ಮಂಗಳೂರು| ಎಂಆರ್‌ಪಿಎಲ್‌ನಲ್ಲಿ ಭಾರಿ ಸ್ಫೋಟ; ದಟ್ಟ ಹೊಗೆ, ಹಲವರಿಗೆ ಗಾಯ – ಸಮಗ್ರ ತನಿಖೆಗೆ ಡಿವೈಎಫ್ಐ ಒತ್ತಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಮೀಪದ ಕುಳತ್ತೂರು-ಜೋಕಟ್ಟೆ ಬಳಿಯ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ಪಿಎಲ್‌) ಘಟಕದಲ್ಲಿ ಬುಧವಾರ ಮಧ್ಯಾಹ್ನ ಭಾರಿ ಸ್ಫೋಟ ಸಂಭವಿಸಿದ್ದು, ನಂತರ ಬೆಂಕಿ ಕಾಣಿಸಿಕೊಂಡಿದೆ. ಸ್ಫೋಟದ ತೀವ್ರತೆಗೆ ಹಲವು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ದೊಡ್ಡ ಶಬ್ದ ಕೇಳಿಸಿದ್ದು, ರಿಫೈನರಿ ಪ್ರದೇಶದಿಂದ ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಏರಿದೆ. ಘಟನೆಯ ಬಳಿಕ ಅಗ್ನಿಶಾಮಕ ದಳ ಮತ್ತು ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಮಂಗಳೂರು

ಪ್ರಾಥಮಿಕ ಮಾಹಿತಿಯಂತೆ ಎಂಆರ್‌ಪಿಎಲ್‌ನ ಸಿಎಚ್‌ಟಿ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಇದು ಹೈಡ್ರೋ ಸಲ್ಫರ್ ಸಂಸ್ಕರಣೆಗೆ ಸಂಬಂಧಿಸಿದ ಘಟಕವಾಗಿದ್ದು, ಸ್ಫೋಟದ ನಂತರ ಕೆಲಕಾಲ ದಟ್ಟ ಹೊಗೆ ಆವರಿಸಿತ್ತು. ಘಟನೆಯ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಾಯ್ಲರ್‌ ಸ್ಫೋಟದ ಸಾಧ್ಯತೆ ಸೇರಿದಂತೆ ವಿವಿಧ ಕಾರಣಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಮಾಹಿತಿ ಹರಿದಾಡುತ್ತಿದ್ದರೂ, ಅಧಿಕಾರಿಗಳಿಂದ ಅಂತಿಮ ಕಾರಣವನ್ನು ದೃಢಪಡಿಸಲಾಗಿಲ್ಲ.

ಸ್ಫೋಟದ ಪರಿಣಾಮ ಜೋಕಟ್ಟೆ, ಸುರತ್ಕಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರು ಆತಂಕಕ್ಕೊಳಗಾಗಿದ್ದಾರೆ. ಕೆಲವು ಮನೆಗಳ ಬಾಗಿಲು, ಕಿಟಕಿ ಹಾಗೂ ಗಾಜುಗಳಿಗೆ ಹಾನಿಯಾಗಿದ್ದು, ಕಟ್ಟಡಗಳು ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿಯೂ ಸ್ಫೋಟದ ಶಬ್ದ ಕೇಳಿಸಿದ್ದು, ಆಡಳಿತ ಕಚೇರಿಯ ಕಿಟಕಿಗಳು ಕಂಪಿಸಿದ ವರದಿಯಿದೆ.

ಒಬ್ಬರಿಗೆ ಗಂಭೀರ ಗಾಯ, ಇತರರಿಗೆ ಸಣ್ಣಪುಟ್ಟ ಗಾಯ

ಸ್ಫೋಟದಲ್ಲಿ ರಾಜೇಶ್ ಬ್ಯಾಪ್ಟಿಸ್ಟ್ ಎಂಬ ವ್ಯಕ್ತಿಗೆ ಸುಮಾರು ಶೇ.35ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಪ್ರಕಾರ ಅವರು ಅಪಾಯದಿಂದ ಪಾರಾಗಿದ್ದಾರೆ. ಸಮೀಪದ ಕಚೇರಿಯಲ್ಲಿದ್ದ ಇನ್ನೂ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಮತ್ತು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಎಂಆರ್‌ಪಿಎಲ್‌ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿಸಿದೆ.

