರುಪರಂಪರೆಯ ಭಾಗವಾಗಿದೆ. ಶಾಸ್ತ್ರೀಯ ಸಂಗೀತದಲ್ಲಿ ಇರುವಂತೆ, ಇಲ್ಲೂ ಹಾಡಿಕೆ ಕಲಿಯುವ ಶಿಷ್ಯರು ಗುರುವಿನಿಂದ ದೀಕ್ಷೆ ಪಡೆದು ಜತೆಯಲ್ಲಿ ಹಾಡುತ್ತ, ಒಂದು ದಿನ ಗುರುವಿನ ಅನುಮತಿಯಿಂದ ಸ್ವತಂತ್ರವಾಗಿ ಹಾಡುತ್ತಾರೆ; ಹಾಡಿನಲ್ಲಿ ಗುರುವಿನ ಹೆಸರನ್ನು ಸ್ಮರಿಸುತ್ತಾರೆ; ಬೇರೆ ಬೇರೆ ತಂಡಗಳು ಪರಸ್ಪರ ಎದುರಾಗಿ, ಜಿದ್ದಾಜಿದ್ದಿ ಸವಾಲ್- ಜವಾಬ್ ನಡೆಸುತ್ತಾರೆ.

ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಸವಾಲ್ ಜವಾಬ್ ಹಾಡಿಕೆಯ ಸ್ಪರ್ಧೆ ನಡೆಯುತ್ತದೆ. ಅದೊಂದು ಬೌದ್ಧಿಕ ಕದನ. ಇದರಲ್ಲಿ ಸೋತವರು ಸಾಯುವ ತನಕ ಹಾಡಿಕೆಗೆ ವಿದಾಯ ಹೇಳಿದ್ದುಂಟು; ಗೆದ್ದವರು ಪದಕ ಧರಿಸಿ, ಜನರಿಂದ ಆಹೇರಿ ಪಡೆದು, ಹೊಲವನ್ನು ಭಕ್ಷೀಸಾಗಿ ಪಡೆದದ್ದುಂಟು. ವೆಂಕಟಬೇನೂರಿನ (ಕಲಬುರ್ಗಿ) ಕಾಕಿಪೀರಾ, ಕದರಮಂಡಲಗಿಯ (ಬ್ಯಾಡಗಿ) ಅಲ್ಲಾಭಕ್ಷ್, ಹುಲಕುಂದದ (ರಾಮದುರ್ಗ) ಭೀಮಕವಿ, ನಿಡಗುಂದದ (ಚಿಂಚೋಳಿ) ಕೆರೂರ ನದಾಫಸಾಬ್ (ಬದಾಮಿ)ಬಸವಂತರಾವ್, ಗೋಕಾಕದ ಭರಮಣ್ಣ ಬೂಶಿ, ಸತ್ತೂರಿನ ಇಮಾಂಸಾಬ್ ಪ್ರಸಿದ್ಧ ಶಾಹಿರರು. ಇಂಡಿ, ಸೇಡಂ, ಬೀಳಗಿ ಭಾಗದಲ್ಲಿ ಮಹಿಳೆಯರು ಗುಂಪಾಗಿ ಕುಳಿತು ಶೋಕಗೀತೆಗಳನ್ನು ಹಾಡುತ್ತಾರೆ. ಈ ಗೀತೆಗಳ ವಸ್ತು, ಅಸಘರನೆಂಬ ಕೂಸಿನ ಸಾವು, ಅಭಿಮನ್ಯುವಿನ ಹಾಗೆ ಚಿಕ್ಕ ಹುಡುಗನಾದ ಕಾಸೀಮ್‌ನನ್ನು ರಣರಂಗಕ್ಕೆ ಕಳಿಸಿಕೊಡುವುದು, ಕಾಸೀಮನ ಮರಣ, ಅವನ ಎಳೆಹೆಂಡತಿ ಸಕೀನಾಳನ್ನು ವಿಧವೆಯಾಗಿಸುವುದು, ಅವಳ ಪ್ರಲಾಪ ಇತ್ಯಾದಿ.

