ಮಂಗಳೂರು: ಉದ್ಯೋಗ ಸೃಷ್ಟಿಯ ಭರವಸೆ ನೀಡಿ ತುಳುನಾಡಿನ ಉದ್ಯೋಗ ಆಕಾಂಕ್ಷಿಗಳಿಗೆ ನಿರಾಕರಿಸುತ್ತಿರುವ, ಅಪಾರ ಜಮೀನು ಕಬಳಿಸಿಕೊಂಡಿರುವ ಬೃಹತ್ ಕೈಗಾರಿಕೆಗಳು ಪರಿಸರಪಡಿಸುತ್ತಿರುವ ಎಮ್‌ಆರ್‌ಪಿಎಲ್ ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ʻನಾಗರಿಕ ಹೋರಾಟ ಸಮಿತಿ ಜೋಕಟ್ಟೆʼ ವತಿಯಿಂದ ಪ್ರತಿಭಟನೆ ಆರಂಭವಾಗಿದೆ.
ಜೋಕಟ್ಟೆ ಗ್ರಾಮ ಪಂಚಾಯತ್ ಮುಂಭಾಗ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ‘ಮನೆ ಮನೆ ಪ್ರತಿಭಟನೆ’ಗೆ ಚಾಲನೆ ನೀಡಿ ಮಾತನಾಡಿದರು. ಅವರು, ಹಸಿರು ವಲಯ ನಿರ್ಮಿಸುವ ಸರಕಾರದ ಆದೇಶ ಧಿಕ್ಕರಿಸುತ್ತಿರುವ ಎಂಆರ್‌ಪಿಎಲ್ ಸಂಸ್ಥೆ, ಸ್ಥಳೀಯರಿಗೆ ಉದ್ಯೋಗ ನೀಡುವುದನ್ನು ನಿರಾಕರಿಸುತ್ತಿದೆ. ಸಂಸ್ಥೆಯ ಮಾರಕ ಮಾಲಿನ್ಯದಿಂದ ಜೋಕಟ್ಟೆ, ಕಳವಾರು, ಕೆಂಜಾರು, ತೋಕೂರು ಗ್ರಾಮಗಳನ್ನು ರೋಗಗ್ರಸ್ತಗೊಳಿಸಲಾಗುತ್ತಿದೆ. ಎಂಆರ್‌ಪಿಎಲ್ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಇದನ್ನು ಓದಿ: ಸ್ಥಳೀಯರಿಗೆ ಉದ್ಯೋಗ ಒದಗಿಸದ ಎಂಆರ್‌ಪಿಎಲ್ ಕಂಪನಿ ಗಡಿಪಾರು ಮಾಡಿ: ಮುನೀರ್ ಕಾಟಿಪಳ್ಳ
ಪರಿಸರವನ್ನು ನಾಶಮಾಡುತ್ತಿರುವ ಸಂಸ್ಥೆಯು, ನೆಲ ಜಲವನ್ನು ವಿಷಮಯಗೊಳಿಸಿಸುತ್ತಿದೆ. ಸಾಲದು ಎಂಬಂತೆ ಕಂಪೆನಿಯ ಸುತ್ತಲ ರಸ್ತೆ, ಚರಂಡಿಗಳನ್ನು ಬಳಕೆಗೆ ಯೋಗ್ಯವಿಲ್ಲದಂತೆ ಮಾಡಿಟ್ಟಿದೆ. ಇವೆಲ್ಲವುಗಳ ನಡುವೆ ಇಲ್ಲಿನ ಸ್ಥಳೀಯರ ವಿರೋಧಿ ನೀತಿಗಳಿಗೆ ಎಮ್‌ಆರ್‌ಪಿಎಲ್ ನಾಯಕತ್ವ ನೀಡುತ್ತಿದೆ ಎಂದು ಆರೋಪಿಸಿದರು.
62ನೇ ತೋಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಫಾರೂಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ ಎಸ್ ಬಶೀರ್, ಗ್ರಾ.ಪಂ. ಸದಸ್ಯ ಅಬೂಬಕ್ಕರ್ ಬಾವ, ಹೋರಾಟ ಸಮಿತಿ ಮುಖಂಡರುಗಳಾದ ಚಂದ್ರಶೇಖರ್, ಐತಪ್ಪ ಜೋಕಟ್ಟೆ, ಮನೋಜ್ ನಿರ್ಮುಂಜೆ, ಶೇಖರ್ ನಿರ್ಮುಂಜೆ, ಶ್ರೀನಿವಾಸ್ ಕೆಂಜಾರು, ಲಾನ್ಸಿ ಕಳವಾರು, ಇಕ್ಬಾಲ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