ಘಟನೆಯ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅಗ್ನಿಶಾಮಕ ವಾಹನಗಳು ಮತ್ತು ತುರ್ತು ಸೇವಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಮುನ್ನೆಚ್ಚರಿಕೆಯಾಗಿ ಸ್ಥಳೀಯ ಆಸ್ಪತ್ರೆಗಳಿಗೂ ಸಿದ್ಧವಾಗಿರಲು ಸೂಚಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರಮುಖ ವ್ಯವಸ್ಥೆಗಳನ್ನೂ ಪರಿಶೀಲಿಸಲಾಗುತ್ತಿದೆ.

ಎಂಆರ್‌ಪಿಎಲ್‌ ವಿರುದ್ಧ ಡಿವೈಎಫ್‌ಐ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಕಾರ್ಖಾನೆಯಿಂದ ಉಂಟಾಗುತ್ತಿರುವ ಅಪಾಯಗಳು, ಪರಿಸರದ ಮೇಲಿನ ಪರಿಣಾಮ ಹಾಗೂ ಜನರ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಕುರಿತು ಡಿವೈಎಫ್‌ಐ ಹಲವು ಬಾರಿ ಎಚ್ಚರಿಸಿದೆ. ಜನರ ಆತಂಕಗಳನ್ನು ಆಲಿಸಿ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಬೇಕು, ಕೈಗಾರಿಕಾ ಚಟುವಟಿಕೆಗಳ ಪರಿಣಾಮವನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದೆ.

ಆದರೆ ಜನರ ಎಚ್ಚರಿಕೆಗಳಿಗೆ ಬೆಲೆ ನೀಡದಿದ್ದರೆ ಅದರ ಬೆಲೆ ಯಾರು ಕಟ್ಟಬೇಕು? ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಲೇ ಇಂತಹ ಅಪಾಯಗಳು ಎದುರಾಗುತ್ತಿವೆ ಎಂಬ ಆರೋಪಗಳಿದ್ದರೆ, ಅದನ್ನು ಗಂಭೀರವಾಗಿ ತನಿಖೆ ಮಾಡಬೇಕು. ಮುನ್ನೆಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲವೇ? ಸುರಕ್ಷತಾ ನಿಯಮಗಳು ಸಮರ್ಪಕವಾಗಿ ಪಾಲನೆಯಾಗುತ್ತಿವೆಯೇ? ಜನರ ಆರೋಗ್ಯ ಮತ್ತು ಪರಿಸರದ ಮೇಲೆ ಎಂಆರ್‌ಪಿಎಲ್‌ ಪರಿಣಾಮದ ಸಮಗ್ರ ಪರಿಶೀಲನೆ ನಡೆದಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಉತ್ತರ ನೀಡಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಮಂಗಳೂರು

ಇದನ್ನೂ ನೋಡಿ : ಪರಿಸರಕ್ಕೆ ಹಾನಿ : ಎಂಆರ್‌ಪಿಎಲ್‌ ವಿರುದ್ಧ ಪ್ರತಿಭಟನೆ

 ಸಮಗ್ರ ತನಿಖೆಗೆ ಡಿವೈಎಫ್ಐ ಒತ್ತಾಯ

ಮಂಗಳೂರಿನ ಎಂ ಆರ್ ಪಿ ಎಲ್ ಕೋಕ್ ಸಲ್ಫರ್ ಘಟಕದ ಸಿ ಎಸ್ ಟಿ ಮೂರನೇ ಪ್ಲಾಂಟ್ ನಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು ಇದರಿಂದ ಎಂ ಆರ್ ಪಿ ಎಲ್ ಸುತ್ತಮುತ್ತಲು ವಾಸಿಸುತ್ತಿರುವ ಜನತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಎಂ ಆರ್ ಪಿ ಎಲ್ ಆಸುಪಾಸಿನ ಸುಮಾರು 3 ಕಿಲೋಮೀಟರ್ ವಿಸ್ತೀರ್ಣದಲ್ಲಿ ಇರುವಂತಹ ಕಟ್ಟಡ ಮನೆಗಳಿಗೆ ಹಾನಿಯಾಗಿದ್ದು ಈ ಹಾನಿಯು ಈ ಸ್ಪೋಟದ ಅಗಾದತೆಯನ್ನು ತಿಳಿಸುತ್ತದೆ.

