ಬಾಗೇಪಲ್ಲಿ : ‘ಒಂದು ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿರುವುದು ರಾಜಕೀಯ ಜೀವನದಲ್ಲಿ ನಾನು ಮಾಡಿದ ಮೊದಲ ತಪ್ಪು’ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಅವರು ಬಹಿರಂಗವಾಗಿ ಪಶ್ಚಾತ್ತಾಪಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ
ಪುರಸಭಾ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜಕೀಯದಲ್ಲಿ ನಾನು ಹಣ ಮಾಡಬೇಕು ಎಂದೇನಿಲ್ಲ. ಆ ವಿಷಯದಲ್ಲಿ ನಾನು ಇಂದಿಗೂ ಪರಿಶುದ್ಧನಾಗಿದ್ದೇನೆ. ರಾಜಕೀಯ ಜೀವನದಲ್ಲಿ ನಾನು ಮಾಡಿದ ಒಂದೇ ಒಂದು ತಪ್ಪು ಎಂದರೆ, ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷಕ್ಕೆ ಸೇರಿರುವುದು. ಅದರ ಅರಿವು ಈಗ ಆಗುತ್ತಿದೆ. ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಡೆಯವರೇ ನನ್ನನ್ನು ಪಕ್ಷದಿಂದ ಹೊರಗೆ ಕಳುಹಿಸಿದರು’ ಎಂದು ಸುಬ್ಬಾರೆಡ್ಡಿ ಅವರತ್ತ ತಿರುಗಿ ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ನಾಗರಾಜ್ ಅವರು ಮೇ 2018 ರ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಜುಲೈ 2019 ರಲ್ಲಿ, ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದರು ಮತ್ತು ಕೆಲವು ತಿಂಗಳ ನಂತರ ಬಿಜೆಪಿಗೆ ಸೇರಿದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ 11,486 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದಾಗ್ಯೂ, ಅವರು 2020 ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾದರು ಮತ್ತು ನಂತರ ಸಂಪುಟಕ್ಕೆ ಸೇರ್ಪಡೆಯಾದರು.
ಬಸವರಾಜ ಬೊಮ್ಮಾಯಿ ಸಂಪುಟದ ಕೆಲವು ‘ವಲಸಿಗ ಸಚಿವರು’ ಶೀಘ್ರದಲ್ಲೇ ಬಿಜೆಪಿ ತೊರೆಯಲಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ನಾಗರಾಜ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.