ಎಂಆರ್‌ಪಿಎಲ್‌ ಸ್ಫೋಟ: ಕಂಪೆನಿ, ಜಿಲ್ಲಾಡಳಿತದ ವಿರುದ್ಧ ಸಿಪಿಐಎಂ ಆಕ್ರೋಶ

ಕಂಪೆನಿಯ ನಿರ್ಲಕ್ಷ್ಯ, ಜಿಲ್ಲಾಡಳಿತದ ಮೃದು ಧೋರಣೆ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದ ಪ್ರತಿಫಲನ: ಸಿಪಿಐಎಂ
ಮಂಗಳೂರು: ಎಂಆರ್‌ಪಿಎಲ್‌ನ ಮೂರನೇ ಹಂತದ ಘಟಕದಲ್ಲಿ ಸಂಭವಿಸಿರುವ ಸ್ಫೋಟವು ಕಂಪೆನಿಯ ನಿರ್ಲಕ್ಷ್ಯ, ದುರಹಂಕಾರದ ನಡೆ, ಜಿಲ್ಲಾಡಳಿತದ ಮೃದು ಧೋರಣೆ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದ ಪ್ರತಿಫಲನವಾಗಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ. ಎಂಆರ್‌ಪಿಎಲ್‌

ಮೂರನೇ ಹಂತದ ಕೋಕ್ ಸಲ್ಫರ್ ಘಟಕದಲ್ಲಿ ಸಂಭವಿಸಿರುವ ಸ್ಫೋಟ ಮತ್ತು ಅದರಿಂದ ಉಂಟಾಗಿರುವ ಹಾನಿ ಕಂಪೆನಿ ಹಾಗೂ ಜಿಲ್ಲಾಡಳಿತ ನೀಡುತ್ತಿರುವ ವಿವರಣೆಗಳಿಗಿಂತ ಹಲವು ಪಟ್ಟು ಗಂಭೀರವಾಗಿದೆ ಎಂದು ಸಿಪಿಐಎಂ ಹೇಳಿದೆ. ಸ್ಫೋಟದ ತೀವ್ರತೆಯನ್ನು ಎಂದಿನಂತೆ ಲಘುವಾಗಿ ಬಿಂಬಿಸಲು ಕಂಪೆನಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಪಕ್ಷ, ಘಟನೆಯ ಸಂಪೂರ್ಣ ಸತ್ಯವನ್ನು ಸಾರ್ವಜನಿಕರ ಮುಂದಿಡುವ ಅಗತ್ಯವಿದೆ ಎಂದು ಆಗ್ರಹಿಸಿದೆ.

ಎಂಆರ್‌ಪಿಎಲ್‌ ಒಳಗಡೆ ಈ ಹಿಂದೆಯೂ ಹಲವು ಅವಘಡಗಳು ಸಂಭವಿಸಿದ್ದು, ಪ್ರಾಣಹಾನಿಯೂ ಆಗಿದೆ. ಪರಿಸರ ನಿಯಮಗಳು ಮತ್ತು ಕೈಗಾರಿಕಾ ಸುರಕ್ಷತಾ ನಿಯಮಗಳನ್ನು ಕಂಪೆನಿ ನಿರಂತರವಾಗಿ ಉಲ್ಲಂಘಿಸುತ್ತಿದೆ ಎಂಬ ಆರೋಪಗಳು ಈ ಹಿಂದಿನಿಂದಲೂ ಕೇಳಿಬರುತ್ತಿವೆ. ಕಂಪೆನಿಯ ನಿರ್ಲಕ್ಷ್ಯ ಮತ್ತು ದುರಹಂಕಾರದ ನಡೆ, ನಿಯಮ ಉಲ್ಲಂಘನೆಗಳ ಕುರಿತು ಜಿಲ್ಲಾಡಳಿತ ತಳೆದಿರುವ ಮೃದು ಧೋರಣೆ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿ ನಡೆಗಳ ಒಟ್ಟು ಪರಿಣಾಮವೇ ಇಂದಿನ ಭೀಕರ ಸ್ಫೋಟಕ್ಕೆ ಕಾರಣವಾಗಿದೆ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಆರೋಪಿಸಿದೆ. ಎಂಆರ್‌ಪಿಎಲ್‌

ವಿಶೇಷವಾಗಿ ಸ್ಫೋಟ ಸಂಭವಿಸಿರುವ ಮೂರನೇ ಹಂತದ ಕೋಕ್ ಸಲ್ಫರ್ ಘಟಕವು ನಿಯಮಗಳ ಉಲ್ಲಂಘನೆಗೆ ಕುಖ್ಯಾತವಾಗಿದೆ ಎಂದು ಪಕ್ಷ ಹೇಳಿದೆ. ಕಡ್ಡಾಯ ಹಸಿರು ವಲಯವಿಲ್ಲದೆ ಕಾರ್ಯಾಚರಿಸುತ್ತಿರುವ ದೇಶದ ಏಕೈಕ ಬೃಹತ್ ಕೈಗಾರಿಕಾ ಘಟಕ ಇದಾಗಿರಬಹುದು ಎಂದು ಸಿಪಿಐಎಂ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ : ಮಂಗಳೂರು| ಎಂಆರ್‌ಪಿಎಲ್‌ನಲ್ಲಿ ಭಾರಿ ಸ್ಫೋಟ; ದಟ್ಟ ಹೊಗೆ, ಹಲವರಿಗೆ ಗಾಯ – ಸಮಗ್ರ ತನಿಖೆಗೆ ಡಿವೈಎಫ್ಐ ಒತ್ತಾಯ

