ಬೆಂಗಳೂರು : ಪ್ರತಿಷ್ಠಿತ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಣಕ್ಕಿಳಿಯಲಿದ್ದು, ಹಾಸನದಲ್ಲಿ ಹಾಲಿ ಸಂಸದ ಪ್ರಜ್ಞಲ್ ರೇವಣ್ಣ, ಕೋಲಾರದಿಂದ ಮಲ್ಲೇಶ್ ಬಾಬು ಕಣಕ್ಕಿಳಿಯಲಿದ್ದಾರೆ.
ಬೆಂಗಳೂರಿನಲ್ಲಿ ಮಾರ್ಚ್ 26 ರ ಸಂಜೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಹಿನ್ನೆಲೆಯಲ್ಲಿ ದೊರೆತ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಯಿತು.
ಪ್ರಜ್ವಲ್ ರೇವಣ್ಣ ಸ್ಪರ್ಧೆಯನ್ನು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅಂತಿಮಗೊಳಿಸಿದ್ದರು. ಮಂಡ್ಯದಿಂದ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ ಹಿಂದೆಯೇ ಖಚಿತವಾಗಿದ್ದರೂ ಅಧಿಕೃತವಾಗಿ ಪ್ರಕಟವಾಗಿರಲಿಲ್ಲ. ಇದೀಗ ಟಿಕೆಟ್ ಘೋಷಣೆ ಮಾಡಲಾಗಿದೆ.
ಮಲ್ಲೇಶ್ ಬಾಬು ಅವರು ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪೇಟೆಯಿಂದ ಕಣಕ್ಕೆ ಇಳಿದು ಕಾಂಗ್ರೆಸ್‌ನ ನಾರಾಯಣ ಸ್ವಾಮಿ ಮುಂದೆ ಸೋತಿದ್ದರು. ಪ್ರಜ್ವಲ್ ರೇವಣ್ಣ 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಈಗ ಎರಡನೇ ಬಾರಿ ಕಣಕ್ಕೆ ಇಳಿಯುತ್ತಿದ್ದಾರೆ.
ಮಂಡ್ಯದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಾಯಕರು ಯೋಚಿಸಿದ್ದರು. ಆದರೆ, ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ವರಿಷ್ಠರು ಒತ್ತಡ ಹೇರಿದ್ದರು. ತಾವು ಪ್ರತಿನಿಧಿಸುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಮುಖಂಡರ ಜತೆ ಸರಣಿ ಸಭೆಗಳನ್ನು ನಡೆಸಿದ್ದ ಕುಮಾರಸ್ವಾಮಿ, ಅವರ ಅಭಿಪ್ರಾಯ ಆಲಿಸಿದ್ದರು. ಬಳಿಕ ಸ್ಪರ್ಧೆಯ ನಿರ್ಧಾರವನ್ನು ಅಂತಿಮಗೊಳಿಸಿದರು.
ಹಾಸನದಲ್ಲಿ ಪ್ರಜ್ವಲ್ ಬದಲಿಗೆ ಬೇರೊಬ್ಬರನ್ನು ಕಣಕ್ಕಿಳಿಸಬೇಕೆಂಬ ಬೇಡಿಕೆ ಬಿಜೆಪಿಯ ಕೆಲವು ನಾಯಕರಿಂದ ಬಂದಿತ್ತು. ಆದರೆ, ಅದಕ್ಕೆ ಜೆಡಿಎಸ್ ಮಣಿದಿಲ್ಲ. ಕೋಲಾರದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಮತ್ತು ಮಲ್ಲೇಶ್ ಬಾಬು ಹೆಸರುಗಳು ಪರಿಶೀಲನೆಯಲ್ಲಿದ್ದವು. ಮಲ್ಲೇಶ್ ಬಾಬು ಅವರನ್ನೇ ಅಭ್ಯರ್ಥಿಯುನ್ನಾಗಿ ಕಣಕ್ಕಿಳಿಸುವ ತೀರ್ಮಾನವನ್ನು ಜೆಡಿಎಸ್ ಕೈಗೊಂಡಿದೆ.