ಎಂಆರ್‌ಪಿಎಲ್ ನ ವಿಸ್ತರಿತ ಯೋಜನೆಯದ ಕೋಕ್ ಸಲ್ಫರ್ ಘಟಕವು ಆರಂಭಗೊಂಡ ಸಂದರ್ಭದಲ್ಲಿಯೇ ಡಿ ವೈ ಎಫ್ ಐ ಇದನ್ನು ವಿರೋಧಿಸಿದ್ದು ಮತ್ತು ಇದರ ಅಪಾಯದ ಮುನ್ಸೂಚನೆಯನ್ನು ಕೂಡ ನೀಡಿತ್ತು.ಆದರೆ ಸರಕಾರವು ಈವರೆಗೂ ಈ ಕುರಿತು ವಹಿಸಿರುವ ಮೌನ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಡಿವೖಎಫ್ಐ ಆರೋಪಿಸಿದೆ.

ಯಾವುದೇ ಅಪಾಯಕಾರಿ ಕೖಗಾರಿಕೆಗಳು ಸ್ಥಾಪನೆಯಾಗುವಾಗ ಸರಕಾರವು ಅಪಾಯದ ಮೌಲ್ಯ ಮಾಪನ ನಡೆಸಬೇಕು.ಅನ್ವಯಿಸುವ ಕೈಗಾರಿಕೆಗಳಲ್ಲಿ ಅಪಾಯಕಾರಿ ರಾಸಾಯನಿಕಗಳ ಸಂಗ್ರಹ, ಬಳಕೆ ಮತ್ತು ನಿರ್ವಹಣೆಗೆ ನಿರ್ದಿಷ್ಟ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ತೀವ್ರ ನಿಗಾ ವ್ಯವಸ್ಥೆಯು ಆ ಕೖಗಾರಿಕಾ ವಲಯದ ಒಳಗಡೆ ಇರುವಂತೆ ನೋಡಿಕೊಳ್ಳಬೇಕು ಇಂತಹ ಪ್ರಾಮುಖ್ಯ ಅಂಶಗಳನ್ನು ಸರಕಾರವು ಕಡೆಗಣೆಸಿರುವುದು ಮತ್ತು ಈ ಕೖಗಾರಿಕಾ ವಲಯದಲ್ಲಿ ಸಣ್ಣ ಪ್ರಮಾಣದ ಅನೇಕ ಸ್ಪೋಟಗಳು ಸಂಭವಿಸಿದರೂ ಸ್ಥಳೀಯಾಡಳಿತವು ಕೂಡ ಗಮನ ಹರಿಸದೇ ಇರುವುದು ಈ ದುರಂತಕ್ಕೆ ಈ ದುರಂತಕ್ಕೆ ಕಾರಣವಾಗಿದೆ.

ಈ ಎಂಆರ್ ಪಿ ಎಲ್ ನಂತಹ ಕಂಪೆನಿಯಲ್ಲಿ ಆಗಿರುವ ದುರಂತಕ್ಕೆ ಆ ಸಂಸ್ಥೆಯನ್ನು ಹೊಣೆಗಾರನನ್ನಾಗಿಸಿ ಕೇವಲ ಇಲಾಖೆಯ ಕ್ರಮವಲ್ಲದೆ ನಿರ್ಲಕ್ಷತೆಗೆ ಸಂಭಂದಿಸಿ ಕ್ರಿಮಿನಲ್ ಪ್ರಕರಣದ ಜೊತೆಗೆ ಪರಿಸರ ಹಾನಿ ಮತ್ತು ಜೀವ ಹಾನಿಗೆ ಮತ್ತು ಕಟ್ಟಡ, ಮನೆಗಳ ಹಾನಿಗೆ ನಷ್ಟ ಭರ್ತಿಯನ್ನು ಕಂಪನಿಯು ನೀಡುವಂತೆ ಸ್ಥಳೀಯ ಆಡಳಿತ ಮತ್ತು ಸರಕಾರಗಳೂ ಕ್ರಮ ಕೖಗೊಳ್ಳಬೇಕೆಂದು ಡಿವೖಎಫ್ಐ ಒತ್ತಾಯಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಹೆದ್ದಾರಿ ಹೆಚ್ಚಿದರೂ ನಿಲ್ಲದ ಅಪಘಾತ ಸಾವು! ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 34 ಮಂದಿ ಬಲಿ

Donate Janashakthi Media

Leave a Reply

Your email address will not be published. Required fields are marked *