ಎಂ.ಎಸ್.ಪಿ ಯಲ್ಲಿ ಯಾವುದೇ ಬದಲಾವಣೆ ಇಲ್ಲ – ಪ್ರಧಾನಿ ಸ್ಪಷ್ಟನೆ

ನವದೆಹಲಿ ಫೆ 08: ಕೃಷಿ ಕಾಯ್ದೆ ಬಗ್ಗೆ ರಾಜ್ಯ ಸಭೆಯಲ್ಲಿ 15 ಗಂಟೆಗಳ ಕಾಲ ಚರ್ಚೆ ನಡೆಸಬೇಕು ಎಂದು ಕೇಳಿದ್ದರು, ಅದಕ್ಕೆ ಸಭಾಪತಿಯವರು ಒಪ್ಪಿಗೆ ಸೂಚಿಸಿದ್ದರು. ಈಗ ಚರ್ಚೆ ಮುಗಿದಿದ್ದು,  ರಾಜ್ಯಸಭೆಯಲ್ಲಿ 50 ಸಂಸದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಶ್ನಾವಳಿ ಅವಧಿ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುವ ವೇಳೆ ಎಂ.ಎಸ್.ಪಿ ಯಲ್ಲಿ ಯಾವುದೆ ಬದಲಾವಣೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ರಾಜ್ಯಸಭಾ ಟಿವಿಯ ನೇರ ಪ್ರಸಾರದಲ್ಲಿ ಲಭ್ಯವಾದ ಮಾಹಿತಿ ಆಧರಿಸಿ, ಅವರು ಮಾತನಾಡಿರುವ ಹೈಲೈಟ್ಸ್ ಈ ರೀತಿ ಇದೆ.

ರಾಷ್ಟ್ರಪತಿ ಭಾಷಣದ ವೇಳೆ ಎಲ್ಲರೂ ಹಾಜರಿದ್ದರೆಂದು ನಾನು ಭಾವಿಸುತ್ತೇನೆ. ಅದು ಅತ್ಯಂತ ಶಕ್ತಿಶಾಲಿ ಭಾಷಣವಾಗಿತ್ತು. ಕೆಲವರ ಅನುಪಸ್ಥಿತಿ ಬಳಿಕವೂ ಅದು ಪರಿಣಾಮ ಬೀರಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.  ಭಾರತ ನಿಜಕ್ಕೂ ಅವಕಾಶಗಳ ನೆಲ. ಹಲವಾರು ಅವಕಾಶಗಳು ನಮ್ಮನ್ನು ಕಾಯುತ್ತಿವೆ, ಆದ್ದರಿಂದ ಯುವ, ಉತ್ಸಾಹದಿಂದ ತುಂಬಿರುವ ರಾಷ್ಟ್ರ ಮತ್ತು ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿರುವ ರಾಷ್ಟ್ರ, ಸಂಕಲ್ಪದೊಂದಿಗೆ, ಈ ಅವಕಾಶಗಳನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದು ವಿದೇಶಿ ನೇರ ಬಂಡವಾಳ ಹೂಡಿಕೆಯ ಕುರಿತು ಪ್ರಧಾನಿಯವರಿಗೆ ಇರುವ ಉತ್ಸುಕತೆಯನ್ನು ತೋರಿಸುತ್ತದೆ.

ಜಗತ್ತಿನ ಕಣ್ಣುಗಳು ಭಾರತದ ಮೇಲಿವೆ. ಭಾರತ ದೇಶದ ಮೇಲೆ ನಿರೀಕ್ಷೆಗಳಿವೆ ಮತ್ತು ನಮ್ಮ ಭೂಮಂಡಲದ ಸುಧಾರಣೆಗೆ ಭಾರತ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವಿದೆ. ಸದನದಲ್ಲಿ ಕೃಷಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಎಚ್ ಡಿ ದೇವೇಗೌಡಜೀ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ. ಅವರ ಮಾತುಗಳು ಚರ್ಚೆಗೆ ಉತ್ತಮ ದೃಷ್ಟಿಕೋನವನ್ನು ನೀಡಿವೆ. ಅವರೇ ಕೃಷಿ ಕ್ಷೇತ್ರದೊಂದಿಗೆ ಬಲವಾದ ಒಡನಾಟವನ್ನು ಹೊಂದಿದ್ದಾರೆ ಎಂದು ಮೋದಿ ಹೇಳಿದ್ದಾರೆ.  ಅವಕಾಶವಾದಿ ಜೆಡಿಎಸ್ ತನ್ನ ರಾಜಕೀಯ ಲಾಭಕ್ಕಾಗಿ ಯಾವಕಡೆ ಬೇಕಾದರೂ ವಾಲುತ್ತದೆ, ಸಂಸತ್ ಭವನದ ಸುತ್ತಲೂ ಲಕ್ಷಾಂತರ ಮಂದಿ ರೈತರು ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.  ಕೃಷಿ ಕಾಯ್ದೆ ರದ್ದು ಮಾಡಿ ಎಂದು ಹೋರಾಟ ನಡೆಸಿರುವ ರೈತರ ಮಾತಿಗೆ ಗೌರವ ಕೊಡದೆ ಈಗ ಅಧಿವೇಶನದಲ್ಲಿ ಓಲೈಕೆ ಭಾಷಣ ಮಾಡುತ್ತಿದ್ದಾರೆ ಎಂದು ಚಿಂತಕರು ಆರೋಪಿಸಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ನಮ್ಮ ಪ್ರಜಾಪ್ರಭುತ್ವ ಪಾಶ್ಚಿಮಾತ್ಯ ಸಂಸ್ಥೆಯಲ್ಲ. ಇದು ಮಾನವ ಸಂಸ್ಥೆ. ಭಾರತದ ಇತಿಹಾಸವು ಪ್ರಜಾಪ್ರಭುತ್ವ ಸಂಸ್ಥೆಗಳ ಉದಾಹರಣೆಗಳಿಂದ ತುಂಬಿದೆ. ಪ್ರಾಚೀನ ಭಾರತದಲ್ಲಿ 81 ಪ್ರಜಾಪ್ರಭುತ್ವಗಳ ಉಲ್ಲೇಖವನ್ನು ನಾವು ಕಾಣುತ್ತೇವೆ. ಭಾರತದ ರಾಷ್ಟ್ರೀಯತೆಯ ಮೇಲಿನ ದಾಳಿಯ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡುವುದು ಇಂದು ಅತ್ಯಗತ್ಯ, ಭಾರತ ಪ್ರಜಾಪ್ರಭುತ್ವದ ತಾಯಿ. ನಾವು ಈ ಪಾಠಗಳನ್ನು ಮುಂಬರುವ ಪೀಳಿಗೆಗೆ ಕಲಿಸಬೇಕಾಗಿದೆ. ಏಕೆಂದರೆ, ನಮ್ಮ ಪೂರ್ವಜರು ನಮಗೆ ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ರವಾನಿಸಿದ್ದಾರೆ. ನಾವು ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ರಕ್ಷಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ರೈತರ ಮೇಲೆ ಜಲಫಿರಂಗಿ, ಲಾಠಿ ಚಾರ್ಜ್ ಮೂಲಕ ದಾಳಿ ಮಾಡಿದ್ದು ಪ್ರಜಾಪ್ರಭುತ್ವ ವಿರೋಧಿ ಎಂದು ಕಾಣಲಿಲ್ಲವೆ?  ರೈತರು ಗಡಿಗಳತ್ತ ಬಾರದಂತೆ ರಸ್ತೆಯಲ್ಲಿ ಮೊಳೆಗಳನ್ನು ಹೊಡೆದದ್ದು,  ರಸ್ತೆಗೆ ದೊಡ್ಡದಾದ ಸಿಮೆಂಟ್ ಕಾಂಕ್ರೀಟ್ ಗೋಡೆ ನಿರ್ಮಾಣ ಮಾಡಿದ್ದು, ನೀರು, ಇಂಟರ್ನೆಟ್, ವಿದ್ಯುತ್ ಕಡಿತ ಮಾಡಿದ್ದು ಪ್ರಜಾಪ್ರಭುತ್ವ ವಿರೋಧಿ ಎಂದು ಕಾಣಲಿಲ್ಲವೆ? ಜಾಗತಿಕ ಮಟ್ಟದಲ್ಲಿ ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ ಸಿಕ್ಕು, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕಾದ ಮುಜುಗುರದ ಮಾತುಗಳನ್ನು ತಪ್ಪಿಸಲಿಕ್ಕಾಗಿ ಈಗ ಇಂತಹ ಮಾತುಗಳ್ನ್ನಾಡುತ್ತಿದ್ದಾರೆ ಎಂಬುದು ತಜ್ಞರ ಆರೋಪವಾಗಿದೆ.

