ಸುರತ್ಕಲ್: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಇಪ್ಪತ್ತು ದಿನಗಳ ಗಡುವು ಇಂದಿಗೆ(ನವೆಂಬರ್ 06) ಮುಕ್ತಾಯವಾಗಿದೆ. ಸಂಸದರು ಮತ್ತೆ ಮಾತು ತಪ್ಪಿದ್ದಾರೆ. ಟೋಲ್‌ಗೇಟ್ ಮುಚ್ಚುವ ತೀರ್ಮಾನ ವಿಧಾನಸಭೆಯಲ್ಲಿ ಪ್ರಕಟಿಸಿದ್ದ ಮುಖ್ಯಮಂತ್ರಿಗಳು ಪ್ರತಿಭಟನಾಕಾರರ ಭೇಟಿ ತಪ್ಪಿಸಲು ವಿಮಾನದ ಬದಲಿಗೆ ಕಾಪುವಿಗೆ ನೇರವಾಗಿ ಹೆಲಿಕಾಪ್ಟರ್ ನಲ್ಲಿ ಬರುತ್ತಿದ್ದಾರೆ. ಈ ವಂಚನೆಯನ್ನು ಪ್ರತಿಭಟಿಸಲು ನಾಳೆ ಧರಣಿಯಲ್ಲಿ ಕಪ್ಪು ಬಟ್ಟೆ ಧರಿಸಿ ಭಾಗವಿಸುವಂತೆ ಕರೆ ನೀಡಲಾಗಿದೆ.
ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿಯ ಹತ್ತನೇ ದಿನದ ಸಭೆಯನ್ನುದ್ದೇಶಿಸಿ ಮಾತನಾಡಿದ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಟೋಲ್‌ಗೇಟ್ ತೆರವುಗೊಳ್ಳುವವರೆಗೂ ಹಗಲು ರಾತ್ರಿ ಧರಣಿ ಮುಂದುವರಿಯುವುದು ಹಾಗೂ ಪ್ರತಿಭಟನೆಯನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಜನರನ್ನು ವಂಚಿಸಿರುವ ಅವಳಿ ಜಿಲ್ಲೆಗಳ ಬಿಜೆಪಿ ಶಾಸಕರುಗಳು ಪ್ರತಿಭಟನೆಯ ಬಿಸಿ ಎದುರಿಸಲು ಸಿದ್ದರಾಗಬೇಕೆಂದು ಮುನೀರ್ ಕಾಟಿಪಳ್ಳ ಕರೆ ನೀಡಿದರು.
ಬಿಜೆಪಿಯ ವಂಚಕ ಮುಖ ಬಯಲಾಗಿದೆ: ಎಂ ದೇವದಾಸ್
ಸತತ ಹೋರಾಟಗಳ ಹೊರತಾಗಿಯೂ ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಬಿಜೆಪಿ ಮುಂದಾಗದಿರುವುದು ಅದರ ಮೂಲ ಸ್ವಭಾವಕ್ಕೆ ಅನುಗುಣವಾಗಿಯೇ ಇದೆ. ಬಿಜೆಪಿಗೆ ಜನ ಸಾಮಾನ್ಯರ ಬೇಡಿಕೆ, ಹೋರಾಟಗಳೆಂದರೆ ಅಲರ್ಜಿ. ಶ್ರೀಮಂತ ವರ್ಗದ ಪರ ಇರುವ ಪಕ್ಷದ ಶಾಸಕ, ಸಂಸದರುಗಳು ಅಕ್ರಮ ಟೋಲ್ ಸುಲಿಗೆ ಪರ ನಿಂತಿರುವುದರಲ್ಲಿ ಅಚ್ಚರಿ ಏನಿಲ್ಲ ಎಂದು ಹಿರಿಯ ದಲಿತ ನಾಯಕ ಎಂ ದೇವದಾಸ್ ಹೇಳಿದರು.
ಮುಂದುವರೆದು ಮಾತನಾಡಿದ ಎಂ ದೇವದಾಸ್ ಅವರು, ಬಿಜೆಪಿಯ ನಿಜಗುಣ ಟೋಲ್ ಹೋರಾಟದಿಂದ ಜನರಿಗೆ ಅರ್ಥವಾಗುವಂತಾಗಿದೆ. ಇಲ್ಲಿಯವರಗೆ ಬೆಂಬಲಿಸಿದ್ದ ಜಿಲ್ಲೆಯ ಜನರು ಈಗ ಬಿಜೆಪಿ ವಿರುದ್ದ ತಿರುಗಿ ಬೀಳತೊಡಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಿನೇಶ್ ಹೆಗ್ಡೆ ಉಳೆಪಾಡಿ, ಎಂ ಜಿ ಹೆಗ್ಡೆ, ಶ್ಯಾಮ ಭಟ್ ಕಾಸರಗೋಡು, ಬಿ ಕೆ ಇಮ್ತಿಯಾಜ್, ವೈ ರಾಘವೇಂದ್ರ ರಾವ್, ದಯಾನಂದ ಶೆಟ್ಟಿ, ಅಸುಂತಾ ಡಿಸೋಜ, ಆಶಾ ಬೋಳೂರು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ರಘು ಎಕ್ಕಾರು, ಸರೋಜಿನಿ ಬಂಟ್ವಾಳ, ಮಂಜಪ್ಪ ಪುತ್ರನ್, ಸಂಕಪ್ಪ, ರಾಜೇಶ್ ಶೆಟ್ಟಿ, ಶೆರೀಫ್ ಚೊಕ್ಕಬೆಟ್ಟು, ರಾಕೇಶ್ ಕುಂದರ್, ಹರೀಶ್ ಪೇಜಾವರ, ಕೆ ಶೆರೀಫ್ ಮುಂಚೂರು, ಮಯ್ಯದ್ದಿ ಕಿನ್ನಿಗೋಳಿ, ಮೂಸಬ್ಬ ಪಕ್ಷಿಕೆರೆ ಸೇರಿದಂತೆ ವಿವಿಧ ಸಂಘಟನೆಗಳ ಹಲವಾರು ಪ್ರಮುಖರು ಉಪಸ್ಥಿತರಿದ್ದರು.