ಬೆಂಗಳೂರು : ಬೆಂಬಲ ಬೆಲೆ (MSP) ಒದಗಿಸಲು ಕಾನೂನು ಜಾರಿ ಮಾಡುವಂತೆ, ದೇಶದಾದ್ಯಂತ ಪ್ರತಿಭಟನಾ ರೈತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ಸು ಪಡೆಯಲು, ಲಖೀಂಪುರ್ ಖೇರಿ ರೈತರ ಹತ್ಯಾಕಾಂಡದ ಪ್ರಮುಖ ಪಿತೂರಿ ಆರೋಪಿ ಅಜಯ್ ಮಿಶ್ರಾ ರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ದೇಶದಾದ್ಯಂತ ಜುಲೈ 31 ರಂದು ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ್ದ ಕರೆಯ ಭಾಗವಾಗಿ ಇಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ರೈತರು -ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿದರು.
ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ಉಳಿಕೆ ಹಕ್ಕೊತ್ತಾಯಗಳನ್ನು ಈಡೇರಿಸಲು ಕ್ರಮ ವಹಿಸುವುದಾಗಿ ಡಿಸೆಂಬರ್ 9,2021 ರಂದು ಲಿಖಿತ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ ಭರವಸೆಗೆ ವಿರುದ್ದವಾಗಿ ನಡೆದುಕೊಳ್ಳುತ್ತಾ ರೈತ ಸಮುದಾಯಕ್ಕೆ ದ್ರೋಹ ವೆಸಗಿದೆ.ಕನಿಷ್ಠ ಬೆಂಬಲ ಬೆಲೆ ಖಾತರಿ ಸಂಬಂಧ ಸಮಿತಿ ರಚಿಸುವುದಾಗಿಯೂ ,ಆ ಸಮಿತಿಯಲ್ಲಿ ರೈತ ಪ್ರತಿನಿಧಿಗಳನ್ನು ಒಳಗೊಳ್ಳುವುದಾಗಿಯೂ ಹೇಳಿದ್ದ ಕೇಂದ್ರ ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದವರೇ ಬಹುಸಂಖ್ಯಾತರಿರುವಂತೆ ಸಮಿತಿ ರಚಿಸಿದೆ.ಲಖೀಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕಾರು ನುಗ್ಗಿಸಿ ಕೊಲೆ ಮಾಡಿರುವ ಅಪರಾಧಿಗಳನ್ನು ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರ ಗಳು ರಕ್ಷಿಸುತ್ತಿವೆ.ಈ ಹತ್ಯಾಕಾಂಡ ಸಂಚಿನ ಪ್ರಮುಖ ಸೂತ್ರಧಾರಿಯಾದ ಅಜಯ್ ಮಿಶ್ರಾ ಈಗಲೂ ಕೇಂದ್ರ ಮಂತ್ರಿಯಾಗಿ ಮುಂದುವರೆದಿದ್ದಾರೆ.ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ಹಾಕಿದ್ದ ಸುಳ್ಳು ಮೊಕದ್ದಮೆಗಳನ್ನು ವಾಪಸ್ಸು ಪಡೆಯದೇ ರೈತರಿಗೆ ಬಂಧನದ ವಾರೆಂಟ್ ಗಳನ್ನು ಹೊರಡಿಸಲಾಗುತ್ತಿದೆ. ಇಂತಹ ದ್ರೋಹದ ಧೋರಣೆಗಳನ್ನು ಕೈ ಬಿಟ್ಟು ತಾನೂ ಕೊಟ್ಟ ಭರವಸಯಂತೆ ನಡೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದೇವನೂರು ಮಹಾದೇವ ರವರ ಮೇಲೆ ಕೀಳು ಟೀಕೆಗೆ ಖಂಡನೆ.
ಆರ್ ಎಸ್ ಎಸ್ ಆಳ ಆಗಲ ಪುಸ್ತಕ ಬರೆದಿರುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ ರವರನ್ನು ಗುರಿಯಾಗಿರಿಸಿ ಬಲಪಂಥೀಯ ತೀವ್ರಗಾಮಿ ಶಕ್ತಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಕೀಳು ಮಟ್ಟದ ಟೀಕೆ-ನಿಂದನೆ ಮಾಡುತ್ತಿರುವುದನ್ನು ಧರಣಿನಿರತರು ಖಂಡಿಸಿದರು.
ದೇವನೂರು ಮಹಾದೇವ ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ಗಣ್ಯರಿಗೆ ಕೊಲೆ ಬೆದರಿಕೆ ಒಡ್ಡಿರುವುದು ವರದಿಯಾದರೂ ರಾಜ್ಯ ಸರ್ಕಾರ ಪ್ರತಿಕ್ರಿಯಿಸದೇ ಮೌನವಾಗಿದೆ. ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ರವರ ಕೊಲೆಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಕೊಲೆ ಬೆದರಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆ ಧರಣಿಯ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಟಿ ಯಶವಂತ, ರಾಜ್ಯ ರೈತ ಸಂಘದ ಕಛೇರಿ ಕಾರ್ಯದರ್ಶಿ ಪಿ ಗೋಪಾಲ್, ಜೆಸಿಟಿಯು ಸಂಚಾಲಕ ಕೆ.ವಿ.ಭಟ್, ಎಐಸಿಸಿಟಿಯು ರಾಜ್ಯ ಮುಖಂಡ ಅಪ್ಪಣ್ಣ , ಎಐಕೆಕೆಎಂಎಸ್ ನ ಶಿವಪ್ರಕಾಶ್ , ವಕೀಲರ ಸಂಘಟನೆಯ ಮೈತ್ರಿ , ವಿದ್ಯುತ್ ಬಳಕೆದಾರರ ಸಂಘದ ಜ್ಞಾನಮೂರ್ತಿ ವಹಿಸಿದ್ದರು.