3049 ಸಿಐಎಸ್‌ಎಫ್‌ ಹುದ್ದೆಗಳ ರದ್ದತಿ: ಕೇಂದ್ರ ಗೃಹ ಸಚಿವರಿಗೆ ಸಿಪಿಐ(ಎಂ) ಸಂಸದರ ಪತ್ರ

ನವದೆಹಲಿ: ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಂರಚನೆಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗುತ್ತಿದ್ದು, ಈ ಸಂಬಂಧ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯ 3 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸಂಸದ ಡಾ. ವಿ ಶಿವದಾಸನ್ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಸಿಪಿಐ(ಎಂ) ಸಂಸದ ಡಾ. ವಿ ಶಿವದಾಸನ್

ಭದ್ರತಾ ಪಡೆಗಳ ಖಾಸಗೀಕರಣವು ದೇಶದ ನಿರುದ್ಯೋಗಿ ಯುವಕರಿಗೆ ಹಾನಿಕಾರಕ ಕ್ರಮವಾಗಿದೆ. ಭಾರತೀಯ ಖಾಸಗಿ ಭದ್ರತಾ ವಲಯವು ಕನಿಷ್ಠ ವೇತನವನ್ನೂ ನೀಡದೆ ಜನರಿಂದ ಉದ್ಯೋಗ ಪಡೆಯುತ್ತಿದೆ. ಇದರೊಂದಿಗೆ ಇದೀಗ 3049 ಸಿಐಎಸ್‌ಎಫ್ ಹುದ್ದೆಗಳನ್ನು ರದ್ದುಪಡಿಸಿರುವು ಆತಂಕಕಾರಿ ಎಂದು ತಿಳಿಸಿದ್ದಾರೆ.

ದೇಶದ ಸಶಸ್ತ್ರ ಪಡೆಗಳ ವಿಭಾಗದಲ್ಲಿ ಈಗಾಗಲೇ 1,27,000ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಹೊಂದಿವೆ. ಅವುಗಳನ್ನು ಶಾಶ್ವತ ವಿಧಾನದ ಆಧಾರದ ಮೇಲೆ ಭರ್ತಿ ಮಾಡಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳನ್ನು ರದ್ದುಗೊಳಿಸಿರುವುದು ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಲಿದೆ ಎಂದು ತಿಳಿಸಿದ್ದಾರೆ.

ಅಗ್ನಿವೀರ್‌ನಂತಹ ನೇಮಕಾತಿ ಕಾರ್ಯಕ್ರಮಗಳ ಅಡಿಯಲ್ಲಿ ಸಶಸ್ತ್ರ ಪಡೆಗಳ ಒಪ್ಪಂದದ ಜೊತೆಗೆ ಈ ಕ್ರಮವು ದೇಶದ ಯುವಕರಿಗೆ ನಿಯಮಿತ ಉದ್ಯೋಗವನ್ನು ದೂರದ ಕನಸಾಗಿಸುತ್ತದೆ. 3049 ರದ್ದುಪಡಿಸಿದ ಸಿಐಎಸ್‌ಎಫ್‌ ಹುದ್ದೆಗಳು ವಾಯುಯಾನ ಭದ್ರತಾ ಗುಂಪಿನ (ಎಎಸ್‌ಜಿ) 10 ಪ್ರತಿಶತದಷ್ಟು ಇವೆ ಎಂದು ಸಂಸದರು ಹೇಳಿದರು.

ವಿಮಾನ ನಿಲ್ದಾಣಗಳ ಭದ್ರತೆಗೆ ಸಿಐಎಸ್‌ಎಫ್‌ ರದ್ಧತಿಯಂತಹ ಕ್ರಮವು ಹಾನಿಕಾರಕ. ಹುದ್ದೆಗಳನ್ನು ರದ್ದುಗೊಳಿಸುವ ಕ್ರಮವು ಉದ್ಯೋಗಕ್ಕಾಗಿ ಹಾತೊರೆಯುವ ಯುವ ಭಾರತೀಯರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ವಿಮಾನ ಪ್ರಯಾಣವು ಹೆಚ್ಚು ಜನಪ್ರಿಯವಾಗುತ್ತಿರುವ ಮತ್ತು ಹೊಸ ವಿಮಾನ ನಿಲ್ದಾಣಗಳು ಬರುತ್ತಿರುವ ಈ ಕಾಲದಲ್ಲಿ ವಾಯುಯಾನ ಭದ್ರತೆಯನ್ನು ನಿರ್ವಹಿಸುವ ಅರೆಸೈನಿಕ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುವ ನಿರ್ಧಾರವು ನಮ್ಮ ವಿಮಾನ ನಿಲ್ದಾಣಗಳ ಸುರಕ್ಷತೆಗೆ ಹಾನಿಕಾರಕ. 3049 ಸಿಐಎಸ್‌ಎಫ್ ಹುದ್ದೆಗಳನ್ನು ರದ್ದುಗೊಳಿಸುವ ಕ್ರಮವನ್ನು ಹಿಂತೆಗೆದುಕೊಳ್ಳಲು ನೀವು ತುರ್ತು ಮಧ್ಯಸ್ಥಿಕೆ ವಹಿಸಬೇಕೆಂದು ಅಮಿತ್‌ ಶಾ ಅವರಿಗೆ ಡಾ. ವಿ ಶಿವದಾಸನ್‌ ಅವರು ಮನವಿ ಮಾಡಿದ್ದಾರೆ.