ಮಂಗಳೂರು| ಎಂಆರ್‌ಪಿಎಲ್‌ನಲ್ಲಿ ಭಾರಿ ಸ್ಫೋಟ; ದಟ್ಟ ಹೊಗೆ, ಹಲವರಿಗೆ ಗಾಯ - ಸಮಗ್ರ ತನಿಖೆಗೆ ಡಿವೈಎಫ್ಐ ಒತ್ತಾಯ

ಜೋಕಟ್ಟೆ, ಕಳವಾರು ಗ್ರಾಮಗಳ ಜನರ ಸಂಕಷ್ಟ

ಈ ಘಟಕ 2014ರಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರದಿಂದಲೇ ಸುತ್ತಮುತ್ತಲಿನ ಗ್ರಾಮಸ್ಥರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಸಿಪಿಐಎಂ ಆರೋಪಿಸಿದೆ. ವಿಶೇಷವಾಗಿ ಜೋಕಟ್ಟೆ ಮತ್ತು ಕಳವಾರು ಗ್ರಾಮಗಳು ಎಂಆರ್‌ಪಿಎಲ್‌ನ ಮಾಲಿನ್ಯದಿಂದ ನರಕಸದೃಶ ಪರಿಸ್ಥಿತಿಗೆ ತಲುಪಿವೆ. ಮಾಲಿನ್ಯದ ಪರಿಣಾಮದಿಂದಾಗಿ ಈ ಪ್ರದೇಶಗಳು ಮಾರಕ ರೋಗಗಳ ಗೂಡಾಗಿವೆ ಎಂದು ಪಕ್ಷ ಹೇಳಿದೆ.

ಈ ಸಮಸ್ಯೆಗಳ ವಿರುದ್ಧ ಗ್ರಾಮಸ್ಥರು 2016ರಲ್ಲಿ ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಆರು ಅಂಶಗಳ ಆದೇಶವನ್ನು ಹೊರಡಿಸಿತ್ತು. ಆದರೆ, ಆ ಆದೇಶವನ್ನು ಎಂಆರ್‌ಪಿಎಲ್‌ ಜಾರಿಗೊಳಿಸದೆ ಗ್ರಾಮಸ್ಥರನ್ನು ಸತಾಯಿಸುತ್ತಿದೆ ಎಂದು ಸಿಪಿಐಎಂ ಆರೋಪಿಸಿದೆ. ಸಂತ್ರಸ್ತ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಜಿಲ್ಲಾಡಳಿತ ಕಂಪೆನಿಯ ಪರವಾಗಿ ಮೃದು ಧೋರಣೆ ತಾಳುತ್ತಿದೆ ಹಾಗೂ ಕಂಪೆನಿಯ ವಿರುದ್ಧ ಬಂದ ದೂರುಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಪಕ್ಷ ದೂರಿದೆ.

ಪಾರದರ್ಶಕ ತನಿಖೆಗೆ ಆಗ್ರಹ 

ಈ ಎಲ್ಲ ಬೆಳವಣಿಗೆಗಳ ಒಟ್ಟು ಪರಿಣಾಮವೇ ಈಗಿನ ಸ್ಫೋಟದ ಮೂಲಕ ಹೊರಬಂದಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ. ಸ್ಫೋಟದ ತೀವ್ರತೆ, ಕಾರಣಗಳು, ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ಕಂಪೆನಿಯ ನಿಯಮ ಉಲ್ಲಂಘನೆಗಳ ಕುರಿತು ಪಾರದರ್ಶಕ ಮತ್ತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ಸ್ಫೋಟದಿಂದ ಸುತ್ತಮುತ್ತಲಿನ ಸಾರ್ವಜನಿಕರ ಮನೆಗಳು ಹಾಗೂ ಕಟ್ಟಡಗಳಿಗೆ ಹಾನಿಯಾಗಿದ್ದರೆ, ಅದರ ನಷ್ಟವನ್ನು ಸಮರ್ಪಕವಾಗಿ ಅಂದಾಜಿಸಿ ಎಂಆರ್‌ಪಿಎಲ್‌ನಿಂದ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ. ಜನರ ಜೀವ, ಆರೋಗ್ಯ ಮತ್ತು ಸುರಕ್ಷತೆಯನ್ನು ಕಡೆಗಣಿಸಿ ಕೈಗಾರಿಕಾ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಬಾರದು ಎಂದು ಪಕ್ಷ ಹೇಳಿದೆ.

ಇದನ್ನೂ ನೋಡಿ : LIVE : SIR -ದ್ರೋಹ ಮತ್ತು ಕಣ್ಣೀರ ಕಥನ (ಪರಿಶೋಧನಾ ವರದಿ ಬಿಡುಗಡೆ) ನೇರಪ್ರಸಾರ

Donate Janashakthi Media

Leave a Reply

Your email address will not be published. Required fields are marked *