ಸಣ್ಣ ರೈತರ ಜೀವನವನ್ನು ಸುಧಾರಿಸುವುದು ಅಗತ್ಯ ವಾಗಿದ್ದು, ಎನ್‌ಡಿಎಯ ಇತರ ಯೋಜನೆಗಳು ಸಹ ರೈತರಿಗೆ ಸಹಾಯ ಮಾಡುತ್ತವೆ. ಉದಾಹರಣೆಗೆ- ಪಿಎಂಜಿಎಸ್‌ವೈ. ರಸ್ತೆ ಸಂಪರ್ಕವು ಸುಧಾರಿಸಿದಾಗ ರೈತರ ಉತ್ಪನ್ನಗಳನ್ನು ದೂರದ ಸ್ಥಳಗಳಿಗೆ ತಲುಪಿಸಲು ಸಾಧ್ಯವಾಗುತ್ತದೆ. ಕಿಸಾನ್ ರೈಲಿನಂತಹ ಪ್ರಯತ್ನಗಳೂ ಇವೆ. ಸಣ್ಣ ರೈತರ ಜೀವನವನ್ನು ಸುಧಾರಿಸುವುದು ಸಮಯದ ಅಗತ್ಯವಾಗಿದೆ ಎಂದು ಮೋದಿ ಹೇಳಿದ್ಧರೆ. ಎಂಎಸ್‌ಪಿ ಇದ್ದೇ ಇರುತ್ತದೆ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕುರಿತಂತೆ ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ. ಎಂಎಸ್‌ಪಿ ಇತ್ತು, ಎಂಎಸ್‌ಪಿ ಇದೆ, ಎಂಎಸ್‌ಪಿ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ  ಪ್ರತಿಕ್ರೀಯೆ ನೀಡಿರುವ ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್  ಮೋದಿ ಅದ್ಭುತ ಭಾಷಣಕಾರರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಈಗಲೂ ಎಂ.ಎಸ್.ಪಿ ವಿಚಾರದಲ್ಲಿ ದಾರಿ ತಪ್ಪಿಸುತ್ತಿದ್ದಾರೆ.  ಡಾ.ಎಂಎಸ್. ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಕೃಷಿ ಉತ್ಪನ್ನಗಳ ಸಮಗ್ರ  ಉತ್ಪನ್ನ ವೆಚ್ಚಕ್ಕೆ ಶೆ. 50 ರಷ್ಟು ಲಾಭಾಂಶ ಸೇರಿಸಿ ನಿಗದಿಸಿದ ಬೆಂಬಲ ಬೆಲೆ ಖಾತರಿ ಪಡಿಸುವ ಮಾತುಗಳು ಇದರಲ್ಲಿ ಇಲ್ಲ  ಎಂದು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *