ಮೈಸೂರು: ಸರ್ಕಾರ ಘೋಷಣೆ ಮಾಡಿರುವ ಎಂ.ಎಸ್.ಪಿ. ಕೇವಲ ದಾಖಲೆಯಲ್ಲಿ ಮಾತ್ರ ಉಳಿದಿದ್ದು, ರೈತರಿಗೆ ತಲುಪುತ್ತಿಲ್ಲ, ಈ ಬಗ್ಗೆ ರೈತರು ಹಿಸಾಬ್ (ಲೆಕ್ಕ) ಕೇಳಿದರೆ ಸರ್ಕಾರ ಹಿಜಾಬ್ ವಿವಾದನ್ನು ಮುನ್ನಲೆಗೆ ತರುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ಯೋಗೇಂದ್ರ ಯಾದವ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿರುವ ಸಂಸದ ಪ್ರತಾಪ್ ಸಿಂಹ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಮಾಧ್ಯಮದವರೊಂದಿಗೆ ಮಾತನಾಡಿದ ಯೋಗೇಂದ್ರ ಯಾದವ್, ರೈತರು, ಸಾಮನ್ಯ ಜನರು ಹಿಸಾಬ್ (ಲೆಕ್ಕ) ಕೇಳಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಜಾಬ್ ಮುಂದೆ ತರುತ್ತಿದೆ. ಕರ್ನಾಟಕ ಮತ್ತು ದೇಶಾದ್ಯಂತ ಧರ್ಮದ ವಿಚಾರವನ್ನು ತಂದು ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿವೆ ಎಂದು ಕಿಡಿಕಾರಿದರು.
ಕಳೆದ 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಬಡ ಮುಸ್ಲಿಮ್ ಹಣ್ಣಿನ ವ್ಯಾಪಾರಿ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಜೆಎನ್ ಯುನಲ್ಲಿ ರಾಮನವಮಿಯಂದು ಮಾಂಸಾಹಾರದ ವಿಚಾರಕ್ಕೆ ಗಲಾಟೆಯೆಬ್ಬಿಸುತ್ತಾರೆ. ಮಧ್ಯಪ್ರದೇಶದ ಮಸಿದೀಯೊಂದರ ಮುಂದೆ ಧಾಂಧಲೆ ಎಬ್ಬಿಸಿ ಕಲ್ಲುತೂರಾಟ ನಡೆಸಿ ಬಾವುಟ ಹಾಕುತ್ತಾರೆ. ಇದೆಲ್ಲ ನೋಡಿದರೆ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆಮಾಚಲು ವ್ಯವಸ್ಥಿತ ಸಂಚುಗಳನ್ನು ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ರೈತರ ಆದಾತಯ ಡಬ್ಬಲ್ ಮಾಡುತ್ತೇನೆ ಎಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು 2016 ರಲ್ಲೇ ಘೋಷಣೆ ಮಾಡಿದರೂ. 2022 ಕಳೆದರೂ ರೈತರ ಆಧಾಯ ಡಬ್ಬಲ್ ಇರಲಿ, ಇದ್ದದ್ದು ಖೋತಾ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಗಿಗೆ ಸರ್ಕಾರ 3377 ರೂ. ಭತ್ತಕ್ಕೆ 1900 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದರು ಸರ್ಕಾರ ಖರೀದಿಗೆ ಮುಂಧಾಗುತ್ತಿಲ್ಲ, ಖಾಸಗೀ ಬಂಡವಾಳಗಾರರು ರಾಗಿ ಯನ್ನು 1800 ರೂ. ಭತ್ತ 1400 ರೂ.ಗೆ ಖರೀದಿ ಮಾಡುತ್ತಿದ್ದು, ಇದರಿಂದ ರೈತರಿಗರ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಯೋಗೇಂದ್ರ ಯಾದವ್ ಕಿಡಿಕಾರಿದರು.
ಇದಕ್ಕೂ ಮೊದಲು ಸಂಸದ ಪ್ರತಾಪ್ ಸಿಂಹ ಪ್ರತಿಭಟನಾನಿರತರ ಬಳಿಗೆ ಬಂದು ನಿಮ್ಮ ಮನವಿ ಏನಿದೆ ಅದನ್ನು ಪ್ರಧಾನ ಮಂತ್ರಿ ಮತ್ತು ಸಂಬಂಧ ಪಟ್ಟ ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆ ನೀಡಿದರು.
ಸಂಯುಕ್ತ ಹೋರಾಟ ಕರ್ನಾಟಕದಿಂದ ಮೈಸೂರಿನಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು ನಗರದ ಜಲದರ್ಶಿನಿ ಅತಿಥಿಗೃಹದಲ್ಲಿರುವ ಸಂಸದ ಪ್ರತಾಪ್ ಸಿಂಹ ಕಚೇರಿ ಮುಂಭಾಗ ರೈತ, ದಲಿತ, ಕಾರ್ಮಿಕ, ಮಹಿಳಾ ವಿದ್ಯಾರ್ಥಿಗಳು ಭತ್ತ, ರಾಗಿ ಸುರಿದು ಬೆಂಬಲ ಬೆಲೆ ಕೊಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಬೇಕೆಂದು ಪ್ರತಿಭಟನೆಕಾರರು ಸಂಸದ ಪ್ರತಾಪ್ ಸಿಂಹರವರಿಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ,ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರೆಡಿ, ಎಸ್.ಆರ್.ಹೀರೆಮಠ,ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷರಾದ ದೇವಿ,DSS ನ ಕೆರೆಗೋಡು ಗುರುಪ್ರಸಾದ್,ಚಾಮರಸ ಪಾಟೀಲ್, ಬೆಟ್ಟಯ್ಯಕೋಟೆ,ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯರಾದ ಟಿ.ಯಶವಂತ, ಕರ್ನಾಟಕ ಪ್ರಾಂತ ರೈತ ಸಂಘದ ಮೈಸೂರು ಜಿಲ್ಲಾ ಅಧ್ಯಕ್ಷರಾದ ಚಿಕ್ಕಣ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ‌್ಯ, ಸಮಾನವಾದಿ ಹೋರಾಟಗಾರರಾದ ಪ.ಮಲ್ಲೇಶ್,ಕಾರ್ಮಿಕ ಮುಖಂಡರಾದ ಅನಿಲ್ ಕುಮಾರ್, ಉಮಾದೇವಿ,ಅಖಿಲ ಭಾರತ ಗ್ರಾಮೀಣ ಕೃಷಿ ಕಾರ್ಮಿಕ ಸಂಘದ ಮಣಿ,ಚೌಡಳ್ಳಿ ಜವರಯ್ಯ ಮುಂತಾದವರು ವೇದಿಕೆಯಲ್ಲಿ ಇದ್ದರು.