ಮೊಹರಂ ಹಾಡುಗಾರರು ಇಸ್ಲಾಮಿನ ಚರಿತ್ರೆ ಪುರಾಣಗಳಂತೆ, ಮಹಾಭಾರತ, ರಾಮಾಯಣ, ಶಿವಪುರಾಣಗಳಲ್ಲಿಯೂ ಪರಿಣತಿ ಪಡೆದಿದ್ದಾರೆ. ಅವರ ಹಾಡುಗಳಲ್ಲಿ ಯಜೀದ್- ಹುಸೇನರ ಕದನದ ಚರಿತ್ರೆಯು ದೇಸಿ ಪುರಾಣಗಳ ಜತೆ ಬೆರೆತುಬಿಡುತ್ತದೆ. ಬಾಗೇವಾಡಿ ತಾಲ್ಲೂಕಿನಲ್ಲಿ ಪೈಗಂಬರನ್ನು ರಾಮನನ್ನಾಗಿ, ಬೀಬೀ ಫಾತಿಮಾರನ್ನು ಸೀತೆಯನ್ನಾಗಿ, ಹಸನ-ಹುಸೇನರನ್ನು ಲವ-ಕುಶರನ್ನಾಗಿ ಸಮೀಕರಿಸಿ ಹಾಡುತ್ತಾರೆ. ಈ ಹಾಡುಗಳಲ್ಲಿ ಪೈಗಂಬರರನ್ನು ಶರಣ ಎಂದೇ ಕರೆಯಲಾಗಿದೆ. ಬಸವಣ್ಣ, ಮಹದೇವ ಹಾಗೂ ಪೈಗಂಬರ್ ಒಟ್ಟಿಗೇ ಇರುವ ಮಂತ್ರವನ್ನು ಅನೇಕ ಮೊಹರಂ ಮಸೀದಿಯ ತಲೆಬಾಗಿಲಲ್ಲಿ ಕೆತ್ತಲಾಗಿದೆ. ಇಲ್ಲಿರುವ ತತ್ವವೆಂದರೆ, ಲೋಕಹಿತ ಬಯಸುವ ಲೋಕದ ಸಮಸ್ತ ದಾರ್ಶನಿಕರೂ ದೈವಗಳೂ ಮೂಲತಃ ಒಂದೇ ಎಂಬುದು.

ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಬಹುತ್ವ ಪ್ರಜ್ಞೆ. ಈ ಪ್ರಜ್ಞೆಯು ಪುರಾಣ ಮತ್ತು ಇತಿಹಾಸವನ್ನು ಬೆರೆಸುತ್ತದೆ; ಬೇರೆ ಬೇರೆ ಮತಧರ್ಮದ ಕಥನಗಳಲ್ಲಿರುವ ಸಮಾನ ಅಂಶಗಳನ್ನು ಒಂದೆಡೆ ಜೋಡಿಸುತ್ತದೆ. ಇದು ಭಾರತದ ನಿಜವಾದ ಸಾಂಸ್ಕೃತಿಕ ಪ್ರತಿಭೆ. ಮಧ್ಯಕಾಲೀನ ದೊರೆಗಳು ರಾಜ್ಯವಿಸ್ತರಣೆಗಾಗಿ ಮಾಡಿದ ರಾಜಕೀಯ ಯುದ್ಧಗಳನ್ನೇ ಇರಿಸಿಕೊಂಡು ಚರಿತ್ರೆ ಮತ್ತು ವರ್ತ ಮಾನವನ್ನು ನೋಡುವವರಿಗೆ, ಜನ ಕಟ್ಟುವ ಈ ಸೃಜನಶೀಲ ಪರಂಪರೆ ತಿಳಿಯುವುದಿಲ್ಲ. ಮೊಹರಂ ತಾಳಿರುವ ಬಹುರೂಪವು ಸಂಪ್ರದಾಯವಾದಿಗಳನ್ನು ಕಂಗೆಡಿಸುತ್ತದೆ.

‘ಇದೆಂತಹ ಧರ್ಮ; ಎಲ್ಲ ಕಲಬೆರಕೆಯಾಗಿದೆ’ ಎಂದವರು ಗೊಣಗುವರು. ಆದರೆ ಸಾಮಾನ್ಯ ಜನ ಧರ್ಮ, ಜಾತಿಗಳನ್ನು ಮೀರಿ ಸೃಷ್ಟಿಸಿಕೊಂಡಿರುವ ಅಸ್ಮಿತೆಯಾಗಿ ಮೊಹರಂ ರೂಪುಗೊಂಡಿದೆ. ‘ಪ್ರಧಾನ’ ಧರ್ಮಗಳು ಸಂಘರ್ಷಕ್ಕೆ ಕಾಲು ಕೆರೆಯುತ್ತಿವೆ; ಪರಸ್ಪರ ಸಂವಾದ ಮಾಡುವ ಬಾಗಿಲು ಕಿಟಕಿಗಳನ್ನು ಮುಚ್ಚಿಕೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ, ಧರ್ಮಗಳ ನಡುವೆ, ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಿದೆ ಎಂದು ಮೊಹರಂ ತೋರಿಸಿಕೊಡುತ್ತದೆ.

ಇದನ್ನೂ ನೋಡಿ: ನೇಹಾ ಕೊಲೆ ಪ್ರಕರಣ | ಲವ್ ಜಿಹಾದ್ : ಬಿಜೆಪಿಯ ದುರುದ್ದೇಶ ಬಯಲು

Donate Janashakthi Media

Leave a Reply

Your email address will not be published. Required fields are marked *