ಮಂಗಳೂರು: ಉದ್ಯೋಗ ಸೃಷ್ಟಿಯ ಭರವಸೆ ನೀಡಿ ತುಳುನಾಡಿನ ಅಪಾರ ಜಮೀನು ಕಬಳಿಸಿಕೊಂಡಿರುವ ಬೃಹತ್ ಕೈಗಾರಿಕೆಗಳು ಪರಿಸರವನ್ನು ಎಗ್ಗಿಲ್ಲದೆ ನಾಶಪಡಿಸಿದೆ. ನೆಲ ಜಲವನ್ನು ವಿಷಮಯಗೊಳಿಸಿದ್ದು ಸಾಲದು ಎಂಬಂತೆ ಕಂಪೆನಿಯ ಸುತ್ತಲ ರಸ್ತೆ, ಚರಂಡಿಗಳನ್ನು ಬಳಕೆಗೆ ಆಯೋಗ್ಯ ಮಾಡಿಬಿಟ್ಟಿವೆ. ಇವೆಲ್ಲವುಗಳ ನಡುವೆ ಇಲ್ಲಿನ ಸ್ಥಳೀಯರ ವಿರೋಧಿ ನೀತಿಗಳಿಗೆ ಎಮ್‌ಆರ್‌ಪಿಎಲ್ ನಾಯಕತ್ವ ನೀಡುತ್ತಿದೆ. ಕಂಪೆನಿ ತನ್ನ ತಪ್ಪುಗಳನ್ನು ಸರಿಪಡಿಸದಿದ್ದಲ್ಲಿ ಅದನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ಕೂಳೂರು ಜೋಕಟ್ಟೆ ಎಸ್‌ಇಝಡ್ ಸಂಪರ್ಕದ ಎಮ್‌ಆರ್‌ಪಿಎಲ್ ಕಂಪೆನಿಯ ಸುಪರ್ದಿಯಲ್ಲಿರುವ ಕಾರಿಡಾರ್ ರಸ್ತೆಯ ಹೊಂಡ ಗುಂಡಿ ಮುಚ್ಚಲು, ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ರುಚಿಗೋಲ್ಡ್ ಕಂಪೆನಿ ಮುಂಭಾಗ “ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ” ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆಯನ್ನು ಉದ್ದೇಶಿಸಿ ಮುನೀರ್ ಕಾಟಿಪಳ್ಳ ಮಾತನಾಡಿದರು.
ಕೂಳೂರು, ಎಸ್‌ಇಝಡ್ ರಸ್ತೆ ಈಗ ಎಮ್‌ಆರ್‌ಪಿಎಲ್ ಅಧೀನದಲ್ಲಿ ಇದೆ. ಎಸ್‌ಇಝಡ್, ಅನಘ, ರುಚಿಗೋಲ್ಡ್, ಅದಾನಿ ವಿಲ್ಮಾ ಸಹಿತ ಹಲವು ಕೈಗಾರಿಕೆಗಳು ಈ ರಸ್ತೆಯನ್ನು ಬಳಸುತ್ತಿವೆ. ಆದರೆ ರಸ್ತೆ ಪೂರ್ತಿ ಹೊಂಡಮಯ ಆಗಿದ್ದರೂ ಕಂಪೆನಿಗಳಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇಲ್ಲಿಯ ಚರಂಡಿಗಳನ್ನು ಕಂಪೆನಿಗಳು ಅಕ್ರಮಿಸಿ ಮಣ್ಣು ತುಂಬಿಸಿದ್ದರೂ ಕೇಳುವವರಿಲ್ಲ. ಅದರಿಂದ ಕಂಪೆನಿಗಳ ಮಲಿನ ನೀರು ಆಳೆತ್ತರಕ್ಕೆ ನಿಂತು ರೋಗರೋಜಿನಗಳು ವ್ಯಾಪಕವಾಗಿ ಹರಡುತ್ತಿದೆ ಎಂದು ಆರೋಪಿಸಿದರು.
ಸಣ್ಣ ವಾಹನಗಳಲ್ಲಿ ಪ್ರಯಾಣಿಸುವ ಜನತೆ ರಸ್ತೆ ಹೊಂಡಕ್ಕೆ ಬಿದ್ದು ಕೈಕಾಲು ಮುರಿಸಿಕೊಳ್ಳುತ್ತಿದ್ದಾರೆ. ಹೊಂಡ ಗುಂಡಿ ಮುಚ್ಚಲು ಜಿಲ್ಲಾಡಳಿತ ತಕ್ಷಣ ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಸ್ಥಳೀಯ ಕಂಪೆನಿಗಳಿಗೆ ಘೆರಾವ್ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಿ ಎಸ್ ಬಶೀರ್, ತೋಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆವಿನ್, ಹೋರಾಟ ಸಮಿತಿ ಸಂಚಾಲಕ, ಗ್ರಾಮ ಪಂಚಾಯತಿ ಸದಸ್ಯ ಅಬೂಬಕ್ಕರ್ ಬಾವ, ಮಾಜಿ ಅಧ್ಯಕ್ಷ ಪ್ರೆಸಿಲ್ಲಾ ಮೊಂತೆರೊ, ಮಾಜಿ ಉಪಾಧ್ಯಕ್ಷ ಸಂಸು ಇದ್ದಿನಬ್ಬ, ಹೋರಾಟ ಸಮಿತಿಯ ಪ್ರಮುಖರಾದ ಹನೀಫ್ ಜೋಕಟ್ಟೆ, ಲಾನ್ಸಿ ಜೋಕಟ್ಟೆ, ಫಾರೂಕ್ ಕೆ ಬಿ ಎಸ್, ಇಕ್ಬಾಲ್ ಜೋಕಟ್ಟೆ, ಹಮೀದ್, ಶಂಸುದ್ದಿನ್ ಅರಿಕೆರೆ, ಇಸ್ಮಾಯಿಲ್ ಅಜಾದ್ ಮತ್ತಿತರರು ನಾಯಕತ್ವ ವಹಿಸಿದ್ದರು.