ಸಿಐಎಸ್‌ಎಫ್‌ ಹುದ್ದೆಗಳ ರದ್ದತಿಗೆ ಪ್ರಮುಖ ಕಾರಣ

ಕೇಂದ್ರ ಸರಕಾರದ ನಾಗರಿಕ ವಾಯುಯಾನ ಹಾಗೂ ಗೃಹ ಸಚಿವಾಲಯಗಳು. ನಾಗರಿಕ ವಾಯುಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) 2018-19ನೇ ಸಾಲಿನಲ್ಲಿ ಸಿದ್ಧಪಡಿಸಿದ ಈ ಜಂಟಿಯಾಗಿ ರೂಪಿಸಿದ ಈ ಕ್ರಿಯಾಯೋಜನೆಯನ್ನು ದೇಶಾದ್ಯಂತ 50 ವಿಮಾನನಿಲ್ದಾಣಗಳಲ್ಲಿ ಜಾರಿಗೆ ತರಲು ಸಿದ್ದವಾಗಿದೆ.

ಸೂಕ್ಷ್ಮ ಸಂವೇದನಾಕಾರಿಯಲ್ಲದ ಈ ಕರ್ತವ್ಯಗಳನ್ನು ಖಾಸಗಿ ಭದ್ರತಾ ಸಿಬ್ಬಂದಿಗಳು, ಕಣ್ಗಾವಲು ಹಾಗೂ ಸುರಕ್ಷತೆಗಾಗಿನ ಸ್ಮಾರ್ಟ್ ತಂತ್ರಜ್ಡಾನದ ನೆರವಿನೊಂದಿಗೆ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟು 3049 ಸಿಐಎಸ್‌ಎಫ್ ನಾಗರಿಕ ವಾಯುಯಾನ ಭದ್ರತಾ ಹುದ್ದೆಗನ್ನು ತೆರವುಗೊಳಿಸಿ, ಬದಲಿಯಾಗಿ 1924 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಹಾಗೂ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಬ್ಯಾಗೇಜ್ ಸ್ಕ್ಯಾನರ್‌ಗಳಂತಹ ಸ್ಮಾರ್ಟ್ ಕಣ್ಗಾವಲು ತಂತ್ರಜ್ಞಾನಗಳನ್ನು ಪರ್ಯಾಯವಾಗಿ ಅಳವಡಿಸಲಾಗುವುದು ಎಂದು ವಾಯುಯಾನ ಭದ್ರತಾ ನಿಯಂತ್ರಣ ಸಂಸ್ಥೆ ಬಿಸಿಎಎಸ್ ತಿಳಿಸಿದೆ.

ಖಾಸಗಿ ಭದ್ರತಾ ಸಿಬ್ಬಂದಿಯನ್ನು ದಿಲ್ಲಿ, ಮುಂಬೈ ಹಾಗೂ ಮತ್ತಿತರ ವಿಮಾನ ನಿಲ್ದಾಣಗಳಲ್ಲಿ, ಸರತಿ ಸಾಲುಗಳ ನಿರ್ವಹಣೆ, ವಿಮಾನ ನಿಲ್ದಾಣ ಸಿಬ್ಬಂದಿಗೆ ಹಾಗೂ ಪ್ರಯಾಣಿಕರಿಗೆ ಭದ್ರತಾ ನೆರವು, ಟರ್ಮಿನಲ್ ಪ್ರದೇಶದೊಳಗಿರುವ ನಿರ್ದಿಷ್ಟ ಆಗಮನ ಹಾಗೂ ನಿರ್ಗಮನ ಪಾಯಿಂಟ್‌ಗಳ ಕಾವಲು ಇತ್ಯಾದಿ ಅತಿ ಸೂಕ್ಷ್ಮವಲ್ಲದ ಕರ್ತವ್ಯಗಳಿಗೆ ನಿಯೋಜಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *