ಮೈಸೂರು: ನಿವೇಶನಕ್ಕೆ ಸಂಬಂಧಿಸಿದ ದಾಖಲಾತಿಗಳ ಕಡತಗಳಲ್ಲಿ 300 ಪುಟಗಳು ನಾಪತ್ತೆಯಾಗಿದ್ದು, ಇದರಿಂದಾಗಿ ಒಟ್ಟು 600 ನಿವೇಶನಗಳ ಮಾಹಿತಿ ನಾಪತ್ತೆಯಾಗಿದೆ. ಅವುಗಳ ನೈಜತೆಯನ್ನು ಲೆಕ್ಕಶಾಖೆಯಲ್ಲಿನ ದಾಖಲೆಯೊಂದಿಗೆ ಪರಿಶೀಲಿಸಲಾಗುತ್ತಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಚ್.ವಿ. ರಾಜೀವ್, ಮುಡಾ ಕಚೇರಿಯಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಮೂಲ ದಾಖಲೆಗಳ ವಿಶೇಷ ಪರಿಶೀಲನೆಯಲ್ಲಿ 300 ಪುಟಗಳು, 216 ನಿವೇಶನಗಳ ದಾಖಲೆಗಳು, ವ್ಯತ್ಯಾಸವಾಗಿರುವ ಕಡತಗಳು ನಾಪತ್ತೆಯಾಗಿದೆ. ಮೇಲ್ನೋಟಕ್ಕೆ ಸಿಎ ನಿವೇಶನ, ಮೂಲ ನಿವೇಶನ, ಬದಲಿ ನಿವೇಶನ, ಹರಾಜು ನಿವೇಶನಗಳಿಗೆ ಸಂಬಂಧಪಟ್ಟಂತ ದಾಖಲೆಗಳು ನಾಪತ್ತೆಯಾಗಿರುವುದು ಕಂಡುಬಂದಿದೆ ಎಂದು ಹೇಳಿದರು.
ಮನೆಯವರೇ ಕಳ್ಳರು
ಮನೆಯ ಒಳಗಡೆ ಕೆಲಸ ಮಾಡುವವರೇ ಕಳ್ಳರಾಗಿರುವುದು ಕಂಡುಬಂದಿದೆ. ಇಲ್ಲಿ ಕೆಲಸ ಮಾಡುವವರೇ ಹೊರಗಿನವರಿಗೆ ಕೈ ಜೋಡಿಸಿರುವ ಕಾರಣ ಸುಲಭವಾಗಿ ಇಂತಹ ಅಕ್ರಮಗಳನ್ನು ಮಾಡಲಾಗಿದೆ ಎಂದರು. ಪರಿಶೀಲನೆಗಾಗಿ ಮುಡಾ ಕಾರ್ಯದರ್ಶಿ ಡಾ.ಎನ್.ಸಿ. ವೆಂಕಟರಾಜು ನೇತೃತ್ವದಲ್ಲಿ ಐದು ಜನ ವಿಶೇಷ ತಹಸಿಲ್ದಾರ್, ಒಬ್ಬರು ಸಹಾಯಕ ಕಾರ್ಯದರ್ಶಿ ಆರು ತಂಡಗಳನ್ನು ರಚಿಸಲಾಗಿತ್ತು.
ಈ ತಂಡವು ಎರಡು ದಿನಗಳ ಕಾಲ ನಡೆಸಿದ ವಿಶೇಷ ದಾಖಲೆಗಳ ಪರಿಶೀಲನಾ ವೇಳೆಯಲ್ಲಿ ಸದ್ಯಕ್ಕೆ 300 ಪುಟಗಳು ಕಾಣೆಯಾಗಿವೆ. ಹಾಗಾಗಿ, ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ವರದಿ ಬಂದ ಬಳಿಕ ಸೂಕ್ತ ತನಿಖೆ ನಡೆಸುವ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಸಿಐಡಿಯಲ್ಲಿ 13 ಪ್ರಕರಣಗಳು ದೃಢ:
2005ರಲ್ಲಿ ಪ್ರಾಧಿಕಾರದಿಂದ ಮಂಜೂರಾದ ಆಶಾ ಮಂದಿರ ಯೋಜನೆಯಡಿ ಮಂಜೂರಾದ ನಿವೇಶನಗಳಿಗೆ ಸಂಬಂಧಿಸಿದಂತೆ ಅಕ್ರಮಗಳ ಬಗ್ಗೆ ಸಿಐಡಿ ತನಿಖೆಗೆ ವಹಿಸಲಾಗಿತ್ತು. 142 ಪ್ರಕರಣಗಳಲ್ಲಿ 13 ಪ್ರಕರಣಗಳು ಮಾತ್ರ ದೃಢವಾಗಿತ್ತು. ಸಿಐಡಿಯು ಕೇಳಿದ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗದ ಕಾರಣ ಹಲವು ಪ್ರಕರಣಗಳು ಮುಕ್ತಾಯವಾಯಿತು. ಹೀಗಾಗಿಯೇ, ಈ ಬಾರಿ ದಾಖಲೆಗಳನ್ನು ಗಣಕೀಕರಣ ಮಾಡುವ ಜತೆಗೆ ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ತನಿಖೆಯನ್ನು ಯಾವ ಏಜೆನ್ಸಿಯಿಂದ ನಡೆಸಬಹುದು ಎಂದು ನಿರ್ಧಾರವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಡಾ ಸದಸ್ಯರಾದ ಎನ್. ಲಕ್ಷ್ಮೀದೇವಿ, ಜಿ. ಲಿಂಗಯ್ಯ, ಎಂ.ಎಸ್. ನವೀನ್‌ಕುಮಾರ್, ಕೆ. ಮಾದೇಶ್, ಕಾರ್ಯದರ್ಶಿ ಡಾ.ಎನ್.ಸಿ. ವೆಂಕಟರಾಜು ಇದ್ದರು.